Advertisement
“ಪ್ರತೀದಿನಗಳು ಕಳೆದಂತೆ ಎರಡೂ ದೇಶದ ಜನ ಬಹಳ ಹತ್ತಿರಾಗುತ್ತಿದ್ದಾರೆ. ಪ್ರೀತಿಯ ಬೆಸುಗೆ ನಮ್ಮನ್ನು ಬೆಸೆಯುತ್ತಿದೆ. ನಾವು ಪರಸ್ಪರ ಇನ್ನೊಬ್ಬರ ಹೆಸರನ್ನು ಸ್ಪಷ್ಟವಾಗಿ ಉಚ್ಚರಿಸುತ್ತಿದ್ದೇವೆ. ಪರಸ್ಪರರ ಉಚ್ಚಾರಣೆಯನ್ನು ಸರಿಯಾಗಿ ತಿಳಿಯುತ್ತಿದ್ದೇವೆ. ಹ್ಯಾಲೋವೀನ್‌ನಲ್ಲಿ ಭಾರತದ ಮಕ್ಕಳು ಸ್ಪೈಡರ್‌ಮ್ಯಾನ್ ಆಗುತ್ತಾರೆ, ಅಮೆರಿಕದ ಮಕ್ಕಳು ಭಾರತದ ನಾಟುನಾಟು ಹಾಡಿಗೆ ಕುಣಿಯುತ್ತಿದ್ದಾರೆ’ ಎಂದು ಮೋದಿ ವರ್ಣಿಸಿದರು.
Related Articles
Advertisement
ಔತಣಕೂಟದಲ್ಲಿ ಭಾಗಿಯಾಗಿದ್ದ 400 ಮಂದಿ ಅತಿಥಿಗಳಲ್ಲಿ ಕೈಗಾರಿಕೋದ್ಯಮಿಗಳಾದ ಮುಕೇಶ್ ಅಂಬಾನಿ, ನೀತಾ ಅಂಬಾನಿ, ಗೂಗಲ್ ಸಿಇಒ ಸುಂದರ್ ಪಿಚೈ, ಆ್ಯಪಲ್ ಸಿಇಒ ಟಿಮ್ ಕುಕ್, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ, ಆನಂದ್ ಮಹೀಂದ್ರಾ, ಮಾನವ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್-3, ಟೆನಿಸ್ ದಂತಕಥೆ ಬಿಲ್ಲಿ ಜೀನ್ ಕಿಂಗ್, ಸಿನಿಮಾ ಕ್ಷೇತ್ರದ ಎಂ.ನೈಟ್ ಶ್ಯಾಮಲನ್, ಫ್ಯಾಷನ್ ಡಿಸೈನರ್ ರಾಲ್ಫ್ ಲಾರೆನ್, ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ರಿಕಿ ಕೇಜ್, ಜೋಶುವಾ ಬೆಲ್, ಭಾರತೀಯ ಅಮೆರಿಕನ್ ಜನಪ್ರತಿನಿಧಿಗಳಾದ ಪ್ರಮೀಳಾ ಜಯಪಾಲ್, ಥಂಡೇದಾರ್, ರೋ ಖನ್ನಾ, ಅಮಿ ಬೇರಾ ಮತ್ತು ರಾಜಾ ಕೃಷ್ಣಮೂರ್ತಿ ಸೇರಿದಂತೆ ಹಲವು ಗಣ್ಯರಿದ್ದರು. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಸಚಿವ ಎಸ್.ಜೈಶಂಕರ್ ಕೂಡ ಸಾಥ್ ನೀಡಿದರು.
ಔತಣಕೂಟದಲ್ಲಿ ಸಿರಿಧಾನ್ಯಗಳು, ಅಣಬೆ, ಜೋಳದ ಸಲಾಡ್, ಸ್ಟ್ರಾಬೆರಿ ಕೇಕ್ ಸೇರಿದಂತೆ ಬಹುತೇಕ ಸಸ್ಯಾಹಾರಿ ಖಾದ್ಯಗಳನ್ನೇ ಪ್ರಧಾನವಾಗಿ ಬಳಸಲಾಗಿತ್ತು. 400ಕ್ಕೂ ಹೆಚ್ಚು ಅತಿಥಿಗಳು ಪಾಲ್ಗೊಂಡಿದ್ದರು. ಗಾನಕೋಗಿಲೆ ಲತಾ ಮಂಗೇಶ್ಕರ್ ಅವರು ಹಾಡಿರುವ “ಏ ಮೇರೆ ವತನ್ ಕೆ ಲೋಗೋ’, ಕಿಶೋರ್ ಕುಮಾರ್ ಅವರ 80ರ ದಶಕದ ಹಿಟ್ “ಓಂ ಶಾಂತಿ ಓಂ’ ಪ್ರಮುಖ ಆಕರ್ಷಣೆಯಾಗಿತ್ತು. ಔತಣಕೂಟದ ಆರಂಭದಿಂದ ಅಂತ್ಯದವರೆಗೂ ಹಿನ್ನೆಲೆಯಲ್ಲಿ ಕೇಳಿಬರುತ್ತಿದ್ದ ಈ ಹಾಡುಗಳು ನೆರೆದವರ ಮನಸ್ಸನ್ನು ಅರಳಿಸಿದವು.
ಅಮೆರಿಕ ಸಂಸತ್‌ನಲ್ಲಿ ಮೋದಿ ನುಡಿಗಳು
ಭಾರತದ ಆರ್ಥಿಕ ಸ್ಥಿತಿ: ಪ್ರಧಾನಿ ಹುದ್ದೆಗೇರಿದ ಬಳಿಕ ನಾನು ಮೊತ್ತಮೊದಲ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿದಾಗ, ಭಾರತವು ಜಗತ್ತಿನ 10ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ಈಗ ಭಾರತವು 5ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಸದ್ಯದಲ್ಲೇ 3ನೇ ಅತಿದೊಡ್ಡ ಆರ್ಥಿಕತೆ ಎಂಬ ಖ್ಯಾತಿಯನ್ನು ಗಳಿಸಿಕೊಳ್ಳಲಿದೆ. ನಾವು ದೊಡ್ಡದಾಗಿ ಬೆಳೆಯುತ್ತಿರುವುದು ಮಾತ್ರವಲ್ಲ, ವೇಗವಾಗಿಯೂ ಬೆಳೆಯುತ್ತಿದ್ದೇವೆ. ಭಾರತವು ಉತ್ತುಂಗಕ್ಕೆ ಏರಿದಂತೆ ಇಡೀ ಜಗತ್ತೂ ಉತ್ತುಂಗಕ್ಕೇರುತ್ತದೆ.
ಮಹಿಳಾ ಸಬಲೀಕರಣ: ಆಧುನಿಕ ಭಾರತದಲ್ಲಿ ಮಹಿಳೆಯರು ನಮ್ಮನ್ನು ಉತ್ತಮ ಭವಿಷ್ಯದತ್ತ ಕೊಂಡೊಯ್ಯುತ್ತಿದ್ದಾರೆ. ಮಹಿಳೆಯರಿಗೆ ಅನುಕೂಲವಾಗುವ ಅಭಿವೃದ್ಧಿಯಷ್ಟೇ ಭಾರತದ ಧ್ಯೇಯವಲ್ಲ. ಮಹಿಳಾ ನೇತೃತ್ವದಲ್ಲಿ ಭಾರತ ಅಭಿವೃದ್ಧಿಯಾಗಬೇಕು. ಪ್ರಗತಿಯ ಪಯಣದ ಸಾರಥ್ಯವನ್ನು ಮಹಿಳೆಯರೇ ವಹಿಸಿಕೊಳ್ಳಬೇಕು ಎನ್ನುವುದು ಭಾರತದ ಉದ್ದೇಶವಾಗಿದೆ. ಅದಕ್ಕೆ ಪೂರಕವೆಂಬಂತೆ ಬಡ ಬುಡಕಟ್ಟು ಹಿನ್ನೆಲೆಯ ಮಹಿಳೆ ಈಗ ಭಾರತದ ರಾಷ್ಟ್ರಪತಿಯ ಹುದ್ದೆಗೇರಿದ್ದಾರೆ.
