Advertisement
ಮನೆಯ ಕಾಲಿಂಗ್ ಬೆಲ್ ಬಡಿದೆ. ಸ್ವಲ್ಪ ಹೊತ್ತಿನ ಹಿಂದಷ್ಟೇ ಶಿಕ್ಷಕರು ಎಲ್ಲೋ ಹೊರಗಡೆ ಹೋದರು ಎಂದರು ಮನೆ ಆಕೆ. ಸರಿ ಕಾಯುತ್ತೇನೆಂದು ಕುಳಿತೆ. ಟೇಬಲ್ ಗೆ ಒಂದು ಕಪ್ ಕಾಫಿ ಬಂದಿತ್ತು. ಕಾಫಿ ಕುಡಿಯುತ್ತಿದ್ದ ನನಗೆ ಕಣ್ಣಿಗೆ ಬಿದಿದ್ದು ಅದೊಂದು ಪುಸ್ತಕದ ಒಂದು ಘಟನೆ ಇದು.
Related Articles
Advertisement
ಬಾಗಿಲು ತೆರೆಯುತ್ತಿದ್ದಂತೆ ತಾನು ಕಾಣುತ್ತಿರುವುದು ಕನಸೋ ನನಸೋ ಆಕೆಗೆ ಅರ್ಥವಾಗುತ್ತಿಲ್ಲ. ಮಧ್ಯರಾತ್ರಿ ತನ್ನ ಬಾಗಿಲ ಮುಂದೆ ಮಗ ನಿಂತಿದ್ದಾನೆ. ಕಣ್ಣುಗಳು ಅತ್ತು ಕೆಂಪಾಗಿವೆ. ಸುಮಾರು ನಲವತ್ತು ಕಿಲೋ ಮೀಟರ್ ದೂರದ ನಗರದಲ್ಲಿದ್ದ ಮಗ. ಅದು ಬರಿಗಾಲಲ್ಲಿ ನಿಂತಿದ್ದಾನೆ. ತಾಯಿ ಹೃದಯಕ್ಕೆ ತಡೆಯಲಾಗಲಿಲ್ಲ. ಮಗನನ್ನು ಒಳಗೆ ಕರೆದು ಮಗನಲ್ಲಿ ಆತಂಕದಿಂದಲೇ ಬಂದ ಕಾರಣ ಕೇಳುತ್ತಾಳೆ.
ಅಮ್ಮ ನಾಳೆ ಫೀಸು ಕಟ್ಟಲು ಕೊನೆಯದಿನ. ಕಟ್ಟದಿದ್ದರೆ ಪರೀಕ್ಷೆ ಬರೆಯುವಂತಿಲ್ಲ. ನನ್ನಲ್ಲಿ ಹಣವಿಲ್ಲ. ನನ್ನ ವರ್ಷ ಪೂರ್ತಿ ಹಾಳಾಗುತ್ತದೆ ಎಂದು ಗೋಗರೆಯುತ್ತಾನೆ. ಆಕೆಗೆ ದಿಕ್ಕೇ ತೋಚದು. ಮನೆಯಲ್ಲಿ ನಯಾ ಪೈಸೆಯೂ ಇಲ್ಲ. ಪಕ್ಕದಲ್ಲೇ ಇದ್ದ ಶೆಟ್ರ ಮನೆಗೆ ಹೋಗುತ್ತಾಳೆ. ಜೊತೆಗೆ ಮಗನೂ ಇದ್ದಾನೆ. ಮಧ್ಯರಾತ್ರಿ ಬಾಗಿಲು ತೆರೆದ ಶೆಟ್ರಾ ಆಕೆಯ ಕಷ್ಟಕ್ಕೆ ಸ್ಪಂದಿಸುತ್ತಾರೆ. ಆಕೆಗೆ 15 ರೂಪಾಯಿ ಕೊಟ್ಟು ಕಳುಹಿಸುತ್ತಾರೆ.
