ವಾಡಿ: ಅನ್ಯ ಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನುವ ಕಾರಣಕ್ಕೆ ಆಕೆಯ ಸಹೋದರನಿಂದಲೇ ಕೊಲೆಯಾಗಿದ್ದ ಇಲ್ಲಿನ ಭೀಮನಗರ ಬಡಾವಣೆಯ ದಲಿತ ಯುವಕ ವಿಜಯ ಕಾಂಬಳೆ ಮನೆ ಬಾಗಿಲಿಗೆ ಸರ್ಕಾರಿ ನೌಕರಿ ಹುಡುಕಿ ಬಂದಿದ್ದು, ನೌಕರಿ ಪಡೆಯ ಬೇಕೋ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ ತಾಯಿ ಮತ್ತು ಮಗಳು.
ರಾಜೇಶ್ವರಿ ಸುರೇಶ ಕಾಂಬಳೆಗೆ ಹತ್ಯೆಯಾದ ವಿಜಯ ಕಾಂಬಳೆ ಹೊರತಾಗಿ ಇಬ್ಬರು ಹೆಣ್ಣುಮಕ್ಕಳು. ಪುತ್ರಿಯರನ್ನು ಗುಜರಾತ್ ಮೂಲದವರಿಗೆ ಕೊಟ್ಟು ಮದುವೆ ಮಾಡಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸವಿರುವ ಅವರಿಗೆ ಮಗನ ಹತ್ಯೆ ಬಳಿಕ ಬದುಕಿನ ಚಿಂತೆ. ಈಗಾಗಲೇ 4.12 ಲಕ್ಷ ರೂ. ಪರಿಹಾರ ಸಿಕ್ಕಿದೆ. ವಸತಿ ಸೌಲಭ್ಯ ಹಾಗೂ ಸರ್ಕಾರಿ ನೌಕರಿ ನೀಡುವ ಭರವಸೆ ನೀಡಲಾಗಿತ್ತು. ಅಂತೆಯೇ ಮನೆ ಬಾಗಿಲಿಗೆ ಸರ್ಕಾರಿ ನೌಕರಿ ಹುಡುಕಿಕೊಂಡು ಬಂದಿದೆ.
ಅದರೆ ಅದಕ್ಕೆ ಬೇಕಾದ ಅರ್ಹ ವಯಸ್ಸು ಮೀರಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬುಧವಾರ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್‌ಪಿ ಜೆ.ಕೆ.ರಶ್ಮಿ ಅವರು ಮನೆಯಲ್ಲಿದ್ದ ರಾಜೇಶ್ವರಿ ಮತ್ತು ಪುತ್ರಿ ಜತೆ ಮಾತುಕತೆ ನಡೆಸಿದರು.
ಇರಲು ಮನೆ ಸಮಸ್ಯೆಯಿದ್ದರೆ ಸರ್ಕಾರದಿಂದ ಮನೆ ನಿರ್ಮಿಸಿ ಕೊಡುವವರೆಗೂ ಸ್ಥಳೀಯ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ಊಟ, ವಸತಿಯ ವ್ಯವಸ್ಥೆ ಮಾಡುತ್ತೇವೆ. ಬದುಕಿನ ಆಸರೆಗಾಗಿ ಸರ್ಕಾರಿ ಕೆಲಸ ನೀಡಬೇಕೆಂದರೆ ನಿಗದಿತ ವಯಸ್ಸು ಮೀರಿದೆ. ಹೀಗಾಗಿ ಮಗಳಿಗೆ ನೌಕರಿ ನೀಡಲು ಅವಕಾಶವಿದೆ ಎಂಬ ಅಭಿಪ್ರಾಯ ಮುಂದಿಟ್ಟರು.
ಅಧಿಕಾರಿಗಳು ನೀಡಲು ಬಂದ ಸರ್ಕಾರಿ ಸೌಲತ್ತುಗಳನ್ನು ಪಡೆಯಲು ಒಪ್ಪಿಗೆ ನೀಡಲಾಗದೇ ಮತ್ತು ತಿರಸ್ಕರಿಸಲೂ ಸಾಧ್ಯವಾಗದೇ ತಾಯಿ-ಮಗಳು ಗೊಂದಲಕ್ಕೀಡಾದ ಪ್ರಸಂಗ ಕಂಡು ಬಂತು. ಇದಕ್ಕೆ ಪ್ರತಿಕ್ರಿಯಿಸಿದ ರಾಜೇಶ್ವರಿ ಮಗಳು, ನನ್ನ ತಾಯಿ ಒಬ್ಬಳನ್ನೇ ವಸತಿ ನಿಲಯದಲ್ಲಿರಲು ಬಿಡುವುದಿಲ್ಲ. ಗುಜರಾತ್‌ಗೆ ಕರೆದುಕೊಂಡು ಹೋಗಿ ರಕ್ಷಣೆ ಮಾಡುತ್ತೇನೆ ಎಂದರೆ, ಮತ್ತೂಮ್ಮೆ ಸರ್ಕಾರಿ ಹುದ್ದೆ ಸ್ವೀಕರಿಸಲು ಪತಿಯ ಮನೆಯವರಿಂದ ಒಪ್ಪಿಗೆ ಪಡೆದ ಬಳಿಕ ತೀರ್ಮಾನ ತಿಳಿಸುತ್ತೇನೆ ಎಂದಳು.
ಆದಷ್ಟು ಬೇಗ ಅಭಿಪ್ರಾಯ ತಿಳಿಸಲು ಕಾಲಾವಕಾಶ ನೀಡಿದ ಅಧಿಕಾರಿ ರಶ್ಮಿ, ಮನೆ ಬಾಗಿಲಿಗೆ ಬಂದಿರುವ ಹುದ್ದೆಯನ್ನು ತಿರಸ್ಕರಿಸದೇ ಸಿಕ್ಕಿರುವ ಅವಕಾಶ ಒಪ್ಪಿಕೊಂಡರೆ ಉತ್ತಮ ಜೀವನ ನಡೆಸಬಹುದು. ಚೆನ್ನಾಗಿ ಯೋಚಿಸಿ ನಿರ್ಧಾರಕ್ಕೆ ಬನ್ನಿ ಎಂದು ಸಲಹೆ ನೀಡಿದರು.
ತಾಪಂ ಇಒ ನೀಲಗಂಗಾ ಬಬಲಾದ, ಪುರಸಭೆ ಕಿರಿಯ ಆರೋಗ್ಯ ನೈರ್ಮಲ್ಯಾಧಿಕಾರಿ ಬಸವರಾಜ ಪೂಜಾರಿ, ದಲಿತ ಮುಖಂಡರಾದ ಶ್ರವಣಕುಮಾರ ಮೊಸಲಗಿ, ಸಂದೀಪ ಕಟ್ಟಿ, ಸಂತೋಷ ಒಡೆಯರ, ಕ್ರೈಂ ಪಿಎಸ್‌ಐ ಶಿವಕಾಂತ ಕಮಲಾಪುರ, ಎಎಸ್‌ಐ ಚೆನ್ನಮಲ್ಲಪ್ಪಗೌಡ ಪಾಟೀಲ ಈ ಸಂದರ್ಭದಲ್ಲಿದ್ದರು.