Advertisement

90 ಟನ್‌ ತ್ಯಾಜ್ಯ ಸಂಗ್ರಹಿಸಿದ ಫ್ಲೋಟಿಂಗ್‌ ಟ್ರ್ಯಾಶ್‌ ಬ್ಯಾರಿಯರ್‌

04:15 PM Jul 08, 2023 | Team Udayavani |

ಉಡುಪಿ: ತ್ಯಾಜ್ಯ ವಿಲೇವಾರಿ, ಪರಿಸರ ಸಂರಕ್ಷಣೆ ಬಗ್ಗೆ ಅದೆಷ್ಟೇ ಜಾಗೃತಿ ಮೂಡಿಸಿದರೂ ಅನಾಗರಿಕ ವರ್ತನೆ ನಿಂತಿಲ್ಲ. ಇದಕ್ಕೆ ಉದಾಹರಣೆ ಇಂದ್ರಾಣಿ ನದಿಗೆ ಅಳವಡಿಸಿರುವ ಫ್ಲೋಟಿಂಗ್‌ ಟ್ರ್ಯಾಶ್‌ ಬ್ಯಾರಿಯರ್‌ (ಎಫ್ಟಿಬಿ) ಕಳೆದ ಎರಡು ವರ್ಷಗಳಲ್ಲಿ 90 ಟನ್‌ಗೂ ಅಧಿಕ ತ್ಯಾಜ್ಯವನ್ನು ಸಂಗ್ರಹಿಸಿರುವುದು.

Advertisement

ಕೊಡವೂರು ಸಮೀಪ ಇಂದ್ರಾಣಿ ನದಿ ಹರಿಯುವ ಕಾಲುವೆಗೆ 2021ರಲ್ಲಿ ಎಫ್ಟಿಬಿ ಅಳವಡಿಸಲಾಗಿದ್ದು, ನದಿಯಿಂದ ಸಮುದ್ರ ಸೇರುವ ಸಾಕಷ್ಟು ತ್ಯಾಜ್ಯ ತಡೆಯಲು ಈ ವ್ಯವಸ್ಥೆ ಸಹಕಾರಿಯಾಗಿದೆ.

ಇಂದ್ರಾಣಿ ನದಿಗೆ ಎಸೆಯುವ ಪ್ಲಾಸ್ಟಿಕ್‌ ಬಾಟಲಿ, ಪ್ಲಾಸ್ಟಿಕ್‌ ಬ್ಯಾಗ್‌, ದೇವರ ಫೋಟೋ, ಮನೆಯ ಪ್ಲಾಸ್ಟಿಕ್‌ ಉಪಕರಣಗಳು, ಆಟಿಕೆಗಳು, ಮದ್ಯದ ಬಾಟಲಿ, ಹಳೆಯ ಬಟ್ಟೆಗಳು ಇಲ್ಲಿ ಸಂಗ್ರಹವಾಗುತ್ತಿವೆ. ಜನರು ನಗರದ ಹಲವೆಡೆ ಎಸೆದ ತ್ಯಾಜ್ಯಗಳು ನೀರಿನ ಜತೆಗೆ ಸೇರಿ ಹರಿದುಕೊಂಡು ಸಾಗುತ್ತದೆ. ಟ್ರ್ಯಾಶ್‌ ಬ್ಯಾರಿಯರ್‌ ವ್ಯವಸ್ಥೆ ಅಳವಡಿಸಿರುವುದರಿಂದ ತ್ಯಾಜ್ಯ ಮುಂದಕ್ಕೆ ಚಲಿಸದೆ ಇಲ್ಲಿ ಶೇಖರಣೆಯಾಗುತ್ತದೆ.

ಜಲಮೂಲ ಸಂರಕ್ಷಣೆಗೆ ಎನ್‌ಜಿಟಿ ನಿರ್ದೇಶನ
ಸರಕಾರ, ಸ್ಥಳೀಯಾಡಳಿತ ಸಂಸ್ಥೆಗಳು ಸಮುದ್ರ, ನದಿ, ಕೆರೆ ಸಹಿತ ವಿವಿಧ ಜಲಮೂಲಗಳ ಸಂರಕ್ಷಣೆ ಮತ್ತು ತ್ಯಾಜ್ಯಗಳು ಜಲಮೂಲಗಳಿಗೆ ಸೇರದಂತೆ ಈ ರೀತಿ ವ್ಯವಸ್ಥೆ ಅಳವಡಿಸಿಕೊಳ್ಳಲು ರಾಷ್ಟ್ರೀಯ ಹಸಿರು ಪೀಠ ನಿರ್ದೇಶನ ಮತ್ತು ಮಾರ್ಗಸೂಚಿಯನ್ನು ಹೊರಡಿಸಿದೆ. ಅದರಂತೆ ಉಡುಪಿ ನಗರಸಭೆ ವತಿಯಿಂದ ಪ್ರಾಯೋಗಿಕ ಯೋಜನೆಯಾಗಿ 2021ರಲ್ಲಿ ಟ್ರ್ಯಾಶ್‌ ಬ್ಯಾರಿಯರ್‌ ಅಳವಡಿಸಲಾಗಿದ್ದು, ಇಲ್ಲಿ ಯಶಸ್ವಿಯಾಗಿದೆ. ಇನ್ನೂ ಕೆಲವು ಕಡೆಗಳಲ್ಲಿ ಸಣ್ಣ ಮಾದರಿಯಲ್ಲಿ ಟ್ರ್ಯಾಶ್‌ ಬ್ಯಾರಿಯರ್‌ ಅಳವಡಿಸುವ ಬಗ್ಗೆ ನಗರಸಭೆ ಚಿಂತಿಸಿದೆ.

