ಬಸವಕಲ್ಯಾಣ: ನಗರದ ಹೃದಯ ಭಾಗದಲ್ಲಿರುವ ಉರ್ದು ಹಿರಿಯ ಪ್ರಾಥಮಿಕ ಶಾಲೆ ಈಗೋ-ಆಗೋ ಬಿಳುವಂತಹ ಶಿಥಿಲಾವಸ್ಥೆಯ ಕಟ್ಟಡದಲ್ಲಿ ನಡೆಯುತ್ತಿದ್ದು, ಇಂತಹ ಕಡ್ಡದಲ್ಲೇ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಇದು ಪಾಲಕರ ಮತ್ತ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಸರಕಾರಿ ಪದವಿ ಕಾಲೇಜಿನ ಹಿಂಬದಿ ಇರುವ ಉರ್ದು ಶಾಲೆಯ ಸ್ಥಿತಿ ಇದಾಗಿದೆ. ಹಾಜರಾತಿ ಪ್ರಕಾರ 1ರಿಂದ 7ನೇ ತರಗತಿ ವರೆಗೆ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾರೆ. ಆದರೆ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ.
ಶಾಲೆಯ ಆವರಣದಲ್ಲಿ 8 ತರಗತಿ ಕೋಣೆಗಳು ಇವೆ. ಅವುಗಳಲ್ಲಿ ಬಹುತೇಕ ಕೋಣೆಗಳ ಒಳಗಿನ ಮತ್ತು ಹೊರಗಿನ ಗೋಡೆಗಳು ಬಿರುಕು ಬಿಟ್ಟಿವೆ. ಇದರಿಂದ ಮೇಲ್ಛಾವಣಿಗೆ ತಾತ್ಕಾಲಿಕವಾಗಿ ಕಬ್ಬಿಣ ಕಂಬಗಳನ್ನು ಆಧಾರ ಸ್ತಂಭವಾಗಿ ಅಳವಡಿಸಲಾಗಿದೆ. ಶಾಲೆಯ ದುಸ್ಥಿತಿ ತಿಳಿದು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಂಜನಿಯರ್‌ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಇದಕ್ಕೆ ಸಂಬಂಧಪಟ್ಟಂತೆ ಮನವಿಯನ್ನೂ ಸಲ್ಲಿಸಲಾಗಿದೆ. ಆದರೆ ಈ ವರೆಗೂ ಕಟ್ಟಡ ತೆರವುಗೊಳಿಸುವುದಾಗಲಿ ಅಥವಾ ದುರಸ್ತಿ ಮಾಡುವುದಾಗಲಿ ಮಾಡಿಲ್ಲ ಎಂದು ಶಾಲೆಯ ಶಿಕ್ಷಕರು ಮಾಹಿತಿ ನೀಡಿದ್ದಾರೆ.
ಶಾಲೆಗೆ ಬೆರಳೆಣಿಕೆಯಷ್ಟು ಶಿಕ್ಷಕರನ್ನು ಮಾತ್ರ ನೇಮಕ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಶೌಚಾಲಯ ಇದ್ದರೂ ನೀರಿನ ಕೊರತೆಯಿಂದ ಬಳಕೆಗೆ ಬಾರದಂತಾಗಿದೆ. ಶಾಲೆಯ ಆವರಣ ನೋಡಿದರೆ ಇದು ಶಾಲೆಯೊ ಅಥವಾ ಪಾಳು ಬಿದ್ದು ಕಟ್ಟಡವೊ ಎಂಬಂಥ ವಾತಾವರಣ ಇರುವುದು ದುರಾದೃಷ್ಟಕರ ಸಂಗತಿಯಾಗಿದೆ.
ಶಾಲೆಯ ಕಟ್ಟಡ ಹಳೆಯ ದಾಗಿರುವುದರಿಂದ ಶಿಥಿಲಾವಸ್ಥೆಗೆ ತಲುಪಿದ್ದು, ಅವಘಡಗಳು ಸಂಭವಿಸುವ ಮುನ್ನ ವಿದ್ಯಾರ್ಥಿಗಳಿಗೆ ಬೇರೆ ಕಡೆ ಪಾಠ ನಡೆಸುವ ವ್ಯವಸ್ಥೆ ಮಾಡಬೇಕು. ಅಥವಾ ಶೀಘ್ರವಾಗಿ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
•ವೀರಾರೆಡ್ಡಿ ಆರ್.ಎಸ್.