Advertisement

ಗಿಡಮರದೊಳಗೆ ಮನೆ-ಅಂಗಳದಲ್ಲಿ ಕಾಯಿಪಲ್ಲೆ

09:48 AM Nov 06, 2021 | Team Udayavani |

ಕಲಬುರಗಿ: ಮನೆಯಂಗಳದಲ್ಲಿ ಒಂದೆರಡು ಗಿಡ ಹಾಗೂ ಸಸಿಗಳನ್ನು ಬೆಳೆದಿರುವುದನ್ನು ನಾವು ಕಾಣುತ್ತೇವೆ. ಆದರೆ ಇಲ್ಲೊಂದು ಮನೆ ಗಿಡಮರದೊಳಗೆ ಇರುವಂತೆಯೇ ಕಾಣುತ್ತದೆ. ಈ ಮನೆಯಂಗಳ, ಮೇಲ್ಚಾವಣಿ, ಪಾವಟಿ, ಕಾಂಪೌಂಡ್‌ ಸೇರಿದಂತೆ ಎಲ್ಲೆಡೆ ಹಣ್ಣು ಹಂಪಲು, ಕಾಯಿಪಲ್ಲೆ ಬೆಳೆಯಲಾಗಿದೆ.

Advertisement

ಇದೆಲ್ಲ ಕಾಣುವುದು ನಗರದ ಬಸವೇಶ್ವರ ಆಸ್ಪತ್ರೆ ಎದುರಿನ ಪ್ರಗತಿ ಕಾಲೋನಿಯಲ್ಲಿರುವ ಡಾ| ಮಾಣಿಕ ಆರ್‌. (ಎಂಆರ್‌) ಪೂಜಾರಿ ಅವರ ಮಾಣಿಕ ನಿವಾಸದಲ್ಲಿ.

ತೊಗರಿ ಕಣಜ ಕಲಬುರಗಿ ಬಿಸಿಲಿಗೆ ಹೆಸರು ವಾಸಿ. ಮನೆಯೊಳಗೆ ಎಸಿ ಇಲ್ಲವೇ ಫ್ಯಾನ್‌ ಇರಲೇಬೇಕು. ಆದರೆ ಮಹಾನಗರದ ಪ್ರಗತಿ ಕಾಲೋನಿಯಲ್ಲಿನ ಮನೆಯಂಗಳದಲ್ಲಿ ನೂರಾರು ಬಗೆಯ ಗಿಡಮರಗಳಲ್ಲದೇ ಮನೆಯ ಮೇಲ್ಛಾವಣಿ ಮೇಲೂ ಹತ್ತಾರು ಬಗೆಯ ಹಣ್ಣು-ಹಂಪಲು ಹಾಗೂ ಬಗೆ-ಬಗೆಯ ತರಕಾರಿಗಳಿವೆ. ಒಟ್ಟಾರೆ ಮನೆಯೊಳಗೆ ಕಾಲಿಟ್ಟರೆ ಯಾವುದೋ ಸಾರ್ವಜನಿಕ ಉದ್ಯಾನವನದೊಳಗೆ ಪ್ರವೇಶಿಸಿದಂತೆ ಭಾಸವಾಗುತ್ತದೆ.

ಆಶ್ಚರ್ಯವೆನಂದರೆ ವರ್ಷಕ್ಕೆ ಮೂರು ಕ್ವಿಂಟಲ್‌ ಚಿಕ್ಕು, ಎರಡು ಸಾವಿರ ಮಾವಿನಕಾಯಿ, ಸಮೃದ್ಧವಾದ ತರಕಾರಿ, ಕಡು ಬೇಸಿಗೆಯಲ್ಲೂ ಫ್ಯಾನ್‌ ಹಚ್ಚದಿರುವಷ್ಟು ತಣ್ಣನೆ ವಾತಾವರಣ. ಸುಗಂಧ ಸೂಸುವ ಹೂವುಗಳ ಬಳ್ಳಿ, ಬಗೆ-ಬಗೆಯ ಸಸ್ಯಗಳು, ತರೆವಾರಿ ಹಣ್ಣುಗಳು ಮನೆಯಂಗಳ ಹಾಗೂ ಮೇಲ್ಚಾವಣಿ ಮೇಲೆ ಬೆಳೆಯುವುದು ಸಾಮಾನ್ಯವಾದದ್ದಲ್ಲ. ಇದಕ್ಕೆಲ್ಲ ಇಚ್ಛಾಶಕ್ತಿ ಹಾಗೂ ಸತತ ಪರಿಶ್ರಮವೇ ಪ್ರಮುಖ ಕಾರಣವಾಗಿದೆ.

