Advertisement
ನಿರಂತರವಾಗಿ ಮೊಳಗಿದ “ಮತ್ತೆ ಹುಟ್ಟಿ ಬಾ ಅಣ್ಣಾ…’ ಘೋಷಣೆ. ನಟ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಸೋಮವಾರ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಕಂಠೀರವ ಸ್ಟುಡಿಯೋಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
Related Articles
Advertisement
ಈ ವೇಳೆ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಮಧ್ಯಾಹ್ನ 12 ಗಂಟೆಗೆ ಸಿಎಂ ಕುಮಾರಸ್ವಾಮಿಯವರು ಕಂಠೀರವ ಕ್ರೀಡಾಂಗಣಕ್ಕೆ ಬಂದ ನಂತರ ಪಾರ್ಥಿವ ಶರೀರವನ್ನು ಆ್ಯಂಬುಲೆನ್ಸ್‌ನಿಂದ ಹೂವುಗಳಿಂದ ಅಲಂಕರಿಸಿದ್ದ ಗಾಜಿನ ಹೊರಮೈಯಿರುವ ವಿಶೇಷ ವಾಹನದಲ್ಲಿ ಇರಿಸಲಾಯಿತು.
ಅಂಬರೀಶ್ ಅವರ ಕುಟುಂಬದವರು ವಾಹನಕ್ಕೆ ಪೂಜೆ ಸಲ್ಲಿಸದ ಬಳಿಕ 12.30ಕ್ಕೆ ಮೆರವಣಿಗೆ ಆರಂಭವಾಯಿತು. ಜೀರೋ ಟ್ರಾಫಿಕ್‌ನಲ್ಲೇ ಸಾಗಿದ ಮಾರ್ಗದಲ್ಲಿ ಹಡ್ಸನ್ ವೃತ್ತ, ಕೆ.ಜಿ.ರಸ್ತೆ ಹಾಗೂ ಮೈಸೂರು ಬ್ಯಾಂಕ್ ವೃತ್ತದಲ್ಲಿ ಅಂಬರೀಶ್ ಅವರ ಅಂತಿಮ ದರ್ಶನಕ್ಕೆ ಭಾರಿ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.
ಪಾರ್ಥಿವ ಶರೀರವಿದ್ದ ವಾಹನವು ಕೆ.ಜಿ.ರಸ್ತೆ ಪ್ರವೇಶಿಸುತ್ತಿದ್ದಂತೆ ನೂರಾರು ಅಭಿಮಾನಿಗಳು ಪುಷ್ಪವೃಷ್ಠಿ ಮಾಡಿ ಕಂಬನಿ ಮೀಡಿದರು. ಮಾರ್ಗ ಮಧ್ಯೆ ಅಂಬರೀಶ್ ಅವರು ಹೆಚ್ಚು ಒಡನಾಟವಿಟ್ಟುಕೊಂಡಿದ್ದ ಕೆಲ ಸ್ಥಳಗಳಲ್ಲಿ ಪಾರ್ಥಿವ ಶರೀರವಿದ್ದ ವಾಹನವನ್ನು ಸ್ವಲ್ಪ ಸಮಯ ನಿಲ್ಲಿಸಲಾಯಿತು.
ಅಂಬರೀಶ್ ಹೆಚ್ಚಿನ ಸಮಯ ಕಳೆಯುತ್ತಿದ್ದಂಥ ಬೆಂಗಳೂರು ಗಾಲ್ಫ್ ಕ್ಲಬ್ ಹಾಗೂ ಅವರ ತಾತ ಪಿಟೀಲು ಚೌಡಯ್ಯ ಅವರ ಸ್ಮರಣಾರ್ಥ ಟಿ.ಚೌಡಯ್ಯ ಸ್ಮಾರಕ ಸಭಾಂಗಣದ ಬಳಿ ಕೆಲಕಾಲ ವಾಹನ ನಿಲ್ಲಿಸಿ ಗೌರವ ಸೂಚಿಸಲಾಯಿತು. ಮೆರವಣಿಗೆ ಸಂಜೆ 4 ಗಂಟೆ ವೇಳೆಗೆ ಕಂಠೀರವ ಸ್ಟುಡಿಯೋ ತಲುಪಿತು.
