ಬೆಂಗಳೂರು: ಕಾಂಗ್ರೆಸ್ ಪಕ್ಷ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮರಿಗಾಗಿ ಹೋರಾಟ ಮಾಡುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆಯಡಿ ಭಾರತದ ಪೌರತ್ವ ಈ ಮೂರು ದೇಶಗಳ ಮುಸ್ಲಿಮರಿಗೆ ನೀಡಲು ಬಿಜೆಪಿ ಯಾವತ್ತೂ ಒಪ್ಪುವುದಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಬಿಜೆಪಿ ಜನ ಜಾಗೃತಿ ಅಭಿಯಾನ ದೇಶಾದ್ಯಂತ ನಡೆಸುತ್ತಿದೆ ಎಂದರು. ಜಾತ್ಯತೀತವನ್ನು ಕಾಂಗ್ರೆಸ್ ದೇಶ ವಿಭಜನೆಯ ಸಂದರ್ಭದಲ್ಲೇ ಕೊಲೆ ಮಾಡಿದೆ. ದೇಶ ವಿಭಜನೆ ನಂತರ ಕಾಶ್ಮೀರಿ ಪಂಡಿತರಿಗೆ ಆದ ದೌರ್ಜನ್ಯದ ಬಗ್ಗೆ ಕಾಂಗ್ರೆಸ್ ಹೋರಾಟ ಮಾಡಲಿಲ್ಲ. ಕೇರಳ ವಿಧಾನಸಭೆಯಲ್ಲಿ ಈ ಕುರಿತು ಯಾವ ನಿರ್ಧಾರವನ್ನೂ ತೆಗೆದುಕೊಂಡಿಲ್ಲ. ಇವರ ಜಾತ್ಯತೀತತೆ ಹೇಗಿದೆ ಎಂಬುದು ಎಲ್ಲರಿಗೂ ತಿಳಿಯುತ್ತಿದೆ ಎಂದು ದೂರಿದರು.
ಉತ್ತರಿಸಲಿ: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಸುಳ್ಳು ಮಾಹಿತಿ ಹಬ್ಬಿಸಿ ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷ ಹಿಂಸೆಗೆ ಪ್ರಚೋದಿಸುತ್ತಿದೆ. ಇವರು ಏತಕ್ಕಾಗಿ ಹೋರಾಟ ಮಾಡುತ್ತಿದ್ದಾರೆ? ಯಾರ ಹಕ್ಕಿಗಾಗಿ ಹೋರಾಟ? ಎಂಬ ಪ್ರಶ್ನೆಗಳಿಗೆ ಕಾಂಗ್ರೆಸ್ ಉತ್ತರಿಸಬೇಕೆಂದರು.
ಹಿಂದೂಗಳ ಸಂಖ್ಯೆ ಕುಸಿದಿದೆ: ಎನ್‌ಆರ್‌ಸಿ ಇನ್ನೂ ಜಾರಿಗೆ ಬಂದಿಲ್ಲ. ಆದರೂ, ಕಾಂಗ್ರೆಸ್ ತಪ್ಪು ಮಾಹಿತಿ ಹರಡುತ್ತಿದೆ. ದೇಶ ವಿಭಜನೆ ನಂತರ ನೆಹರು- ಲಿಯಾ ಕತ್ ಒಪ್ಪಂದಕ್ಕೆ ಭಾರತ ಮಾತ್ರ ಬದ್ಧವಾಗಿದೆ. 1947ರಿಂದ ಪಾಕಿಸ್ತಾನದಲ್ಲಿ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರ ಸಂಖ್ಯೆ ಗಣನೀಯ ಕುಸಿದಿದೆ. ದೇವಸ್ಥಾನಗಳು ನಾಶ ವಾ ಗಿವೆ. ಆದರೆ, ಭಾರತದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿದೆ. ಮಸೀದಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದರು.
ವಿವಿಧ ಕಾರ್ಯಕ್ರಮ: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಬಿಜೆಪಿ ಭಾನುವಾರದಿಂದ ಮನೆ-ಮನೆಗೆ ತೆರಳಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಬೆಂಗಳೂರಿನ ವಸಂತ ನಗರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂ ರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅಭಿ ಯಾನಕ್ಕೆ ಚಾಲನೆ ನೀಡಲಿದ್ದಾರೆ. ಎಲ್ಲಾ ಜಿಲ್ಲೆ ಮತ್ತು 300 ಮಂಡಲಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ಸೂಚಿಸಲು ಸಾರ್ವಜನಿಕರಿಗಾಗಿ ಉಚಿತ ಟೋಲ್ ಫ್ರೀ ಸಂಖ್ಯೆ 88662-88662 ಅನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಸಾರ್ವಜನಿಕರು ಈ ಸಂಖ್ಯೆಗೆ ಮಿಸ್‌ಕಾಲ್ ನೀಡುವ ಮೂಲಕ ಕಾಯ್ದೆಗೆ ಬೆಂಬಲ ಸೂಚಿಸಬಹುದಾಗಿದೆ.