ವೈವಿಧ್ಯತೆಯಲ್ಲಿ ಏಕತೆ: ಜಗತ್ತಿನಲ್ಲಿರುವ ಎಲ್ಲ ನಂಬಿಕೆ, ಎಲ್ಲ ಧರ್ಮಗಳಿಗೂ ಭಾರತವೇ ತಾಯಿ. ಭಾರತದಲ್ಲಿ ವೈವಿಧ್ಯತೆ ಎನ್ನುವುದು ಬದುಕಿನ ನೈಸರ್ಗಿಕ ಮಾರ್ಗ. ಇಂದು ಇಡೀ ಜಗತ್ತೇ ಭಾರತದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಬಯಸುತ್ತಿದೆ. ನಮ್ಮಲ್ಲಿ ಸುಮಾರು 2,500 ರಾಜಕೀಯ ಪಕ್ಷಗಳಿವೆ. ಸುಮಾರು 20 ವಿವಿಧ ಪಕ್ಷಗಳು ವಿವಿಧ ರಾಜ್ಯಗಳಲ್ಲಿ ಆಡಳಿತ ನಡೆಸಿವೆ. 22 ಅಧಿಕೃತ ಭಾಷೆಗಳಿವೆ, ಸಾವಿರಾರು ಉಪಭಾಷೆಗಳಿವೆ. ಆದರೂ ನಾವೆಲ್ಲರೂ ಒಂದೇ ಧ್ವನಿಯಲ್ಲಿ ಮಾತನಾಡುತ್ತೇವೆ.
ಭಾರತದ ವಿದೇಶಾಂಗ ನೀತಿ:
ನಾವು “ವಸುದೈವ ಕುಟುಂಬಕಂ’ ಎಂಬ ನೀತಿಯನ್ನು ಅನುಸರಿಸುತ್ತೇವೆ. ಇಡೀ ಜಗತ್ತೇ ಒಂದು ಕುಟುಂಬದಂತೆ ಎಂದು ನಂಬಿದ್ದೇವೆ. ಸರ್ವರ ಏಳಿಗೆಗಾಗಿ ನಾವು ವಿಶ್ವದೊಂದಿಗೆ ಸಂಬಂಧ ಹೊಂದಿದ್ದೇವೆ. ಜಿ20 ಶೃಂಗದ ನೇತೃತ್ವ ವಹಿಸಿದ್ದಾಗಲೂ ನಾವು “ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ಥೀಮ್‌ನ ಸ್ಫೂರ್ತಿಯಲ್ಲಿ ಮುನ್ನಡೆದಿದ್ದೇವೆ.
ಭಾರತ ಪ್ರಜಾಪ್ರಭುತ್ವದ ತಾಯಿ: ಪ್ರಜಾಸತ್ತೆಯು ಅತ್ಯಂತ ಪವಿತ್ರವಾದದ್ದು. ಅದು ಅತ್ಯಂತ ದೀರ್ಘಾವಧಿಯಲ್ಲಿ ವಿಕಸನಗೊಂಡು, ಹಲವು ರೂಪಗಳನ್ನು ಪಡೆದುಕೊಳ್ಳುತ್ತಾ ಬಂದಿದೆ. ಇತಿಹಾಸದುದ್ದಕ್ಕೂ ಒಂದು ವಿಷಯವಂತೂ ಸ್ಪಷ್ಟವಾಗಿದೆ. ಅದೇನೆಂದರೆ, ಪ್ರಜಾಪ್ರಭುತ್ವ ಎನ್ನುವುದು ಸಮಾನತೆ ಮತ್ತು ಘನತೆಯನ್ನು ಬೆಂಬಲಿಸುವಂಥ ಶಕ್ತಿಯಾಗಿದೆ. ಚರ್ಚೆ ಮತ್ತು ಸಂವಾದವನ್ನು ಸ್ವಾಗತಿಸುವ ಕಲ್ಪನೆಯಾಗಿದೆ. ಆಲೋಚನೆಗಳು ಮತ್ತು ಅಭಿವ್ಯಕ್ತಿಗೆ ರೆಕ್ಕೆ ನೀಡುವಂಥ ಸಂಸ್ಕೃತಿಯಾಗಿದೆ. ಇಂಥ ಮೌಲ್ಯಗಳನ್ನು ಹೊಂದಿರುವ ಭಾರತವು ನಿಜಕ್ಕೂ ಪುಣ್ಯಶಾಲಿ. ಪ್ರಜಾಪ್ರಭುತ್ವದ ಪ್ರೇರಣೆಯ ವಿಕಸನದಲ್ಲಿ ಭಾರತವು “ಪ್ರಜಾಸತ್ತೆಯ ಮಹಾತಾಯಿ’ಯಾಗಿ ಪರಿಗಣಿಸಲ್ಪಡುತ್ತದೆ.