ಆ ವೇಳೆಗಾಗಲೇ ಆವರಣದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದರಿಂದ ಕಂಠೀರವ ನಗರದ ಬಳಿಯ ಮೇಲ್ಸೇತುವೆ ಜನರಿಂದಲೇ ಭರ್ತಿಯಾಗಿತ್ತು. ಸ್ಟುಡಿಯೋ ಪ್ರವೇಶಕ್ಕೆ ಅವಕಾಶ ನೀಡುವಂತೆ ಅಭಿಮಾನಿಗಳು ಆಗ್ರಹಿಸಿದಾಗ ಕೆಲಕ್ಷಣ ಪೊಲೀಸರೊಂದಿಗೆ ವಾಗ್ವಾದ ನಡೆಯಿತು.
ಸ್ಟುಡಿಯೋ ಪ್ರವೇಶಿಸಲು ಮುಂದಾದಾಗ ಪೊಲೀಸರು, 15 ಸಾವಿರಕ್ಕೂ ಹೆಚ್ಚಿನ ಅಭಿಮಾನಿಗಳು ಒಳಗಿರುವುದರಿಂದ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಜತೆಗೆ ಹೊರಭಾಗದಲ್ಲಿ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದ್ದು, ಅಲ್ಲಿಯೇ ವೀಕ್ಷಿಸುವಂತೆ ಸಮಾಧಾನಪಡಿಸಿದರು.
ಲಘು ಲಾಠಿ ಪ್ರಹಾರ: ಪಾರ್ಥಿವ ಶರೀರ ಹೊತ್ತ ವಾಹನ ಗೊರಗುಂಟೆ ಪಾಳ್ಯ ತಲುಪುತ್ತಿದ್ದಂತೆ ಅಂತಿಮ ದರ್ಶನ ಪಡೆಯಲು ಸಾವಿರಾರು ಮಂದಿ ಸಾಲುಗಟ್ಟಿ ನಿಂತಿದ್ದರಿಂದ ತೀವ್ರ ವಾಹನ ದಟ್ಟಣೆ ಉಂಟಾಗಿತ್ತು. ನೂರಾರು ಅಭಿಮಾನಿಗಳು ವಾಹನದ ಕಡೆಗೆ ನುಗ್ಗಲು ಯತ್ನಿಸಿದರು. ಪೊಲೀಸರು ಎಷ್ಟೇ ಮನವಿ ಮಾಡಿದರೂ ಅಭಿಮಾನಿಗಳು ಅರ್ಥ ಮಾಡಿಕೊಳ್ಳದಿದ್ದಾಗ ಲಘು ಲಾಠ ಪ್ರಹಾರ ನಡೆಸಬೇಕಾಯಿತು.
ಅಂಗಡಿ ಮುಂಗಟ್ಟು ಬಂದ್: ಅಂತಿಮ ಯಾತ್ರೆ ಸಾಗಿದ ಮಾರ್ಗದುದ್ದಕ್ಕೂ ಮಳಿಗೆದಾರರು ಸ್ವಯಂಪ್ರೇರಿತವಾಗಿ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿ ಗೌರವ ಸಲ್ಲಿಸಿದರು. ವಾಣಿಜ್ಯ ಮಳಿಗೆಗಳು, ಅಪಾರ್ಟ್‌ಮೆಂಟ್ ಹಾಗೂ ಕೆಲ ಮನೆಗಳ ಮುಂಭಾಗ ಸ್ಥಳೀಯರು ಅಂಬರೀಶ್ ಭಾವಚಿತ್ರವಿಟ್ಟು ಶ್ರದ್ಧಾಂಜಲಿ ಸಲ್ಲಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮಾರ್ಗಮಧ್ಯದ ಎಲ್ಲ ಪೆಟ್ರೋಲ್ ಬಂಕ್‌ಗಳನ್ನು ಬಂದ್ ಮಾಡಲಾಗಿತ್ತು. ಬಂಕ್‌ಗಳ ಬಳಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಕಟ್ಟಡಗಳನ್ನೇರಿ ದರ್ಶನ ಪಡೆದರು: ಪಾರ್ಥಿವ ಶರೀರ ಹೊತ್ತ ವಾಹನ ಸಾಗಿದ ರಸ್ತೆಯುದ್ದಕ್ಕೂ ಎರಡೂ ಬದಿಯ ಕಟ್ಟಡಗಳ ಮೇಲೆ ನಿಂತ ಅಭಿಮಾನಿಗಳು, ಸಾರ್ವಜನಿಕರು ಅಂತಿಮ ದರ್ಶನ ಪಡೆದುಕೊಂಡರು. ಇದರೊಂದಿಗೆ ಪಾದಚಾರಿ ಮೇಲ್ಸೇತುವೆಗಳ ಮೇಲೇರಿದ್ದ ಅಭಿಮಾನಿಗಳು ವಾಹನ ಬರುತ್ತಿದ್ದಂತೆ ಹೂ ಮಳೆ ಸುರಿಸಿ ನಮನ ಸಲ್ಲಿಸಿದರು. ಜತೆಗೆ ನೆಚ್ಚಿನ ನಟನ ಅಂತಿಮ ಯಾತ್ರೆಯ ಚಿತ್ರಣವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದುದು ಕಂಡುಬಂತು.
ದೂರದಿಂದ ಬಂದ ಅಭಿಮಾನಿಗಳು: ಅಂತಿಮ ದರ್ಶನಕ್ಕಾಗಿ ದೂರದ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಅಭಿಮಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಳವಳ್ಳಿಯ ಸೋಮರಾಜು ಹಾಗೂ ಬನ್ನೂರಿನ ಆನಂದ್ ಸೈಕಲ್, ಬೈಕ್ ಮುಂದೆ ಅಂಬರೀಶ್ ಅವರ ಭಾವಚಿತ್ರ ಇಟ್ಟುಕೊಂಡು ಕಂಠೀರವ ಸ್ಟುಡಿಯೋವರೆಗೆ ಯಾತ್ರೆಯಲ್ಲಿ ಸಾಗಿ ಬಂದರು.
ದೇಹದ ತುಂಬೆಲ್ಲ ಅಂಬಿ ನಟನೆಯ ಸಿನಿಮಾಗಳ ಹೆಸರುಗಳನ್ನೇ ಅಚ್ಚೆ ಹಾಕಿಸಿಕೊಂಡು 40 ವರ್ಷಗಳಿಂದ ಅಭಿಮಾನಿಯಾಗಿರುವ ಚಲ್ಲಘಟ್ಟದ ನಿವಾಸಿ ಕೆ.ನಾಗೇಶ್ ಗೌಡ ಅಗಲಿದ ನೆಚ್ಚಿನ ನಟನನ್ನು ನೆನೆದು ಕಣ್ಣೀರು ಹಾಕಿದರು.
ಅಭಿಮಾನಕ್ಕೆ ಮರುಗಿದ ತಾಯಿ, ಮಗ: ಅಂಬರೀಶ್ ಅವರ ಪಾರ್ಥಿವ ಶರೀರವಿದ್ದ ವಾಹನದಲ್ಲಿ ಪತ್ನಿ ಸುಮಲತಾ, ಪುತ್ರ ಅಭಿಷೇಕ್‌ಗೌಡ ಹಾಗೂ ಕುಟುಂಬದವರು ಕುಳಿತಿದ್ದರು. ಅಂತಿಮ ಯಾತ್ರೆಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿ ಅಂಬಿಯವರ ದರ್ಶನ ಪಡೆಯುತ್ತಿದ್ದ ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ತಾಯಿ, ಮಗ ಇಬ್ಬರೂ ಕೈಮುಗಿದು ನಮಸ್ಕರಿಸಿದರು.
