Advertisement

ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಹಾಜರಾಗುವ ನಿರೀಕ್ಷೆ ಇದೆ : ಸಚಿವ ಬಿ.ಸಿ ನಾಗೇಶ್

09:02 PM Aug 24, 2021 | Team Udayavani |

ಬೆಂಗಳೂರು: ಪ್ರೌಢ ಶಾಲೆಯ 9 ಮತ್ತು 10ನೇ ತರಗತಿಗಳ ಆರಂಭಕ್ಕೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭೌತಿಕ ತರಗತಿಗಳಿಗೆ ಹಾಜರಾಗಿ ನೈಜ ಶಿಕ್ಷಣವನ್ನು ಮುಂದುವರೆಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.

Advertisement

ಮಂಗಳವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಭೇಟಿ ನೀಡಿದ ಸಚಿವರು, ವಿದ್ಯಾರ್ಥಿಗಳು, ಶಿಕ್ಷಕರ ಜೊತೆ ಮಾತನಾಡಿ ತರಗತಿಗಳ ಆರಂಭದ ಬಗ್ಗೆ ಪ್ರತಿಕ್ರಿಯೆ ಪಡೆದರು.

‘ಬೇಸಿಗೆ ರಜೆ ಬಳಿಕ ಶಾಲೆ ಆರಂಭದ ಮೊದಲ ದಿನ ಹಾಜರಾತಿ ಕಡಿಮೆಯೇ ಇರುತ್ತದೆ. ಆದರೆ, ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ರಾಜ್ಯದಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕೆಲ ಜಿಲ್ಲೆಗಳಲ್ಲಿ ಗರಿಷ್ಠ ಶೇ.76ಕ್ಕೂ ಹೆಚ್ಚಿದೆ. ಒಟ್ಟಾರೆ ವಿದ್ಯಾರ್ಥಿಗಳ ಹಾಜರಾತಿ ಶೇ.41ಕ್ಕೂ ಹೆಚ್ಚಿದೆ. ಇದು ಆಶಾದಾಯಕ ಬೆಳವಣಿಗೆ. ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗುವ ನಿರೀಕ್ಷೆ ಇದೆ’ಎಂದರು.

‘ಹಳ್ಳಿ ಮಕ್ಕಳು, ಬಡ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಕಳಕಳಿ ಇದೆ. ಆನ್‌ಲೈನ್ ತರಗತಿಗಳು ಹಲವು ಕಾರಣಗಳಿಂದ ಮಕ್ಕಳನ್ನು ತಲುಪುತ್ತಿರಲಿಲ್ಲ. ಹಲವೆಡೆ ನೆಟ್‌ವರ್ಕ್ ಸಮಸ್ಯೆ ಇತ್ತು. ಸಾಕಷ್ಟು ಮಕ್ಕಳಿಗೆ ಮನೆಯಲ್ಲಿ ಸ್ಮಾರ್ಟ್‌ಫೋನ್ ಇರಲಿಲ್ಲ. ಮತ್ತೆ ಕೆಲವೆಡೆ ಮೊಬೈಲ್‌ಫೋನ್ ಮತ್ತು  ನೆಟ್‌ವರ್ಕ್ ಇದ್ದರೂ ಬೇರೆ ಸಮಸ್ಯೆಗಳು ಎದುರಾಗಿದ್ದವು’ ಎಂದು ಸಚಿವರು ಹೇಳಿದರು.

ಚಿಕ್ಕ ಮನೆಯಲ್ಲಿ ಆನ್‌ಲೈನ್ ಕ್ಲಾಸ್ ನಡೆಯುವಾಗ ಸಹೋದರ, ತಂಗಿಯರು ಆಟವಾಡುತ್ತಿದ್ದರು. ಅಮ್ಮ ಧಾರವಾಹಿ ನೋಡುತ್ತಿದ್ದರು. ಇದರಿಂದ ನಮಗೆ ಪಾಠದ ಮೇಲೆ ಗಮನ ಹರಿಸಲು ಆಗುತ್ತಿರಲಿಲ್ಲ’ ಎಂದು ಸಚಿವರ ಎದುರು ಮಕ್ಕಳು ಹೇಳಿಕೊಂಡರು.

Advertisement

ಶಾಲೆಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗುತ್ತಿದೆ. ರಾಜ್ಯದ ಎಲ್ಲ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ತಹಸೀಲ್ದಾರ್‌ಗಳು ಮಾತ್ರವಲ್ಲದೇ ಶಿಕ್ಷಣ ಇಲಾಖೆ ಹೊರತಾದ ಅಧಿಕಾರಿಗಳು ಕೂಡ ಶಾಲೆಗೆ ತೆರಳಿ ಮಕ್ಕಳಿಗೆ ಬೆನ್ನು ತಟ್ಟಿ, ಹೂವು, ಚಾಕೋಲೇಟ್ ನೀಡಿ ಸ್ವಾಗತಿಸಿರುವುದು ಸಂತೋಷದ ಸಂಗತಿ’ಎಂದು ಸಚಿವರು ನುಡಿದರು.

ಕೋವಿಡ್‌ನಿಂದಾಗಿ ಭೌತಿಕ ಶಿಕ್ಷಣದಿಂದ ಮಕ್ಕಳು ವಂಚಿತರಾಗಿರುವ ಬೇಸರ ನನ್ನನ್ನು ಕಾಡುತ್ತಿತ್ತು. ಅಲ್ಲದೇ, ಮಕ್ಕಳು ಮನೆಯಲ್ಲೇ ಇದ್ದು ಮಾನಸಿಕವಾಗಿಯು ಕುಗ್ಗುತ್ತಿದ್ದಾರೆ ಎನಿಸಿತು. ಈ ಎಲ್ಲ ಕಾಯುವಿಕೆ ಅಂತ್ಯವಾಗಿದೆ. ತರಗತಿಗಳ ಆರಂಭದೊಂದಿಗೆ ನವ ಯುಗ ಆರಂಭವಾಗಿದೆ’ಎಂದು ಸಚಿವರು ಹೇಳಿದರು.

