Advertisement

Desi Swara: ಬಿಗ್‌ಬೆನ್‌ ಟು ಸೀಲೈಫ್ ನ ಮೋಜಿನ ಪ್ರಯಾಣ

12:25 PM Jan 27, 2024 | Team Udayavani |

ದೇಶ ಸುತ್ತಬೇಕು ಕೋಶ ಓದಬೇಕು ಎಂಬ ಮಾತು ಎಲ್ಲೆಡೆ ಜನಜನಿತವಾಗಿದೆ. ಹೊಸ ಹೊಸ ದೇಶಗಳು ನವ್ಯ ಪ್ರದೇಶಗಳನ್ನು ಸುತ್ತಿದಾಗ ಹಲವಾರು ಜೀವನಾನುಭವಗಳನ್ನು ಪಡೆಯಬಹುದು. ಯಾವುದೇ ಪುಸ್ತಕಗಳನ್ನು ಓದಿದರೂ ಸಹ ಜ್ಞಾನದ ವೃದ್ಧಿಗೆ ಪೂರಕವಾಗುವುದರಲ್ಲಿ ಸಂದೇಹವೇ ಇಲ್ಲ. ನಾನು ಹಾಗೂ ನನ್ನ ಮಡದಿ, ಮಗಳು ಹಾಗೂ ಮೊಮ್ಮಗಳ ಹಾರೈಕೆಯ ದೆಸೆಯಿಂದ ಇಂಗ್ಲೆಂಡಿಗೆ ಬಂದ ಅನಂತರ ಅಲ್ಲಿನ ಹಲವಾರು ಪ್ರದೇಶಗಳನ್ನು ಸುತ್ತಿ ಬಂದೆವು.

Advertisement

ಬಿಗ್‌ಬೆನ್‌
ಲಂಡನ್‌ನಲ್ಲಿ ಅಂಡರ್‌ ಗ್ರೌಂಡ್‌ ರೈಲು ಮಾರ್ಗದ ವ್ಯವಸ್ಥೆ ಬಹಳ ಚೆನ್ನಾಗಿದೆ. ನಮ್ಮ ಮಗಳ ಮನೆ ಹತ್ತಿರದ ಇಲ್ಫೋರ್ಡ್‌ ಸ್ಟೇಷನ್‌ನಿಂದ ಎಲಿಜಬೆತ್‌ ರೈಲನ್ನೇರಿ ವೆಸ್ಟ್‌ ಮಿನಿಸ್ಟರ್‌ ಬಳಿ ಇರುವ ವಾಟರ್‌ ಲೂ ಸ್ಟೇಷನ್‌ನಲ್ಲಿ ಇಳಿದು ಮುಂದೆ ಸಾಗಿದರೆ ನಮ್ಮನ್ನು ಸೆಳೆದದ್ದು ಸುಮಾರು 340 ಅಡಿ (96ಮೀಟರ್‌) ಎತ್ತರದ “ಬಿಗ್‌ಬೆನ್‌’ ಎನ್ನುವ ಲಂಡನ್ನಿನ ದೊಡ್ಡ ಗಡಿಯಾರ. ಅದರ ಹೆಸರು ಕೇಳಿದ್ದೆವು ಹಾಗೂ ಹಲವಾರು ಚಲನಚಿತ್ರಗಳಲ್ಲಿ ಕಂಡಿದ್ದೆವು. ಆದರೆ ಪ್ರತ್ಯಕ್ಷವಾಗಿ ಅದನ್ನು ಕಣ್ಣಾರೆ ನೋಡಿದಾಗ ಬಹಳ ಸಂತೋಷವಾಯಿತು. ಆ ಗಡಿಯಾರಕ್ಕೆ 2012ರ ವರೆಗೆ ಸೇಂಟ್‌ ಸ್ಟೀಫ‌ನ್‌ ಟವರ್‌ ಎಂಬುದಾಗಿ ಕರೆಯುತ್ತಿದ್ದರಂತೆ.

2ನೇ ರಾಣಿ ಎಲಿಜಬೆತ್‌ರ ಪೀಠಾರೋಹಣ ವಜ್ರಮಹೋತ್ಸವದ ಸವಿ ನೆನಪಿನಲ್ಲಿ ಅದನ್ನು ಎಲಿಜಬೆತ್‌ ಟವರ್‌ ಎಂಬುದಾಗಿ ಮರು ನಾಮಕರಣ ಮಾಡಿ ಹೆಸರಿಸಿದರಂತೆ. ಇದು ಬ್ರಿಟಿಷ್‌ ಸಾಂಸ್ಕೃತಿಕ ಐಕಾನ್‌ ಹಾಗೂ ಯುನೈಟೆಡ್‌ ಕಿಂಗ್‌ಡಮ್‌ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಪ್ರಮುಖ ಸಂಕೇತಗಳಲ್ಲಿ ಒಂದಾಗಿದೆ ಮತ್ತು 1987ರಿಂದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.