40×60 ವಿಸ್ತೀರ್ಣದ ಮನೆಯೊಳಗೆ ಅರಣ್ಯದಂತೆ ವಾತಾವರಣ ನಿರ್ಮಿಸಿರುವುದು ಅದ್ಭುತವೇ ಸರಿ. ಇದೆಲ್ಲರ ಹಿಂದಿನ ಶ್ರಮವೇ ಬಸವೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಮಾಣಿಕ ಆರ್‌. ಪೂಜಾರಿ ಆಗಿದ್ದಾರೆ. ದಿನವಿಡೀ ಆಸ್ಪತ್ರೆಯಲ್ಲಿ ದುಡಿದು ದಣಿವಾರಿಸಿಕೊಳ್ಳಲು ಗಿಡಮರಗಳಿಗೆ ಮಣ್ಣು, ಗೊಬ್ಬರ ಹಾಗೂ ನೀರು ಹಾಕುವುದರಲ್ಲೇ ಕಾಲ ಕಳೆಯುವ ಈ ವೈದ್ಯರ ಪರಿಸರ ಕಾಳಜಿ ಎಲ್ಲರಿಗೂ ಮಾದರಿಯಾಗಿದೆ.

Advertisement

ಇದನ್ನೂ ಓದಿ:ಗೆಳತಿಯ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದ ಕೆ.ಎಲ್.ರಾಹುಲ್

ತ್ಯಾಜ್ಯ ಡಬ್ಟಾಗಳೆ ಕುಂಡ:

ಆಸ್ಪತ್ರೆಯಲ್ಲಿ ಬಳಸಿ ಬಿಸಾಡಿದ ಪ್ಲಾಸ್ಟಿಕ್‌ ಡಬ್ಟಾಗಳನ್ನು ತಂದು ಮೇಲ್ಬಾಗ ಕತ್ತರಿಸಿ ಕುಂಡಗಳನ್ನು ನಿರ್ಮಿಸಲಾಗಿದೆ. ಗಿಡಮರಗಳಿಂದ ಉದುರುವ ಎಲೆ ಹಾಗೂ ಕಸವನ್ನು ಗುಂಡಿಯೊಳಗೆ ಹಾಕಿ ಅದನ್ನು ಸಾವಯವ ಗೊಬ್ಬರ ಮಾಡಿ, ಸಸಿ ಹಾಗೂ ಹಣ್ಣುಗಳ ಗಿಡಗಳಿಗೆ ಹಾಕುವ ಮೂಲಕ ಪರಿಸರ ಇಮ್ಮಡಿ ಮಾಡಲಾಗುತ್ತಿದೆ. 30 ವರ್ಷದ ಹಿಂದೆ ಮನೆ ನಿರ್ಮಿಸಿದ ಸಂದರ್ಭದಲ್ಲೇ ಮರಗಿಡಗಳನ್ನು ಬೆಳೆಸುತ್ತಾ ಬರಲಾಗಿದೆ. ಮಾವು, ಚಿಕ್ಕು, ಬೇವು, ತೆಂಗಿನ ಮರ, ಸಪೋಟ್‌, ಹತ್ತಿಮರ, ಸೀತಾಫ‌ಲ, ಆಮ್ಲಜನಕ ಸೂಸುವ ಮರಗಳು, ಗಿಡಗಳು, ಭತ್ತದ ಹುಲ್ಲು, ತರಕಾರಿ, ಮೋಸಂಬಿ, ಟೊಮ್ಯಾಟೋ, ಬದನೆ, ಈರುಳ್ಳಿ, ತರಕಾರಿಗಳಾದ ಮೆಂತೆ, ಪುಂಡಿಪಲ್ಲೆ, ಕೊತಂಬರಿ ಬೆಳೆಸಲಾಗುತ್ತಿದೆ.