ಕನ್ನಡ ಬಾವುಟದ ಗೌರವ ಯಾತ್ರೆಯುದ್ಧಕ್ಕೂ ಕನ್ನಡ ಸಂಘಟನೆಗಳ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕನ್ನಡದ ಬಾವುಟವನ್ನು ಹಾರಿಸುತ್ತಾ ಮೆರವಣಿಗೆಯ ಮುಂದೆ ಸಾಗಿದರು. ಅಂಬಿ ಮತ್ತೆ ಹುಟ್ಟಿ ಬಾ, ಮಂಡ್ಯದ ಗಂಡು ಬೆಂಕಿಯ ಚೆಂಡು, ಅಂಬಿ ರೆಬೆಲ್ ಸ್ಟಾರ್ ಸೇರಿದಂತೆ ಇನ್ನಿತರ ಘೋಷಣೆಗಳನ್ನು ಕೂಗಿದರು.
ಅಂತಿಮಯಾತ್ರೆಯಲ್ಲಿ ಪಾರ್ಥಿವ ಶರೀರ ಹೊತ್ತು ಸಾಗಿದ ವಾಹನವನ್ನು ವಿಶೇಷ ಹೂ ಹಾಗೂ ತುಳಸಿ ಮಾಲೆಗಳಿಂದ ಅಲಂಕರಿಸಲಾಗಿತ್ತು. ಚೆಂಡು ಹೂ, ಬಿಳಿ ಬಣ್ಣದ ಸೇವಂತಿಗೆ ಹಾಗೂ ತುಳಸಿ ಹಾರಗಳನ್ನು ತ್ರಿವರ್ಣ ಧ್ವಜ ಮಾದರಿಯಲ್ಲಿ ವಾಹನದ ಸುತ್ತಲು ಹರಡಲಾಗಿತ್ತು. ವಾಹನದ ಮುಂಭಾಗದಲ್ಲಿ ಅಂಬರೀಶ್ ಅವರಿಗೆ 2009ರಲ್ಲಿ ಜೀವಮಾನ ಸಾಧನೆಗೆ ನೀಡಿದ್ದ ಫಿಲ್ಮ್ಫೇರ್ ಪ್ರಶಸ್ತಿಯ ಛಾಯಾಚಿತ್ರವನ್ನು ದೊಡ್ಡದಾಗಿ ಹಾಕಲಾಗಿತ್ತು.
ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ: ಕಂಠೀರವ ಸ್ಟುಡಿಯೋ ಒಳಭಾಗದಲ್ಲಿ ಅಂತ್ಯಕ್ರಿಯೆಗೆ ಬೇಕಾದ ಎಲ್ಲ ಸಿದ್ಧತೆಯನ್ನು ಸೋಮವಾರ ಬೆಳಗ್ಗೆ ಹೊತ್ತಿಗೆ ಪೂರ್ಣಗೊಳಿಸಲಾಗಿತ್ತು. ಗಣ್ಯರು ಹಾಗೂ ಸಾರ್ವಜನಿಕರಿಗೆ ಅಂತ್ಯಕ್ರಿಯೆ ಪ್ರಕ್ರಿಯೆಗಳನ್ನು ವೀಕ್ಷಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಅಂತ್ಯ ಸಂಸ್ಕಾರಕ್ಕೆ ಗಂಧ, ಅರಳಿ, ಅತ್ತಿ, ಬೇವು ಹಾಗೂ ನಿಲಗಿರಿ ಮರದ ತುಂಡುಗಳನ್ನು ಬಳಸಲಾಗಿತ್ತು.
4.15ಕ್ಕೆ ಪುರೋಹಿತರು ಅಂತಿಮ ವಿಧಿ ವಿಧಾನದ ಶ್ಲೋಕ ಆರಂಭಿಸಿದರು. ನಂತರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸಹಿತವಾಗಿ ಸಚಿವರು, ಶಾಸಕರು, ಕುಟುಂಬದ ಸದಸ್ಯರು, ಚಿತ್ರರಂಗದ ಗಣ್ಯರು ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮೂರು ಬಾರಿ ಕುಶಾಲು ತೋಪು ಸಿಡಿಸಿ ಪೊಲೀಸರು ಸರ್ಕಾರಿ ಗೌರವ ಸಲ್ಲಿಸಿದರು.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಸಂಜೆ 5.07ಕ್ಕೆ ರಾಷ್ಟ್ರ ಧcಜವನ್ನು ಅಂಬರೀಶ್ ಅವರ ಕುಟುಂಬಕ್ಕೆ ಹಸ್ತಾಂತರಿಸಿ, ಪಾರ್ಥಿವ ಶರೀರವನ್ನು ಅಂತ್ಯ ಸಂಸ್ಕಾರಕ್ಕಾಗಿ ಕುಟುಂಬಕ್ಕೆ ವರ್ಗಾಯಿಸಿದರು.