ಹಣ ಸಿಕ್ಕಿದ ಖುಷಿಯಲ್ಲಿ ಮಗ ರಾತ್ರಿಯೇ ಮನೆ ಬಿಡಲು ತಯಾರಾಗುತ್ತಾನೆ. ಆತ ನಾಳೆ ಶಾಲೆಗೆ ತಲುಪಲೇಬೇಕಿತ್ತು. ಇಲ್ಲವಾದರೆ ಇದುವರೆಗೆ ಪಟ್ಟ ಶ್ರಮ ವ್ಯರ್ಥ. ಮನೆಯಿಂದ ಹೊರಡುತ್ತಾನೆ. ಮತ್ತೆ ನಡೆಯಬೇಕು.ಅದೂ ಬರಿಗಾಲಲ್ಲಿ. 11 ಗಂಟೆಗೆ ಮುಂಚೆ ಫೀಸು ಕಟ್ಟಲೇ ಬೇಕು. ಆ ಬಾಲಕ ನಡೆಯುತ್ತಿದ್ದಾನೆ. ಅದೊಂದು ದೀರ್ಘ ಹಾದಿ. ಮನಸ್ಸಿನಲ್ಲಿ ಸಾಧಿಸಬೇಕೆಂಬ ಹಟವಿದೆ. ಗುರಿ ಮುಟ್ಟುವ ಭರವಸೆಯಿದೆ. ಅಂದು ಶಾಲೆಗೆ ತಲುಪುವಾಗ ಗಂಟೆ 11 ದಾಟಿರುತ್ತದೆ.
ಸುಮಾರು 80 ಕಿಲೋ ಮೀಟರ್ ನಡೆದ ಬಾಲಕನೊಬ್ಬ ಫೀಸು ಕಟ್ಟುವ ಕೌಂಟರ್ ಮುಂದೆ ನಿಂತು ಅಂಗಲಾಚುತ್ತಿದ್ದಾನೆ. ಆದರೂ ಅಲ್ಲಿದ್ದವರ ಮನ ಕರಗದು. ಸಮಯ ಮೀರಿದ ಕಾರಣ ಹಣವನ್ನು ಸ್ವೀಕರಿಸಲು ಆಡಳಿತ ಒಪ್ಪುತ್ತಿಲ್ಲ. ಅಲ್ಲೇ ಕುಳಿತ ಆತ ಅಳುತ್ತಿದ್ದಾನೆ.
ಅವನ ಅದೃಷ್ಟವೋ ಏನೋ?… ಅದೇ ದಿನ ಶಾಲೆಗೆ ಮೇಲಧಿಕಾರಿಗಳು ಬರುತ್ತಾರೆ. ಅಳುತ್ತಿದ್ದ ಹುಡುಗನ ಕಂಡು ವಿಷಯವನ್ನು ಕೇಳುತ್ತಾರೆ. ಕಾರಣ ತಿಳಿದು ಬೇಸರಗೊಂಡ ಅವರು ಆತನ ಫೀಸು ತೆಗೆದುಕೊಳ್ಳುವಂತೆ ಸೂಚಿಸುತ್ತಾರೆ.
ಹುಡುಗ ಪರೀಕ್ಷೆ ಬರೆಯುತ್ತಾನೆ. ಫಲಿತಾಂಶವೂ ಬರುತ್ತದೆ. ಮೈಸೂರು ರಾಜ್ಯಕ್ಕೇ ಆ ಬಾಲಕ ಪ್ರಥಮ ಸ್ಥಾನ ಗಳಿಸಿದ್ದ. ಕಮರಿ ಹೋಗುತ್ತಿದ್ದ ಕುಸುಮವೊಂದು ಅರಳಿ ನಿಂತಂತೆ ಆತ ಎದ್ದು ನಿಂತಿದ್ದ. ಮುದ್ದೇನಹಳ್ಳಿಯ ಪುಟ್ಟ ಗುಡಿಸಲಿನ ಹುಡುಗನೊಬ್ಬ ಬಡತನಕ್ಕೇ ಸವಾಲೆಸೆದು ಗೆದ್ದು ಬಂದಿದ್ದ. ಅದೊಂದು ದಿನ ಎಡವಟ್ಟಾಗುತ್ತಿದ್ದರೂ ಮುಂದೆ ಆತ ಮಾತ್ರವಲ್ಲ ಪೂರ್ತಿ ದೇಶವೇ ಕಳೆದುಕೊಳ್ಳಲು ಬಹಳಷ್ಟಿತ್ತು.
