ಜಮಖಂಡಿ: ಬಾಗಲಕೋಟೆ ಜಿಲ್ಲೆಯ ಜಮ ಖಂಡಿ ತಾಲೂಕಿನ ಮಧುರಖಂಡಿ ಗ್ರಾಮದ ಲ್ಲೀಗ ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಶ್ರೀ ಮಹಾಲಕ್ಷ್ಮಿ ರಥೋತ್ಸವ-ಜಾತ್ರೆಯ ಸಡಗರ. ಈ ಹಿನ್ನೆಲೆಯಲ್ಲಿ ರಥ ಸಾಗಲು ರಾಜಮಾರ್ಗ ನಿರ್ಮಾಣಕ್ಕೆ ಬಾಳಿ ಬದುಕುತ್ತಿದ್ದ ಮನೆ ಹಾಗೂ ಸ್ವಂತ ಜಾಗವನ್ನೇ ಬಿಟ್ಟು ಕೊಡುವ ಮೂಲಕ ಭಕ್ತರು ವಿಶಿಷ್ಟ ಭಕ್ತಿ ಮೆರೆದಿದ್ದಾರೆ.
ಈ ಗ್ರಾಮದ ಹೃದಯ ಭಾಗದಲ್ಲಿರುವ ವಿವಿಧ ಸಮುದಾಯದ 22 ಭಕ್ತರು ಅಂದಾಜು ಎರಡು ಕೋಟಿ ಮೌಲ್ಯದ ಆಸ್ತಿಯನ್ನು ದೇವಿಯ ರಥೋತ್ಸವ ಸಂಚಾರಕ್ಕೆ ಬಿಟ್ಟುಕೊಟ್ಟು ಮಾದರಿಯಾಗಿದ್ದಾರೆ. ಭಕ್ತರು ಬಿಟ್ಟುಕೊಟ್ಟಿರುವ ಈ ಜಾಗದಲ್ಲಿ ರಥದ ಸಂಚಾರಕ್ಕೆ ಅಂದಾಜು 550 ಅಡಿ ಉದ್ದ ಹಾಗೂ 23 ಅಡಿ ಅಗಲದ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.
ಕಿರಿದಾದ ರಸ್ತೆ ಬದಲಾಗಿ ಹೊಸದಾಗಿ ನಿರ್ಮಿ ಸುವ ರಾಜಮಾರ್ಗದಲ್ಲೇ ಶ್ರೀ ಮಹಾಲಕ್ಷ್ಮಿ ರಥವನ್ನು ಎಳೆಯುವ ಬಗ್ಗೆ ಗ್ರಾಮದ ಪ್ರಮು ಖರು 22 ಭಕ್ತರ ಮನವೊಲಿಸಿ, ಅವರ ಸ್ವಂತ ಜಾಗ ಹಾಗೂ ಮನೆಗಳನ್ನು ತೆರವುಗೊಳಿಸಿದ್ದಾರೆ. ಈ ಪೈಕಿ ಸಿದರಡ್ಡಿ ಕುಟುಂಬ, ದಾನೇಶ ಜಂಗಪ್ಪನವರ, ಮಹಾದೇವ ಜಂಗಪ್ಪನವರ, ಶಂಕರ ಜಂಗಪ್ಪನವರ, ಗೋವಿಂದ ಬೆಳಗಲಿ, ತಾಯವ್ವ ಕಳಸಣ್ಣಿ, ಬಸವರಾಜ ಮಾಳೇದ, ಶ್ರೀಶೈಲ ಮಾಳೇದ, ಶಿವಮೂರ್ತಯ್ಯ ಮಠಪತಿ ಮನೆತನದವರು ಪೂರ್ಣವಾಗಿ ಮನೆ ಮತ್ತು ಜಾಗ ಬಿಟ್ಟು ಕೊಟ್ಟಿದ್ದಾರೆ.
ಇನ್ನುಳಿದಂತೆ ಲಕ್ಷ್ಮಣ ಬಡಿಗೇರ, ನಾಗಲಿಂಗ ಬಡಿಗೇರ, ರಮೇಶ ಖೀಳೆಗಾವಿ, ಶಂಕರ ಮಾಳೇದ, ಮಲ್ಲು ಹಟ್ಟಿ, ಸಿದ್ದು ಮಾಳೇದ, ನಾಗರಾಜ ಬಿರಡಿ, ರೇವಣಪ್ಪ ಸಿದರಡ್ಡಿ, ಬೀರಲಿಂಗೇಶ್ವರ ದೇವಸ್ಥಾನ ಕಮೀಟಿ, ದೇವರಾಯ ಕುಟುಂಬ, ಪೈಟನದಾರ ಕುಟುಂಬ ಸಹಿತ ಇತರರು ಅರ್ಧಕ್ಕಿಂತ ಹೆಚ್ಚು ಸ್ವಂತ ಮನೆ, ಜಾಗ ಬಿಟ್ಟು ಕೊಟ್ಟಿದ್ದಾರೆ.