ಕಟ್ಟೆ ಮೇಲೆ ಅಂಬಿ ನೆನಪು: ಅಂಬರೀಶ್ ಅವರ ಪಾರ್ಥಿವ ಶರೀರದ ದಹನಕ್ಕೆ ನಿರ್ಮಿಸಿದ ಕಟ್ಟೆಗೆ ವಿಕ್ಕಿ ಆರ್ಟ್ ಕಲಾವಿದರು ಅಂಬರೀಶ್ ಅವರ ತೀರ ಇತ್ತೀಚಿನ ಚಿತ್ರ ಹಾಗೂ ಹಳೇ ಚಿತ್ರವನ್ನು ಕೆಲವೇ ಗಂಟೆಯಲ್ಲಿ ಬಿಡಿಸಿ ಗಮನ ಸೆಳೆದರು. ಜತೆಗೆ “ಪಂಚಭೂತಗಳಲ್ಲಿ ಲೀನವಾದ ದೊಡ್ಡರಸಿನಕೆರೆ ಎಂ.ಹುಚ್ಚೇಗೌಡರ ಪುತ್ರ”ರತ್ನ’ ಹಾಗೂ “ಕಲಿಯುಗದ ಕರ್ಣ ಕಾಲದಲ್ಲಿ ಕರಗಿಹೋದೆಯಾ’ ಎಂಬಿತ್ಯಾದಿ ಬರಹಗಳನ್ನು ಬರೆಯಲಾಗಿತ್ತು. ಸಮಾಧಿ ಕಟ್ಟೆಯನ್ನು ಸಂಪೂರ್ಣ ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.
ಚಿತ್ರರಂಗ ಗಣ್ಯರಾದ ಶ್ರೀನಾಥ್, ರಾಜೇಂದ್ರ ಸಿಂಗ್ ಬಾಬು, ಸುಂದರರಾಜ್, ಪ್ರಮೀಳಾ ಜೋಷಾಯಿ, ಶಿವರಾಜ ಕುಮಾರ್, ಶೃತಿ, ಎಸ್. ನಾರಾಯಣ, ಅರ್ಜುನ್ ಸರ್ಜಾ, ರವಿಚಂದ್ರನ್, ದೇವರಾಜ್, ದೊಡ್ಡಣ್ಣ, ದರ್ಶನ, ಯಶ್, ಮಂಜುಳಾ ನಾಯ್ಡು, ಸರೋಜಾ ದೇವಿ, ಪುನೀತ್ ರಾಜಕುಮಾರ್, ಉಪೇಂದ್ರ, ಗಣೇಶ್, ಜಗ್ಗೇಶ್, ಸಾಧು ಕೋಕಿಲಾ, ಗುರುಕಿರಣ್, ಅನಿರುದ್ಧ್, ರಂಗಾಯಣ ರಘು, ಬುಲೆಟ್‌ಪ್ರಕಾಶ್, ಆದಿತ್ಯ,
ದುನಿಯ ವಿಜಯ್, ಜೋಗಿ ಪ್ರೇಮ್, ಪ್ರಥಮ್, ನೀನಾಸಂ ಸತೀಶ್, ನೆನಪಿರಲಿ ಪ್ರೇಮ್, ಶ್ರೀನಗರ ಕಿಟ್ಟಿ, ಸಂಚಾರಿ ವಿಜಯ್, ಧ್ರುವ ಸರ್ಜಾ, ಸಾ.ರಾ.ಗೋವಿಂದು ಇತರೆ ಗಣ್ಯರು ಅಂತಿಮ ದರ್ಶನ ಪಡೆದರು. ರಾಜಕೀಯ ಗಣ್ಯರು ರಾಜಕೀಯ ರಂಗದ ಪ್ರಮುಖರಾದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಸಚಿವರಾದ ಸಾ.ರಾ.ಮಹೇಶ್,