ಲಂಡನ್‌ ಐ
ಅಲ್ಲಿಂದ ಎಡ ಭಾಗದಲ್ಲಿ ದೊಡ್ಡ ಜಾಯಿಂಟ್‌ ವ್ಹೀಲ್‌ನ ಆಕಾರ ನಿಧಾನವಾಗಿ ತಿರುಗುತ್ತಿದ್ದಂತೆ ಭಾಸವಾಯಿತು. ಅದು ಲಂಡನ್‌ ಐ ಅಥವಾ ಮಿಲೇನಿಯಂ ವ್ಹೀಲ್‌. ಅದು 443 ಅಡಿ ಎತ್ತರದ ಒಂದು ಕ್ಯಾಂಟಿಲಿವರ್ಡ್‌ ವೀಕ್ಷಣಾ ಚಕ್ರ ಅಥವಾ ಫೆರ್ರೀಸ್‌ ಚಕ್ರ. ಇದು 10 ಟನ್‌ ತೂಕದ 32 ಹೈಟೆಕ್‌ ಗ್ಲಾಸ್‌ ಕ್ಯಾಪ್ಸೂಲ್‌ಗ‌ಳನ್ನು ಒಳಗೊಂಡಿದೆ. ಕ್ಯಾಪ್ಸೂಲ್‌ಗ‌ಳಲ್ಲಿ ಬಳಸಿರುವುದು ಸುಭದ್ರವಾದ ಟಾಟಾ ಕಂಪೆನಿ ತಯಾರಿಸಿದ ಪೈಪುಗಳು ಎಂಬುದು ಹೆಮ್ಮೆಯ ವಿಚಾರ. ಅದರಲ್ಲಿ ಕುಳಿತು ಲಂಡನ್‌ ನಗರವನ್ನೆಲ್ಲ ನೋಡಬಹುದು ಇದು 2000ನೇ ಇಸವಿಯಲ್ಲಿ ಪ್ರಾರಂಭವಾಯಿತು. ಇದುವರೆಗೆ 50 ದಶಲಕ್ಷಕ್ಕೂ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟಿದೆಯಂತೆ. ನಾವೂ ಸಹ ಅದರಲ್ಲಿ ಕುಳಿತು ಲಂಡನ್‌ ನಗರವನ್ನು ಹೆಲಿಕಾಪ್ಟರ್‌ನಿಂದ ಒಂದು ಪ್ರದಕ್ಷಿಣೆ ಹಾಕಿದಂತೆ ಅನುಭವ ಪಡೆದೆವು. ಥೇಮ್ಸ್‌ ನದಿಯ ಸುತ್ತ ಮುತ್ತ ಇರುವ ಎಲ್ಲ ಕಟ್ಟಡಗಳನ್ನು ಮೇಲಿನಿಂದಲೆ ವೀಕ್ಷಿಸಿ ಆನಂದದ ಅನುಭವ ಪಡೆದು ರೋಮಾಂಚನಗೊಂಡೆವು ಇದು 30 ನಿಮಿಷಗಳ ಒಂದು ಸವಾರಿ.