ಪ್ರಥಮ ಪಿಯು ಪ್ರವೇಶಕ್ಕೆ ಸೀಟುಗಳ ಕೊರತೆಯಿಲ್ಲ:

‘ಎಸ್.ಎಸ್.ಎಲ್.ಸಿಯಲ್ಲಿ ಪಾಸ್ ಆಗಿರುವ ಎಲ್ಲರಿಗೂ ಕಾಲೇಜುಗಳಲ್ಲಿ ಪ್ರವೇಶ ದೊರಕುತ್ತದೆ. ಒಂದು ವೇಳೆ ಅಗತ್ಯ ಬಿದ್ದರೆ ಹೆಚ್ಚುವರಿಯಾಗಿ ತರಗತಿ ಆರಂಭಿಸಲು ಮೂಲಸೌಕರ್ಯ ಸೇರಿದಂತೆ ಅಗತ್ಯ ಸಂಪನ್ಮೂಲವನ್ನು ಕೂಡಲೇ ಮಂಜೂರು ಮಾಡಲಾಗುತ್ತದೆ’ ಎಂದು ಸಚಿವರು ತಿಳಿಸಿದರು.

‘ರಾಜ್ಯದ ಕಾಲೇಜುಗಳಲ್ಲಿ ಪ್ರಥಮ ಪಿಯುಗೆ 12 ಲಕ್ಷಕ್ಕೂ ಅಧಿಕ ಸೀಟುಗಳಿವೆ. ಈ ವರ್ಷ ಎಸ್.ಎಸ್.ಎಲ್.ಸಿ ಪಾಸ್ ಆಗಿರುವುದು 8.75 ಲಕ್ಷ ವಿದ್ಯಾರ್ಥಿಗಳು. ಅದರಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಐಟಿಐ, ಡಿಪ್ಲೋಮಾ ಸೇರಿದಂತೆ ಇನ್ನಿತರ ಕೋರ್ಸ್‌ಗಳ ಕಡೆಗೆ ಹೋಗುತ್ತಾರೆ.

ಸೀಟುಗಳ ಕೊರತೆ ಆಗಬಹುದು ಎನ್ನಲಾದ ರಾಜ್ಯದ 21 ಪ್ರದೇಶಗಳಲ್ಲಿನ ಕಾಲೇಜುಗಳಲ್ಲಿ ಲಭ್ಯವಿರುವ ಪಿಯು ಸೀಟುಗಳಿಗಿಂತ ಎಸ್.ಎಸ್.ಎಲ್.ಸಿ ಪಾಸ್ ಆಗಿರುವ ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ ಎಂಬುದು ಅಂಕಿ-ಅಂಶಗಳ ಪರಿಶೀಲನೆಯಿಂದ ಕಂಡು ಬಂದಿದೆ. ಈ 21 ಪ್ರದೇಶಗಳ ಕಾಲೇಜುಗಳಲ್ಲಿ ಆಗುತ್ತಿರುವ ಹೊಸ ಪ್ರವೇಶಾತಿಯನ್ನು ಮಾನಿಟರ್ ಮಾಡುತ್ತಿದ್ದೇವೆ. ಪ್ರವೇಶಾತಿ ಹೆಚ್ಚಾಗುತ್ತಿದೆ ಎಂಬುದು ಗೊತ್ತಾದರೆ ಕೂಡಲೇ ಹೆಚ್ಚುವರಿಯಾಗಿ ಸೀಟ್ ಸೇರ್ಪಡೆಗೆ ಅವಕಾಶ ನೀಡಲಾಗಿದೆ’ಎಂದು ಸಚಿವರು ತಿಳಿಸಿದರು.

ಮುಂದಿನ ತಿಂಗಳು 2 ಅಥವಾ 3ನೇ ವಾರದಲ್ಲಿ ಕೋವಿಡ್-3ನೇ ಅಲೆ ಬರಬಹುದು ಎಂದು ತಜ್ಞರ ಎಚ್ಚರಿಕೆ ನೀಡಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡಿದ್ದೇವೆ. ಪರಿಸ್ಥಿತಿ ನೋಡಿಕೊಂಡು ಪ್ರಾಥಮಿಕ ತರಗತಿಗಳನ್ನು ಕೂಡ ಆರಂಭಿಸಲು ಸರ್ಕಾರ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತದೆ. ಆರೋಗ್ಯಕ್ಕೂ ಆದ್ಯತೆ ನೀಡಲಾಗುತ್ತದೆ’ಎಂದು ಸಚಿವರು ಹೇಳಿದರು.

ವಿಜ್ಞಾನ, ಪ್ರಾಯೋಗಿಕ ತರಗತಿಗಳಿಗೆ ಒತ್ತು ನೀಡಬೇಕು:

ವಿದ್ಯಾರ್ಥಿಗಳು ವಿಜ್ಞಾನ ವಿಷಯದ ಕಡೆ ಆಸಕ್ತರಾಗಲು ಶಿಕ್ಷಕರು ಒತ್ತು ನೀಡಬೇಕು. ಸರಳವಾಗಿ ಅರ್ಥವಾಗುವಂತೆ ‘ಪ್ರಾಯೋಗಿಕ ತರಗತಿ’ಗಳನ್ನು ತೆಗೆದುಕೊಳ್ಳಬೇಕು ಎಂದು ಶಿಕ್ಷಕರಿಗೆ ಸಚಿವರು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next