ರಾಹುಲ್ ಗಾಂಧಿ ವಿರುದ್ಧ ವಾಗ್ಧಾಳಿ?
“ಇಂದು ಜಗತ್ತಿನ ಎರಡು ಅತಿದೊಡ್ಡ ಪ್ರಜಾಪ್ರಭುತ್ವ ದೇಶಗಳ ಬಾಂಧವ್ಯವನ್ನು ಸಂಭ್ರಮಿಸಲು ನೀವೆಲ್ಲರೂ ಒಂದಾಗಿ ಇಲ್ಲಿ ಬಂದಿರುವುದು ನೋಡಿ ನನಗೆ ಸಂತೋಷವಾಗಿದೆ. ಮನೆಗಳಲ್ಲಿ ಅಥವಾ ದೇಶದೊಳಗೆ ಭಿನ್ನ ಆಲೋಚನೆಗಳು, ಭಿನ್ನ ಅಭಿಪ್ರಾಯಗಳು ಇರಬಹುದು. ಆದರೆ, ನಮ್ಮ ದೇಶದ ಬಗ್ಗೆ ಮಾತನಾಡುವಾಗ ಎಲ್ಲರೂ ಒಗ್ಗೂಡಬೇಕು. ಅದನ್ನು ಅಮೆರಿಕದ ಸಂಸದರಾದ ನೀವು ಮಾಡಿ ತೋರಿಸಿದ್ದೀರಿ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ಟೀಕಿಸುತ್ತಾ ಈ ಮಾತುಗಳನ್ನು ಹೇಳಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಮೆರಿಕ ಸೇರಿದಂತೆ ವಿದೇಶ ಭೇಟಿ ವೇಳೆ ರಾಹುಲ್ ಅವರು ಪದೇ ಪದೆ ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡುತ್ತಿರುವುದಕ್ಕೆ ಪ್ರತಿಯಾಗಿ ಮೋದಿ ಈ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ.
15 ಬಾರಿ ಎದ್ದು ನಿಂತು ಗೌರವ; 79 ಬಾರಿ ಕರತಾಡನ!
ಅಮೆರಿಕ ಸಂಸತ್‌ನಲ್ಲಿ ಪ್ರಧಾನಿ ಮೋದಿಯವರ ಸುಮಾರು ಒಂದು ಗಂಟೆ ಅವಧಿಯ ಭಾಷಣಕ್ಕೆ ಅಮೆರಿಕದ ಸಂಸದರಿಂದ ಚಪ್ಪಾಳೆಯ ಸುರಿಮಳೆಯೇ ಸುರಿದಿದೆ. ಮೋದಿಯವರು ಸದನದೊಳಕ್ಕೆ ಪ್ರವೇಶಿಸುತ್ತಿದ್ದಂತೆಯೇ ಎಲ್ಲರೂ ಎದ್ದುನಿಂತು ಚಪ್ಪಾಳೆ ತಟ್ಟುತ್ತಾ ಸ್ವಾಗತಿಸಿದರು. ಅಲ್ಲಿಂದ ವೇದಿಕೆಯತ್ತ ನಡೆದಾಗ, ಗ್ರ್ಯಾಂಡ್ ಹೌಸ್ ಚೇಂಬರ್‌ನಲ್ಲಿ ಕುಳಿತಿದ್ದ ಭಾರತೀಯ ಸಮುದಾಯದ ಸದಸ್ಯರು “ಮೋದಿ, ಮೋದಿ’, “ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗುತ್ತಿದ್ದರು. ನಂತರ ಪ್ರಧಾನಿ ಭಾಷಣದ ವೇಳೆಯೂ ಸುಮಾರು 15 ಬಾರಿ ಸಂಸದರು ಎದ್ದು ನಿಂತು ಗೌರವ ಸೂಚಿಸಿದ್ದಲ್ಲದೇ, 79 ಬಾರಿ ಕರತಾಡನ ಮಾಡುವ ಮೂಲಕ ಮೋದಿಯ ಮಾತುಗಳಿಗೆ ಸಹಮತ ವ್ಯಕ್ತಪಡಿಸಿದ್ದು ಕಂಡುಬಂತು.