ನೈಸರ್ಗಿಕ ವಾತಾವರಣ ಹೆಚ್ಚಿಸಲು ಕಂದಿಲುಗಳನ್ನು ಹಚ್ಚಲಾಗಿದೆ. ಸೋಲಾರ ದೀಪ ಅಳವಡಿಸಲಾಗಿದೆ. ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಲಾಗಿದೆ. ಪಕ್ಷಿ ಪ್ರೇಮಿಯಾಗಿರುವ ಡಾ| ಎಂ.ಆರ್‌ ಪೂಜಾರಿ ಹಾಗೂ ಪತ್ನಿ ಹಕ್ಕಿಗಳು ಬಂದು ಆಹಾರ ತಿನ್ನುವುದಕ್ಕಾಗಿ ಜೋಳ ಇಡಲು ಹಾಗೂ ನೀರು ಕುಡಿಯಲು ವ್ಯವಸ್ಥೆ ಮಾಡಿದ್ದಾರೆ. ಹೀಗಾಗಿ ದಿನಾಲು ಮುಂಜಾನೆ ಹಕ್ಕಿಗಳ ಕಲರವ ಮನಸ್ಸಿನ ಉಲ್ಲಾಸ ಹೆಚ್ಚಿಸುತ್ತದೆ.

ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿ, ಮನೆಗೆ ಬಂದರೆ ಉತ್ತಮ ವಾತಾವರಣ ಪಡೆಯಲು ಹಾಗೂ ಬೆಳಗ್ಗೆ ವ್ಯಾಯಾಮ ಮಾಡುವ ರೀತಿಯಲ್ಲಿ ಗಿಡಮರಗಳಿಗೆ ನೀರುಣಿಸುತ್ತೇನೆ. ತಮ್ಮ ಈ ಕಾರ್ಯ ನೋಡಿ ಇತರ ವೈದ್ಯರು ಅನುಕರಣೆ ಮಾಡುತ್ತಿದ್ದಾರೆ. -ಡಾ| ಎಂ.ಆರ್‌. ಪೂಜಾರ, ಆಡಳಿತಾಧಿಕಾರಿ, ಬಸವೇಶ್ವರ ಆಸ್ಪತ್ರೆ

ಪತಿಯ ಪರಿಸರ ಕಾಳಜಿ ನೋಡಿ ತಮ್ಮಲ್ಲೂ ಆಸಕ್ತಿ ಮೂಡಿದೆ. ಗಿಡಮರ ಬೆಳೆಸುವ ಅವರ ಕಾರ್ಯದಲ್ಲಿ ತಾವು ಸಹ ಕೈಲಾದ ಮಟ್ಟಿಗೆ ಕೈ ಜೋಡಿಸುತ್ತೇನೆ. ಮನೆಗೆ ಬಂದವರು ಇದನ್ನೆಲ್ಲ ನೋಡಿ ಶ್ಲಾಗಿಸಿ, ಸಂತೋಷಪಟ್ಟೇ ಹೋಗ್ತಾರೆ. ಇದಕ್ಕಿಂತ ದೊಡ್ಡ ಖುಷಿ ಬೇರೊಂದಿಲ್ಲ. -ಸ್ವರೂಪರಾಣಿ ಪೂಜಾರಿ, ಪತ್ನಿ

ನಮ್ಮ ಮನೆಯ ಗಾರ್ಡ್‌ನ್‌ ಕುರಿತು ವಾಟ್ಸ್‌ ಆ್ಯಪ್‌ ಸ್ಟೇಟಸ್‌ ಹಾಕಿದ್ದೆ. ಅದನ್ನು ನೋಡಿ ನಮ್ಮ ಗೆಳತಿಯರು ತಮ್ಮ ಮನೆಯಲ್ಲಿ ಸಸಿ ನೆಡಲು ಮುಂದಾಗಿದ್ದಾರೆ. ಈಗಾಗಲೇ ಏಳೆಂಟು ಗೆಳತಿಯರು ಮನೆಗೆ ಬಂದು ನೋಡಿ ಉದ್ಯಾನವನ ಬೆಳೆಸಲು ಪ್ರಾರಂಭಿಸಿದ್ದಾರೆ. -ಸಂತೋಷಿ ಪೂಜಾರಿ, ಮಗಳು

Advertisement

Udayavani is now on Telegram. Click here to join our channel and stay updated with the latest news.

Next