Advertisement

ಸೀ ಲೈಫ್
ನೋಡುತ್ತಾ ಮುಂದೆ ಸಾಗಿದರೆ, ಕೌಂಟಿ ಹಾಲ್‌ನಲ್ಲಿರುವ ಅದೇ “ಲಂಡನ್‌ ಐ’ ನ ನೆಲ ಮಹಡಿಯಲ್ಲಿ ಪ್ರಖ್ಯಾತ ಲಂಡನ್‌ ಅಕ್ವೇರಿಯಂ ಸಿಗುತ್ತದೆ. ಮುಂದೆ ಸಾಗಿದಂತೆ ಜಲದಾಳದಲ್ಲಿ ವಾಸಿಸುವ ಜಲಚರಗಳ ಬಾಳಿನ ಅನುಭವದ ಪುಟಗಳು ತೆರೆಯುತ್ತಾ ಹೋಯಿತು. ಸಣ್ಣ ದೊಡ್ಡ ಮೀನುಗಳು, ಪುಟ್ಟ, ಅತೀ ಪುಟ್ಟ ಮೀನುಗಳು, ಆಮೆಗಳು, ಬಣ್ಣ ಬಣ್ಣದ ಕಪ್ಪೆಗಳು, ವಿವಿಧಾಕೃತಿಯ ಮೀನುಗಳು ಇವುಗಳನ್ನು ದೊಡ್ಡ ದೊಡ್ಡ ಕಂಟೇನರ್‌ಗಳಲ್ಲಿ ಕಂಡು ರೋಮಾಂಚನ ಆಯಿತು. ಮುಂದೆ ಸಾಗಿದಂತೆ ಹಲವಾರು ಬಣ್ಣ ಬಣ್ಣದ ಮೀನುಗಳೆಲ್ಲ ಬೇರೆ ಬೇರೆ ದಪ್ಪ ಗಾಜಿನ ಕಂಟೇನರ್‌ಗಳಲ್ಲಿ ಸ್ವತಂತ್ರವಾಗಿ ಈಜಾಡುತ್ತಿದ್ದುದನ್ನು ಕಾಣುತ್ತಾ ಮುಂದೆ ಸಾಗಿದೆವು. ಜಲದಾಳದಲ್ಲಿ ಬೆಳೆವ ವಿವಿಧ ರೀತಿಯ ಸಸ್ಯಗಳು ಬಗೆ ಬಗೆ ಜಾತಿಯ ಸ್ಟಾರ್‌ ಫಿಷ್‌ಗಳು, ಪಾಚಿ ಸಸ್ಯಗಳು, ರೋಮಾಂಚನ ಗೊಳಿಸುವ ಸಮುದ್ರದಾಳದ ವಿವಿಧ ಆಕಾರದ ಜಲ ಚರಗಳು, ವಿವಿಧ ಬಗೆಯ ಆಕ್ಟೋಪಸ್‌ಗಳು ಎಲ್ಲವನ್ನೂ ಗಮನಿಸುತ್ತಾ ಮುಂದೆ ಸಾಗಿದರೆ ನಮ್ಮನ್ನು ಸೆಳೆದದ್ದು ಪೆಂಗ್ವಿನ್‌ ಲೋಕ.

ಇತ್ತಿಂದತ್ತ ಅತ್ತಿಂದಿತ್ತ ಎಡೆಬಿಡದೆ ಈ ಕಡೆಯಿಂದ ಆ ಕಡೆಗೆ, ಆ ಕಡೆಯಿಂದ ಈ ಕಡೆಗೆ ತಮ್ಮ ಕೊಕ್ಕುಗಳಲ್ಲಿ ಕಲ್ಲುಗಳನ್ನು ಎತ್ತಿಕೊಂಡು ಓಡಾಡುತ್ತಿದ್ದವು ಅದನ್ನು ಕಂಡು ಸೋಜಿಗವೆನಿಸಿತು. ಅದರ ಚಲನ ವಲನಗಳನ್ನು ಗಮನಿಸುತ್ತಾ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಇದನ್ನೆಲ್ಲ ವೀಕ್ಷಿಸುತ್ತಾ ಮುಂದೆ ಸಾಗಿದ ಹಾಗೇ ನೆಲದಾಳದ ಜೀವಿಗಳ ಕುರಿತಾದ ಪುಸ್ತಕಗಳು ಹಾಗೂ ಅವುಗಳ ಪ್ರತಿಕೃತಿಗಳ ಮಾರಾಟ ಮಳಿಗೆ ಮಕ್ಕಳು ಹಾಗೂ ಹಿರಿಯರನ್ನೂ ಸೆಳೆದವು.

ಈ ಅಕ್ವೇರಿಯಂ 1997ರಲ್ಲಿ ಲಂಡನ್‌ ಅಕ್ವೇರಿಯಂ ಆಗಿ ಪ್ರಾರಂಭವಾಯಿತು. ಈ ಅಕ್ವೇರಿಯಂ ಅನ್ನು 2008ರಲ್ಲಿ ಮೆರ್ಲಿನ್‌ ಎಂಟರ್‌ ಟ್ರೈನರ್ಸ್‌ ಎನ್ನುವ ಕಂಪೆನಿ ಬಹಿರಂಗ ಪಡಿಸದ ಮೊತ್ತಕ್ಕೆ ಖರೀದಿಸಿ ಸುಮಾರು ಒಂದು ವರ್ಷದ ಕಾಲ ನವೀಕರಣಗೊಳಿಸಿ 2009ರಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಿ ಕೊಟ್ಟಿತು. ಈಗ ಇದು ಸೀ ಲೈಫ್ ಹೆಸರಿಂದ ಪ್ರತೀ ವರ್ಷ ಸುಮಾರು ಒಂದು ಮಿಲಿಯನ್‌ ಸಂದರ್ಶಕರಿಂದ ವೀಕ್ಷಿಸಲ್ಪಡುತ್ತದೆ.