“ಕಮಲಾ ಹ್ಯಾರಿಸ್-ಸಮೋಸಾ ಕಾಕಸ್’
ಅಮೆರಿಕದಲ್ಲಿ ಲಕ್ಷಾಂತರದ ಮಂದಿ ಭಾರತದಲ್ಲಿ ಬೇರುಗಳನ್ನು ಹೊಂದಿದ್ದಾರೆ. ಅವರಲ್ಲಿ ಕೆಲವರು ಈ ಸದನದ ಛೇಂಬರ್‌ನಲ್ಲಿ ಕುಳಿತಿದ್ದಾರೆ. ಒಬ್ಬರು ನನ್ನ ಹಿಂದೆ ಕುಳಿತಿದ್ದಾರೆ. ಅವರು ಇತಿಹಾಸವನ್ನೇ ನಿರ್ಮಿಸಿದವರು ಎಂದು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕುರಿತು ಪ್ರಧಾನಿ ಮೋದಿ ನುಡಿದಾಗ, ಮತ್ತೂಂದು ಬಾರಿ ಚಪ್ಪಾಳೆಯ ಸುರಿಮಳೆ ಸುರಿಯಿತು. ಭಾರತೀಯರು ಕೇವಲ ಸ್ಪೆಲ್ಲಿಂಗ್ ಬೀಯಲ್ಲಿ ಮಾತ್ರವಲ್ಲ, ಎಲ್ಲ ಕ್ಷೇತ್ರಗಳಲ್ಲೂ ಬುದ್ಧಿವಂತರು ಎಂದೂ ಮೋದಿ ಹೇಳುವಾಗ ಸಂಸದರೆಲ್ಲರೂ ನಗೆಗಡಲಲ್ಲಿ ತೇಲಿದರು. ಇದೇ ವೇಳೆ, “ಸಮೋಸಾ ಕಾಕಸ್ ಈಗ ಇಡೀ ಸದನದ ಫ್ಲೇವರ್ ಆಗಿ ಹೊರಹೊಮ್ಮಿದೆ. ಅದು ಇನ್ನಷ್ಟು ಬೆಳೆದು ಭಾರತದ ವೈವಿಧ್ಯಮಯ ಖಾದ್ಯದ ಸವಿಯನ್ನು ಇಲ್ಲಿ ಪಸರಿಸಲಿ’ ಎಂದೂ ಮೋದಿ ಹೇಳಿದರು. ಭಾರತದ ಜನಪ್ರಿಯ ಖಾದ್ಯಗಳಲ್ಲಿ ಒಂದಾದ ಸಮೋಸಾವನ್ನು ಅಮೆರಿಕಕ್ಕೆ ಹೋದ ಭಾರತೀಯರು ಅಲ್ಲೂ ಜನಪ್ರಿಯಗೊಳಿಸಿದ್ದಾರೆ. ಅಮೆರಿಕ ಸಂಸತ್‌ನಲ್ಲಿರುವ ದಕ್ಷಿಣ ಏಷ್ಯಾ ಮೂಲದ ಚುನಾಯಿತ ಪ್ರತಿನಿಧಿಗಳ ಸಮೂಹ (ವಿಶೇಷವಾಗಿ ಭಾರತೀಯರು)ವನ್ನು “ಸಮೋಸಾ ಕಾಕಸ್’ ಎಂದೇ ಕರೆಯಲಾಗುತ್ತದೆ.