Advertisement

ಅಪ್ಪನಿಗೊಂದು ಪತ್ರ.

02:54 PM Jun 16, 2018 | |

ನನ್ನೊಲವಿನ ಅಪ್ಪಾ.
ಚೆನ್ನಾಗಿದ್ದೀರಾ ಸ್ವರ್ಗದಲ್ಲಿ. ಅಲ್ಲಿಯೂ ನಾವೆಲ್ಕ ಜತೆಗಿಲ್ಲವೆಂದು ಬೇಸರದಲ್ಲೇ ಇದ್ದೀರಾ ಹೇಗೆ? ನಾವು ಮಾತ್ರ ನಿಮ್ಮ‌ನೆನಪಿನಲ್ಲೇ ಮುಳುಗಿರುವುದು ಸತ್ಯ. ಅದೆಂತಹ ತ್ಯಾಗ ನಿಮ್ಮದು. ಅಂದು ಚಿಕ್ಕ ಪ್ರಾಯದಲ್ಲಿ ಅದೆಷ್ಟು ಕೀಟಲೆ ಕೊಟ್ಟಿದ್ದೆವು. ಈಗ ಅಂದು‌ ಮಾಡಿದ ಹಟಮಾರಿ ಚಟುವಟಿಕೆಗಳು ನೆನಪಾಗಿ ಅಳು ಬರುತ್ತದೆ. ನಮಗೆ ಗೊತ್ತಿತ್ತು ಅಮ್ಮನ ಸರವನ್ನು ಅಡವಿಟ್ಟು ನಮ್ಮ ಕಾಲೇಜು ಫೀಸು ತುಂಬಿದ್ದು. ಆಗ ನಮಗೆಲ್ಲಿ ನಿಮ್ಮ ಕಷ್ಟದ ಪರಿವೆ.ದೊಡ್ಡಕ್ಕನ ಮದುವೆ ಮಾಡಿಸಲು ನೀವು ಪಟ್ಟ ಶ್ರಮ .ಆ ಗಲಾಟೆ ಗಂಡಿನ ಕಡೆಯವರದ್ದು ಉಂಟಾದಾಗ ಮಾನ ಮರ್ಯಾದೆ ಹೋಗುವ ಹಾಗೆ ವರ್ತಿಸಿದ ಜನರನ್ನು ಎದುರಿಸಿ ಕೊನೆಗೂ ಸಂಧಾನ ಮುರಿದಾಗ ಹೃದಯಘಾತವಾಗುವಷ್ಟರ ಮಟ್ಟಿಗೆ ಹೋಗಿದ್ದು, ಕೊನೆಗೂ ಬಚಾವ್ ಆಗಿದ್ದು ನೆನೆದರೆ ಕಣ್ಣಲ್ಲಿ ನೀರಲ್ಲ ರಕ್ತವೇ ಬರುತ್ತದೆ.
ಅದೆಷ್ಟು ಬಾರಿ ತೋಟಕ್ಕೆ ಬರ ಬಂದು ದೀರ್ಘ ಸಾಲ ಮಾಡುವ ಪರಿಸ್ಥಿತಿ ಬಂದರೂ ನಮ್ಮ ಬಟ್ಡೆ ಬರೆ ಶಾಲಾ ವಿದ್ಯಾಭ್ಯಾಸ ಯಾವುದಕ್ಕೂ ಕೊರತೆ ಆಗದಂತೆ ನೋಡಿಕೊಂಡ  ನಿಮ್ಮ ತ್ಯಾಗಕ್ಕೆ ಬೇರೆ ಉಪಮೆ ಸಿಗಲಾರದೆಂದು ಕಾಣುತ್ತದೆ.