ನೀರೊಳಗಿನ ಹೊಸದಾದ ಸುರಂಗ ಮಾರ್ಗ, ಶಾರ್ಕ್‌ ವಾಕ್‌, ಪರಿಷ್ಕೃತ ಫೆಸಿಫಿಕ್‌ ಸಾಗರದ ಟ್ಯಾಂಕ್‌ ಮತ್ತು ಪ್ರದರ್ಶನದ ಸಂಪೂರ್ಣ ಮಾರ್ಗವನ್ನು ಒಳಗೊಂಡಿದೆ ಇವೆಲ್ಲವನ್ನೂ ವಾಸ್ತುಶಿಲ್ಪಿ ಕೇ ಏಲಿಯೆಟ್‌ ಅವರ ಮೇಲ್ವಿಚಾರಣೆಯಲ್ಲಿ ಪ್ರಾರಂಭವಾದಾಗ ಎಲ್ಲರಿಂದ ಆಕರ್ಷಣೆ ಪಡೆದು ಅಧಿಕೃತವಾಗಿ ಸಮುದ್ರ ಜೀವನದ ಕೇಂದ್ರವಾಯಿತು.

ಮೇ 2011ರಲ್ಲಿ ಅಕ್ವೇರಿಯಂ ಹೊಸ ಪೆಂಗ್ವಿನ್‌ ಪ್ರದರ್ಶನ ಪ್ರಾರಂಭಿಸಿದ ಅನಂತರ ಅದು ಹಿರಿ-ಕಿರಿಯರೆನ್ನದೆ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ. ಒಟ್ಟಿನಲ್ಲಿ ಅಕ್ವೇರಿಯಂ ವೀಕ್ಷಿಸಿ ಹೊರ ಬರುವಾಗ ನೆಲದಾಳದಲ್ಲಿ ಅಂದರೆ ಸಮುದ್ರದ ತಳದಲ್ಲಿ ವಾಸಿಸುವ ಜಲಚರಗಳನ್ನೆಲ್ಲ ವೀಕ್ಷಿಸುತ್ತಿರುವಾಗ ಮನಸ್ಸು ಭೂಮಿಯ ಮೇಲೆ ವಾಸಿಸುವ ಪ್ರಾಣಿವರ್ಗ, ಸಸ್ಯ-ಸಂಕುಲಗಳು ಅಲ್ಲದೆ ನೀರಿನಲ್ಲಿಯೂ ಸಹ ಸಣ್ಣ ಅತೀ ಸಣ್ಣ ಪ್ರಾಣಿಗಳಿಂದ ಹಿಡಿದು ಬೃಹದಾಕಾರದ ಶಾರ್ಕ್‌ನಂತಹ ಜೀವಿಗಳೂ ಸಹ ತಮ್ಮ ಸಹಬಾಳ್ವೆ ನಡೆಸುತ್ತಿವೆಯಲ್ಲ ಎಂಬ ಭಾವನೆ ಮೂಡಿ ಮಾನವ ಇದರಿಂದ ಕಲಿಯುವುದು ಸಾಕಷ್ಟಿದೆ ಎಂದೆನಿಸಿ ಈ ಬೃಹತ್‌ ಬ್ರಹ್ಮಾಂಡದ ಸೃಷ್ಟಿಕರ್ತನ ಸೃಷ್ಟಿಯ ಬಗ್ಗೆ ಮನದಲ್ಲಿ ಒಂದು ಬಗೆಯ ಧನ್ಯತಾಭಾವ ಮೂಡಿ ನೂರಾರು ವಂದನೆಗಳನ್ನು ಸಲ್ಲಿಸುತ್ತಾ ಹೊರಬಂದೆವು.

*ಮ.ಸುರೇಶ್‌ ಬಾಬು, ಇಲ್ಫೋರ್ಡ್‌

Advertisement

Udayavani is now on Telegram. Click here to join our channel and stay updated with the latest news.

Next