ಮುಂದೆ ಆತ ನಡೆದ ಪ್ರತಿಯೊಂದು ಹೆಜ್ಜೆಯೂ ಇತಿಹಾಸ. ಪುಣೆ ಬಳಿ ಖಡಕ್ ವಾಸ್ಲಾ ಡ್ಯಾಂನ ಅಪಾಯ ತಪ್ಪಿಸಲು ಜಗತ್ತಿನ ಪ್ರಪ್ರಥಮ ಅಟೋಮೇಟಿಕ್ ಗೇಟ್ ಅಳವಡಿಸಿದ ಕೀರ್ತಿ. ಹೈದರಾಬಾದ್ ನಗರದ ಪ್ರವಾಹಕ್ಕೆ ಶಾಶ್ವತ ಪರಿಹಾರ ಒದಗಿಸಿದ ಹೆಮ್ಮೆ. ಮೈಸೂರು ಸೋಪ್ ಫ್ಯಾಕ್ಟರಿ, ಭದ್ರಾವತಿ ಉಕ್ಕು ಕಾರ್ಖಾನೆ, ಮೈಸೂರು ರೈಲ್ವೇ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಬೆಂಗಳೂರು ಯೂನಿವರ್ಸಿಟಿ, ಕನ್ನಡ ಭಾಷಾ ಪ್ರಾಧಿಕಾರ, ಮಹಾರಾಣಿ ಕಾಲೇಜು, ಹೆಚ್ ಎ ಎಲ್ ಎಂಬ ಬೃಹತ್ ವಿಮಾನ ತಯಾರಿಕಾ ಮತ್ತು ದುರಸ್ತಿ ಸಂಸ್ಥೆ ಇವೆಲ್ಲವುಗಳ ಆ ವ್ಯಕ್ತಿಯಿಂದಲೇ ಮೂಡಿ ಬಂದಿತ್ತು.
ಯುರೋಪಿನ ನಗರವೊಂದಕ್ಕೆ ಕುಡಿಯುವ ನೀರಿನ ಶಾಶ್ವತ ಪರಿಹಾರ ಸೂಚಿಸಿ ವಿಶ್ವ ಮಾನ್ಯತೆ ಪಡೆದ ಆ ವ್ಯಕ್ತಿ ಬ್ರಿಟಿಷ್ ಸರಕಾರದ ಪ್ರತಿಸ್ಠಿತ ‘ನೈಟ್’ ಬಿರುದು ಪಡೆದು ದೇಶದ ಪ್ರತಿಷ್ಠೆಯನ್ನು ಹೆಚ್ಚಿಸುತ್ತಾರೆ. ಸಮಯ ಪ್ರಜ್ಞೆಗೆ ಉದಾಹರಣೆಯಾಗಿದ್ದ ಅವರು, ತಾನು ಅಲಂಕರಿಸಿದ ಹುದ್ದೆಗಳಿಗೆ ಗೌರವ ತಂದುಕೊಟ್ಟವರು.
ಮೇಜಿನ ಮೇಲೆ ಉರಿಯುತ್ತಿದ್ದ ಮೇಣದ ಬತ್ತಿಯನ್ನು, ಸರಕಾರದ ಕೆಲಸ ಮುಗಿಯುತ್ತಿದ್ದಂತೆ ಆರಿಸಿ, ತನ್ನ ಸ್ವಂತ ಹಣದಿಂದ ಖರೀದಿಸಿದ ಮೇಣದ ಬತ್ತಿಯನ್ನು ಉರಿಸುತ್ತಿದ್ದ ಅವರ ಸರಿಸಾಟಿಯಾದ ವ್ಯಕ್ತಿತ್ವ ಮತ್ತೂಂದು ಇರದು. ಭಾರತದ ಪರಮೋತ್ಛ ಪ್ರಶಸ್ತಿ ಭಾರತ ರತ್ನ ಪಡೆದ ಆ ವ್ಯಕ್ತಿಯೇ ನಮ್ಮೆಲ್ಲರ ಪ್ರೀತಿಯ ಸರ್ ಎಂ.ವಿ. ಎಂದೇ ಖ್ಯಾತರಾದ ಸರ್ ಮೋಕ್ಷ ಗುಂಡಂ ವಿಶ್ವೇಶ್ವರಯ್ಯ. ಇಂದಿನ ಯುವ ಪೀಳಿಗೆಗೆ ಇಂತಹ ಮಹಾನ್ ವ್ಯಕ್ತಿ, ಅವರ ವ್ಯಕ್ತಿತ್ವ ಸ್ಫೂರ್ತಿಯಾಗಲಿ.
-ಸುಜಯ ಶೆಟ್ಟಿ
ಡಾ| ಬಿ.ಬಿ. ಹೆಗ್ಡೆ ಕಾಲೇಜು ಕುಂದಾಪುರ