Advertisement

ದಿನಾ ಉತ್ತಮ ಊಟ  ತಿಂಡಿ ಕೊಡಿಸುತ್ತಿದ್ದ ನೀವು ದಿನ ನಿತ್ಯ ಹಣ್ಣು ಹಂಪಲು ಸಹಿತ ನಮ್ಮ ಖುಷಿಗೆ ಸೂತ್ರದಾರರಾಗಿದ್ದಿರಲ್ಲ. ಒಂದು ಸಣ್ಣ ತುಂಡು ಹಣ್ಣನ್ನೂ ನೀವು ತಿಂದಿದ್ದು ನಾವು ನೋಡಿಲ್ಲ. ಅದೊಂದು ದಿನ ತಮ್ಮ ಕಾಲಜಾರಿ ಬಿದ್ದಾಗ ಅವನ ಮೂಳೆ ಮುರಿದು ನಡೆಯಲಾರದ ಸ್ಥಿತಿ ಬಂದಾಗ ಮೂರುಚಕ್ರದ ಗಾಡಿ ಊರುಗೋಲು ಇತ್ಯಾದಿಗಳನ್ನು ಕಷ್ಟವಿದ್ದರೂ ತಂದು ಕೊಟ್ಟುದಲ್ಲದೆ ದಿನಾ ಅವನ ಸಂಗಡ ಶಾಲೆ ತನಕ ಹೋಗುತ್ತಿದ್ದಿರಲ್ಲ. ನೀವು ದೇವರಪ್ಪಾ.

ಎರಡನೆಯ ಅಕ್ಕ ಯಾರೋ ಪರಜಾತಿಯವನೊಡನೆ ಪ್ರೇಮಂಕುರವಾಗಿ ಮದುವೆಯಾಗುವ ಸನ್ನಾಹದಲ್ಲಿದ್ದಾಗ ಖಂಡ ತುಂಡವಾಗಿ ಖಂಡಿಸಿ ನೀತಿ ಬೋಧಿಸಿದ ಆ ರೌದ್ರಾವತಾರದ ಪರಿಚಯವನ್ನೂ ಮಾಡಿಸಿದ ಮಹಾ ಮಹಿಮ ನೀವು ಒಂದು ಒಳ್ಳೆಯ ವಾತಾವರಣಕ್ಕಾಗಿ.ಹಾಗೂ ಕುಟುಂಬದ ಮಾನ ಹರಾಜು ಆಗಬಾರದೆಂಬ ಕಾರಣಕ್ಕಾಗಿ. ಅಪ್ಪಾ. ನಮಗೆ ಕಾಲು ಮುರಿದ ಹಕ್ಕಿಯ ಸ್ಥಿತಿ ಯಾಗುತ್ತಿದೆ. ಕೊನೆಯ ಕಾಲದಲ್ಲಿ ನೀವು ಪಕ್ಷವಾತ ಕಾಹಿಲೆಯಿಂದ ಹಾಸಿಗೆ ಹಿಡಿದಿರಿ.ಆದರೂ ನಿಮ್ಮ ದರ್ಶನವೇ ನಮಗೆ ಹುರುಪು ತರುತ್ತಿತ್ತು. ಅನಂತರ ನೆನಪಿನ ಶಕ್ತಿ ಕಳಕೊಂಡು‌  ಅಲ್ ಝೈಮರ್ ಕಾಹಿಲೆಗೆ ತುತ್ತಾಗಿ ಕೇವಲ ಮರದ ಕೊರಡಿನಂತಾದಿರಿ.ಆಗಲೂ ನಮಗೆ ಉಲ್ಲಾಸವೇ ಇತ್ತು.ಅಂತಹ ಅದ್ಭುತ ಸೆಳೆತ ನಿಮ್ಮಲ್ಲಿ. 

