Advertisement

Karnataka: ನಿಗಮ-ಮಂಡಳಿ ಪಟ್ಟಿಗೆ “ಹೈ” ಗ್ರೀನ್‌ ಸಿಗ್ನಲ್‌ ಬಾಕಿ

11:56 PM Nov 28, 2023 | Team Udayavani |

ಬೆಂಗಳೂರು: ಕೊನೆಗೂ ನಿಗಮ- ಮಂಡಳಿಗಳ ಅಧ್ಯಕ್ಷರ ನೇಮಕಾ ತಿಗೆ ಕಾಲ ಕೂಡಿಬಂದಿದೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುಜೇìವಾಲ ನೇತೃತ್ವದಲ್ಲಿ ನಾಯಕರ ಒಮ್ಮತದೊಂದಿಗೆ ಪಟ್ಟಿ ಸಿದ್ಧಗೊಂಡಿದೆ. ಹೈಕಮಾಂಡ್‌ ಗ್ರೀನ್‌ ಸಿಗ್ನಲ್‌ ಮಾತ್ರ ಬಾಕಿ ಇದೆ. ನಿರೀಕ್ಷೆಯಂತೆ ಬೆಳಗಾವಿ ಅಧಿವೇಶನಕ್ಕೂ ಮೊದಲೇ ಈ ಪಟ್ಟಿ ಅಧಿಕೃತವಾಗಿ ಪ್ರಕಟಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.
ಈ ಮೊದಲೇ ಅಂದುಕೊಂಡಂತೆ ಮೊದಲ ಹಂತದಲ್ಲಿ ಶಾಸಕರಿಗೆ ಆದ್ಯತೆ ನೀಡಲಾಗಿದ್ದು, 30ರಿಂದ 35 ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಅಂತಿಮಗೊಳಿಸಲಾಗುತ್ತಿದೆ. ಇದರಲ್ಲಿ 25 ಶಾಸಕರು, ನಾಲ್ವರು ವಿಧಾನ ಪರಿಷತ್ತಿನ ಸದಸ್ಯರು ಇರಲಿದ್ದಾರೆ. ಇದರ ಜತೆಗೆ 4ರಿಂದ 5 ಜನರನ್ನು ಹೈಕಮಾಂಡ್‌ ಸೇರಿಸಿ ಅಥವಾ ಸಣ್ಣಪುಟ್ಟ ಮಾರ್ಪಾಡುಗಳೊಂದಿಗೆ ಪಟ್ಟಿಯನ್ನು ಕಳುಹಿಸಲಿದೆ. 2-3 ದಿನಗಳಲ್ಲೇ ಪಟ್ಟಿ ಪ್ರಕಟಗೊಂಡರೂ ಅಚ್ಚರಿ ಇಲ್ಲ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

Advertisement

ಸಮುದಾಯವಾರು ಹಂಚಿಕೆ
ಈಗಾಗಲೇ ಸಿದ್ಧಪಡಿಸಿದ 30-35 ಜನರ ಪಟ್ಟಿಯೊಂದಿಗೆ ಸುಜೇìವಾಲ ದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ. ಮೂರ್‍ನಾಲ್ಕು ಬಾರಿ ಶಾಸಕರಾದರೂ ಸಚಿವ ಸ್ಥಾನ ವಂಚಿತರು, ಜಾತಿ ಸಮೀಕರಣ, ಪ್ರದೇಶವಾರು ಲೆಕ್ಕಾಚಾರ ಮತ್ತಿತರ ಅಂಶಗಳು ಒಳಗೊಂಡಿವೆ. ಮೂಲಗಳ ಪ್ರಕಾರ ವೀರಶೈವ-ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಿಗೆ ಸೇರಿದವರಿಗೆ ತಲಾ ಮೂರು ಸ್ಥಾನ, ಪರಿಶಿಷ್ಟ ಜಾತಿ (ಎಡ-ಬಲ ಸೇರಿ)ಗೆ 4-5 ಸ್ಥಾನಗಳು, ಪರಿಶಿಷ್ಟ ಪಂಗಡಕ್ಕೆ 2, ಅಲ್ಪಸಂಖ್ಯಾಕರಿಗೆ 3, ಹಿಂದುಳಿದ ವರ್ಗಕ್ಕೆ 4-5, ಬ್ರಾಹ್ಮಣ, ಮರಾಠ ಕ್ಷತ್ರಿಯ ಇತರ ಸಮುದಾಯಗಳಿಗೆ ಹಂಚಿಕೆಯಾಗಿವೆ ಎನ್ನಲಾಗಿದೆ.