ಜಲ ಜೀವ ವೈವಿಧ್ಯತೆಗೆ ಆಪತ್ತು
ಇಂದ್ರಾಣಿ ನದಿ ಮೂಲಕ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ನದಿ, ಸಮುದ್ರ ಸೇರಿ ಜಲ ಜೀವ ವೈವಿಧ್ಯತೆ ಕಂಟಕವಾಗಿ ಪರಿಣಮಿಸುತ್ತಿತ್ತು. ಇದಲ್ಲದೆ ಬೇರೆ ಮೂಲಗಳ ಮೂಲಕವು ತ್ಯಾಜ್ಯವು ಜಲಮೂಲವನ್ನು ಕೆಡಿಸುತ್ತಿದೆ.

Advertisement

ಏನಿದು ಎಫ್ಟಿಬಿ ?
ಜಲಮೂಲಗಳಲ್ಲಿ ತ್ಯಾಜ್ಯ ಹರಡದಂತೆ ಎಫ್ಟಿಬಿ ಕಾರ್ಯನಿರ್ವಹಿಸುತ್ತದೆ. ಸ್ವತ್ಛ ಭಾರತ್‌ ಮಿಷನ್‌ ಯೋಜನೆ ಅಡಿಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ನದಿಗಳಲ್ಲಿ ಘನತ್ಯಾಜ್ಯ ಮಾಲಿನ್ಯದ ಗಂಭೀರ ಪರಿಸರ ಸಮಸ್ಯೆ ಪರಿಹರಿಸುವಲ್ಲಿ ಈ ವ್ಯವಸ್ಥೆ ಪರಿಣಾಮಕಾರಿಯಾಗಲಿದೆ ಎಂಬುದನ್ನು ತಿಳಿಸಿತ್ತು. ನದಿ, ಕಾಲುವೆಗಳಲ್ಲಿ ತೇಲುವ ತ್ಯಾಜ್ಯವನ್ನು ಸಂಗ್ರಹಿಸುತ್ತದೆ. ಎರಡು ಕಡೆಗಳಲ್ಲಿ ಕಬ್ಬಿಣದ ಪಿಲ್ಲರ್‌ ಅಳವಡಿಸಿ ಟ್ರ್ಯಾಶ್‌ ಬ್ಯಾರಿಯರ್‌ ನಿರ್ಮಿಸಲಾಗುತ್ತದೆ. 3.5 ಲಕ್ಷ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದ್ದು, ವಾರಕ್ಕೊಮ್ಮೆ ಇದರಿಂದ ತ್ಯಾಜ್ಯವನ್ನು ಪೌರಕಾರ್ಮಿಕರು ವಿಲೇವಾರಿಗೊಳಿಸುತ್ತಾರೆ.

ಫ್ಲೋಟಿಂಗ್‌ ಟ್ರ್ಯಾಶ್‌ ಬ್ಯಾರಿಯರ್‌ ಪ್ರಾಯೋಗಿಕವಾಗಿ ಅಳವಡಿಸಲಾಗಿದ್ದು, ಕಾರ್ಯಕ್ಷಮತೆ ಉತ್ತಮವಾಗಿದೆ. ಕಳೆದ ಎರಡು ವರ್ಷದಿಂದ ಇಲ್ಲಿಯವರೆಗೆ ವಾರಕ್ಕೆ ಒಂದರಿಂದ ಒಂದೂವರೆ ಟನ್‌ ತೇಲುವ ತ್ಯಾಜ್ಯವನ್ನು ಇಲ್ಲಿಂದ ಸಂಗ್ರಹಿಸಲಾಗುತ್ತದೆ. ಪ್ರಸ್ತುತ ಮಳೆಗಾಲ ನೀರಿನ ಸೆಳೆತ ಹೆಚ್ಚಿರುವುದರಿಂದ ತ್ಯಾಜ್ಯವನ್ನು ಅಲ್ಲಿಂದ ತೆರವು ಮಾಡಿರಲಿಲ್ಲ. ನಾಲ್ಕು ದಿನಗಳ ಹಿಂದೆ ಅಲ್ಲಿನ ತ್ಯಾಜ್ಯವನ್ನು ಸಂಪೂರ್ಣ ತೆರವು ಮಾಡಲಾಗಿದೆ. ಈ ತ್ಯಾಜ್ಯ ವಿಂಗಡಿಸಿ ಮರು ಬಳಕೆ ಪ್ರಕ್ರಿಯೆಗೆ ನೀಡಲಾಗುತ್ತದೆ.
-ಸ್ನೇಹಾ, ಪರಿಸರ ಎಂಜಿನಿಯರ್‌,
ಉಡುಪಿ ನಗರಸಭೆ

-ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next