ನಿಮ್ಮ ಕಾಲವಾದ ಮೇಲೆ ನಮ್ಮ ಕಾಲವು ಬಹಳ ಕಷ್ಟದಿಂದ ಕಾಲು ಹಾಕುತ್ತಿದ್ದದು ಯಾಕೊ ! ಯಾವುದೋ ಕೊರತೆ ಎದ್ದು ಕಾಣುತ್ತದೆ. ಒಂದಷ್ಟು ಕಾಲ ಅಮ್ಮನಲ್ಲಿ ನಿಮ್ಮನ್ನೂ ಕಂಡು ಕುರುಡು ಕಣ್ಣಿಗಿಂತ ಮೆಳ್ಳೆಗಣ್ಣು ವಾಸಿ ಎಂಬ ಭಾವ ತಾಳಿ ಸಮಾಧಾನ ಕಂಡುಕೊಂಡೆವಾದರೂ ಅದು ಅಪರಿಪೂರ್ಣವೇ ಆಗಿತ್ತು. ಅಮ್ಮನಿಗೂ ಕೊರಗು ಅತಿಯಾಗಿ ನಿಮ್ಮಲ್ಲಿಗೇ ಹೋಗಿ ಬಿಟ್ಟ ಮೇಲೆ ನಾವು ಕಬಂಧರಂತಾಗಿದ್ದೇವೆ.

ಮನಸ್ಸಿನ‌ ಸಮಾಧಾನಕ್ಕೆ ನೀವು ಅಲ್ಲಿಂದಲೇ  ನಮ್ಮನ್ನು ನೋಡುತ್ತಿರುವಿರಿ ಎಂಬ ಭಾವ ಹರಿಸಿ ಭಾವುಕರಾದರೂ ನಿಮ್ಮ ಕಾರ್ಯಧಕ್ಷತೆಯನ್ನು ನೆನೆದು ನಮ್ಮ ವೃತ್ತಿಧರ್ಮವನ್ನು ಪರಿಪಾಲಿಸುತ್ತಿದ್ದೇವೆ. ನಿಮ್ಮ ನೆನಪೇ ನಮಗೆ ಶಕ್ರಿ ಉತ್ಸಾಹ ಸ್ಪೂರ್ತಿಯ ಚಿಲುಮೆ .

Advertisement

ಮರೆಯದ ಮಾಣಿಕ್ಯ
ದಯವಿಟ್ಟು ಹರಸುತ್ತಲೇ ಇರಿ.ಹಾಗಾದರೂ ನಾವು ನೋವನ್ನು‌ ಮರೆಯುತ್ತೇವೆ. ಜೋಪಾನ ಅಪ್ಪಾ . ಕಾಲ ಕಾಲಕ್ಕೆ ಊಟ ತಿಂಡಿ ಮಾಡಲು ಮರೆಯದಿರಿ. ಮೊದಲು ಮಾಡುತ್ತಿದ್ದಂತೆ ಮಧ್ಯರಾತ್ರಿಯ ತನಕ ತೋಟದ ಸುರಂಗದೊಳಗೆ ಹೊತ್ತು ಕಳೆಯ ಬೇಡಿರಿ. ನೀವು ಯಾರು ಹೇಳಿದ್ದೂ ಕೇಳುವವರಲ್ಲ ಗೊತ್ತು.ಆದರೂ ನಮ್ಮ ಎದೆಯಾಳದ ಬಿನ್ನಹವಿದು. ಯಾಕೆಂದರೆ  ಎಲ್ಲಿದ್ದರೂ ಹೇಗಿದ್ದರೂ ನೀವು ನಮ್ಮ ಅಪ್ಪನೇ ಅಲ್ಲವೇ?
ದಯವಿಟ್ಟು ಹರಸಿ
ನಿಮಗೆ ಶಿರಸಾ ವಂದಿಸುವ
ಪ್ರೀತಿಯ ಕೊನೆಯ ಮಗ 

ಡಾ ಸುರೇಶ ನೆಗಳಗುಳಿ
ಸುಹಾಸ
ಬಜಾಲ್ ಪಕ್ಕಲಡ್ಕ, ಎಕ್ಕೂರು ರಸ್ತ
ಮಂಗಳೂರು 575007,  9448216674

Advertisement

Udayavani is now on Telegram. Click here to join our channel and stay updated with the latest news.

Next