ಸಿಎಂ, ಡಿಸಿಎಂ ಒಮ್ಮತದ ಪಟ್ಟಿ!
ಇದಕ್ಕೂ ಮುನ್ನ ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಎರಡು-ಮೂರು ಸುತ್ತಿನ ಮಾತುಕತೆಗಳು ನಡೆದಿದ್ದವು. ಆದರೆ, ಅಂತಿಮ ತೀರ್ಮಾನ ಕೈಗೊಂಡಿರಲಿಲ್ಲ. ಚುನಾವಣೆ ಹೊಸ್ತಿಲಲ್ಲಿದೆ. ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಸೋಮವಾರ ಇದಕ್ಕೆ ಮುಹೂರ್ತ ಕೂಡಿಬಂತು. ಖಾಸಗಿ ಹೊಟೇಲ್‌ನಲ್ಲಿ ಸುಜೇìವಾಲ ನೇತೃತ್ವದಲ್ಲಿ ನಡೆದ ಕಾಂಗ್ರೆಸ್‌ ನಾಯಕರ ಮ್ಯಾರಥಾನ್‌ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ತಮ್ಮ ಬೆಂಬಲಿಗರ ಪಟ್ಟಿಯೊಂದಿಗೆ ಭಾಗವಹಿ ಸಿದ್ದರು. ಇಬ್ಬರ ಮನವೊಲಿಸಿ, ಒಮ್ಮತದ ಪಟ್ಟಿಯೊಂದನ್ನು ಅಂತಿಮವಾಗಿ ಸಿದ್ಧಪಡಿಸಲಾಯಿತು.

ಮೊದಲ ಪಟ್ಟಿ ಅಂತಿಮವಾಗಿದೆ
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೊದಲ ಹಂತದಲ್ಲಿ ಶಾಸಕರಿಗೆ ಮಾತ್ರ ನಿಗಮ-ಮಂಡಳಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. 2 ಮತ್ತು 3ನೇ ಹಂತದಲ್ಲಿ ಕಾರ್ಯಕರ್ತರಿಗೂ ಅವಕಾಶ ಮಾಡಿಕೊಡಲಾಗು ವುದು. ಪಟ್ಟಿ ಸಿದ್ಧಪಡಿಸಲಾಗಿದ್ದು, ಹೈಕಮಾಂಡ್‌ಗೆ ಕಳುಹಿಸಲಾಗುತ್ತಿದೆ. ಹೈಕಮಾಂಡ್‌ ಪಟ್ಟಿಗೆ ಅನುಮತಿ ನೀಡಬೇಕು ಎಂದು ಹೇಳಿದರು. ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳ ಜತೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡುವ ವಿಚಾರವಾಗಿಯೂ ಚರ್ಚೆ ಮಾಡಿದ್ದೇವೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ವಿಚಾರವಾಗಿ ಚರ್ಚೆ ಮಾಡಿದ್ದೇವೆ ಎಂದರು.

ನಮ್ಮನ್ನೂ ಕೇಳಿದ್ದರೆ ಚೆನ್ನಾಗಿತ್ತು: ಪರಂ
ನಾನೂ ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ನಮ್ಮನ್ನೂ ಕೇಳಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ ಬೇಸರ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಬಂದಾಗ, ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರನ್ನು ಕರೆದು ಚರ್ಚೆ ನಡೆಸಿದ್ದಾರೆ. ನಮ್ಮ ಜತೆ ಈ ಬಗ್ಗೆ ಚರ್ಚೆ ಮಾಡಿಲ್ಲ. ನಮ್ಮನ್ನೂ ಕೇಳಿದ್ದರೆ ಒಳ್ಳೆಯದಿತ್ತು. ಯಾಕೆಂದರೆ, ನಾನು ಸಹ ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷನಾಗಿದ್ದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next