ಡಿ.ಸಿ.ತಮ್ಮಣ್ಣ, ಕೆ.ಜೆ.ಜಾರ್ಜ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಂಸದರಾದ ಡಿ.ಕೆ.ಸುರೇಶ್, ಶಿವರಾಮೇಗೌಡ, ವಿಧಾನ ಪರಿಷತ್ ಸದಸ್ಯರಾದ ಅ.ದೇವೇಗೌಡ, ತೇಜಸ್ವಿನಿಗೌಡ ಮಾಜಿ ಸಚಿವರಾದ ಎಂ.ಬಿ. ಪಾಟೀಲ್, ಎಚ್.ಆಂಜನೇಯ, ಶಾಸಕರಾದ ಗೋವಿಂದ್ ಕಾರಜೋಳ, ಎಂ. ಸತೀಶ್ ರೆಡ್ಡಿ, ಉದಯ್ ಗರುಡಾಚಾರ್, ಮುನಿರತ್ನ, ಗೋಪಾಲಯ್ಯ, ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವ ಚೆಲುವರಾಯಸ್ವಾಮಿ ಮೊದಲಾದವರು ಅಂತ್ಯಕ್ರಿಯೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಗರ ಜಿಲ್ಲಾಧಿಕಾರಿ ವಿಜಯ ಶಂಕರ್, ನಗರ ಪೊಲೀಸ್ ಆಯುಕ್ತ ಟಿ.ಸುನೀಲ್, ವಾರ್ತಾ ಇಲಾಖೆ ನಿರ್ದೇಶಕ ಎನ್.ವಿಶು ಕುಮಾರ್ ಸೇರಿದಂತೆ ವಿವಿಧ ಕ್ಷೇತ್ರದ ಹಲವು ಗಣ್ಯರು ಇದ್ದರು. ಅಂಬರೀಶ್ ಅವರ ಪತ್ನಿ ಸುಮಲತಾ ಹಾಗೂ ಸಹೋದರ ಆನಂದ್ ಸಹಿತವಾಗಿ ಕುಟುಂಬ ವರ್ಗ, ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ,
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ಎಸ್.ಎಂ.ಕೃಷ್ಣ, ಕೇಂದ್ರದ ಮಾಜಿ ಸಚಿವ ಸುಶೀಲ್ ಕುಮಾರ್ ಶಿಂಧೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಸಚಿವರಾದ ಡಿ.ಕೆ.ಶಿವಕುಮಾರ್, ಎಚ್.ಡಿ.ರೇವಣ್ಣ, ಡಾ.ಜಯಮಾಲಾ, ಸಾ.ರಾ.ಮಹೇಶ್, ತೆಲುಗು ಹಿರಿಯ ನಟ ಮೋಹನ್ ಬಾಬು,
ಸಿನಿಮಾರಂಗದ ಬಿ.ಸರೋಜಾದೇವಿ, ಜಯಪ್ರದಾ, ಪ್ರಮೀಳಾ ಜೋಷಾಯಿ, ಶ್ರೀನಾಥ್, ದೇವರಾಜ್, ಎಸ್.ನಾರಾಯಣ, ರಮೇಶ್ ಅರವಿಂದ್, ರವೀಚಂದ್ರನ್, ಶಿವರಾಜ್‌ಕುಮಾರ್, ದರ್ಶನ್, ಯಶ್, ಪುನೀತ್ ರಾಜ್‌ಕುಮಾರ್ ಮೊದಲಾದ ಗಣ್ಯರ ಕಂಬನಿ, ಸಹಸ್ರಾರು ಅಭಿಮಾನಿಗಳ ಕಂಬನಿ ನಡುವೆ ಸಕಲ ಸರ್ಕಾರಿ ಗೌರವದೊಂದಿಗೆ ಅಂಬರೀಶ್ ಅವರಿಗೆ ವಿದಾಯ ಹೇಳಲಾಯಿತು.
* ವೆಂ. ಸುನೀಲ್ ಕುಮಾರ್/ಜಯಪ್ರಕಾಶ್ ಬಿರಾದಾರ್