ಗ್ರಾಮದ ಆರಾಧ್ಯ ದೇವತೆ, ಶ್ರೀ ಮಹಾಲಕ್ಷ್ಮಿ ಜಾತ್ರೆ ವಿಶೇಷವಾಗಿದ್ದು, ಪ್ರತಿವರ್ಷ ಬನದ ಹುಣ್ಣಿಮೆ ನಂತರ ಬರುವ ಮಂಗಳವಾರ ಕಾರ್ತಿಕೋತ್ಸವ, ದೇವಿಗೆ ಉಡಿ ತುಂಬುವುದು, ಬುಧವಾರ ದೇವಿಯ ಪಲ್ಲಕ್ಕಿ ಉತ್ಸವ ಜರುಗುತ್ತದೆ. ಪೂರ್ವಜರಿಂದ ಆಚರಣೆಗೆ ಬಂದಂತೆ ಪ್ರತಿ 12 ವರ್ಷಕ್ಕೊಮ್ಮೆ ಬೃಹತ್ ರಥೋತ್ಸವ ನಡೆಯುತ್ತಿದ್ದು, ಯಾವುದೇ ಜಾತಿ, ಧರ್ಮ ಭೇದ-ಭಾವವಿಲ್ಲದೇ ನಿರಂತರವಾಗಿ ಒಂಬತ್ತು ದಿನಗಳವರೆಗೆ ಜಾತ್ರೆ ನಡೆಯುತ್ತಿದೆ.
ಪೂರ್ವಜರ ಕಾಲದಿಂದ ಐತಿಹಾಸಿಕ ಮಹಾಲಕ್ಷ್ಮಿ ಜಾತ್ರೆ ವೇಳೆ ರಥೋತ್ಸವಕ್ಕೆ ಕಿರಿದಾದ ರಸ್ತೆಯಿಂದ ತೊಂದರೆಯಾಗಿತ್ತು. ದೈವ ಮಂಡಳಿ ಕೂಡಿಕೊಂಡು ದೇವಸ್ಥಾನಕ್ಕೆ ರಾಜಮಾರ್ಗ ರಸ್ತೆ ನಿರ್ಮಾಣಕ್ಕೆ ಮನೆ, ಜಾಗ ತೆರವುಗೊಳಿಸಲು ತಿಳಿಸಿದರು. ದೇವಿಯ ರಥೋತ್ಸವಕ್ಕೆ ನಮ್ಮ ಪೂರ್ಣ ಮನೆ-ಜಾಗ ಬಿಟ್ಟುಕೊಟ್ಟಿದ್ದೇವೆ. ಸದ್ಯ ತೋಟದ ಮನೆಯಲ್ಲಿ ವಾಸವಾಗಿದ್ದೇವೆ. ಗ್ರಾಮದಲ್ಲಿ ಬೇರೆಡೆ ಸ್ಥಳ ನೀಡುವುದಾಗಿ ದೈವ ಮಂಡಳಿ ತಿಳಿಸಿದ್ದು, ರಥೋತ್ಸವ ರಾಜಮಾರ್ಗದಲ್ಲಿ ಸಾಗಲಿ ಎಂಬುದೇ ನಮ್ಮ ಆಶಯ.
-ಬಸವರಾಜ ಸಿದರಡ್ಡಿ, ಮನೆ ಬಿಟ್ಟುಕೊಟ್ಟ ಮಧುರಖಂಡಿ ಗ್ರಾಮಸ್ಥ
ಪೂರ್ವಜರ ಕಾಲದಿಂದಲೂ ಪ್ರತಿ 12 ವರ್ಷಕ್ಕೊಮ್ಮೆ ಮಹಾಲಕ್ಷ್ಮಿ ರಥೋತ್ಸವ ನಡೆಯುತ್ತಿದೆ. 1958ರಲ್ಲಿ ಲಭಿಸಿದ ಕಾಗದ ಪತ್ರದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ದೇವಿ ಜಾತ್ರೆಯ ಆಚರಣೆ ಬಗ್ಗೆ ದಾಖಲೆಗಳು ಲಭಿಸಿವೆ. ಯಾವುದೇ ಭೇದ-ಭಾವ ಇಲ್ಲದೇ ಗ್ರಾಮಸ್ಥರು ವಿಜೃಂಭಣೆಯಿಂದ ರಥೋತ್ಸವ ಆಚರಿಸಲಿದ್ದು, ರಥ ಸಾಗುವ ಕಿರಿದಾದ ಮಾರ್ಗವೀಗ ರಾಜಮಾರ್ಗವಾಗಿ ಬದಲಾಗುತ್ತಿದೆ.
-ಭಾಸ್ಕರ ಬಡಿಗೇರ, ಮಧುರಖಂಡಿ ಗ್ರಾಮದ ಪ್ರಮುಖರು
* ಮಲ್ಲೇಶ ಆಳಗಿ