ಕಲಬುರಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ನೆರವಿನಲ್ಲಿ ನುಗ್ಗೆ ಬೇಸಾಯ ಮಾಡಿದ ಜಿಲ್ಲೆಯ ರೈತನಿಗೆ “ಆದಾಯ’ದ ಖಾತ್ರಿಯೂ ಸಿಕ್ಕಿದೆ. ನುಗ್ಗೆಕಾಯಿ ಮಾರಾಟದ ಲಾಭ ಮಾತ್ರವಲ್ಲದೇ, ಅದರ ಬೀಜಗಳಿಂದಲೂ ಆದಾಯ ಗಳಿಸುತ್ತಿದ್ದಾರೆ.
ಅಫಜಲಪುರ ತಾಲೂಕಿನ ಬಡದಾಳ ಗ್ರಾಮದ ನಾಗಣ್ಣ ಮಾತಾರಿ ಎನ್ನುವ ರೈತ ನುಗ್ಗೆ ಬೆಳೆದು ಬಂಪರ್ ಆದಾಯ ಪಡೆಯುತ್ತಿದ್ದಾರೆ. ಮೂರು ಎಕರೆ ಹೊಲ ಹೊಂದಿರುವ ಇವರು ಕಳೆದ ಬಾರಿ ಒಂದು ಎಕರೆಯಲ್ಲಿ ನುಗ್ಗೆ ಬೇಸಾಯ ಮಾಡಿದ್ದರು. ಮೊದಲ ಸಲವೇ ಲಾಭ ಬಂದ ಕಾರಣ ಈಗ ಎರಡು ಎಕರೆಯಲ್ಲಿ ನುಗ್ಗೆ ಬೆಳೆಯಲು ಶುರು ಮಾಡಿದ್ದಾರೆ. ಬೇರೆ ಬೆಳೆಗಿಂತ ನುಗ್ಗೆಕಾಯಿ ಆದಾಯ ಸರಳವಾಗಿ ಬರುತ್ತದೆ ಎನ್ನುವುದನ್ನು ಮನಗಂಡಿದ್ದಾರೆ.
ನುಗ್ಗೆ ಜನರಿಗೆ ಅತ್ಯಂತ ಪ್ರಿಯವಾದ ತರಕಾರಿ. ಮರುಕಟ್ಟೆ ಯಲ್ಲಿ ಸದಾ ಬೇಡಿಕೆ ಇದ್ದೇ ಇರುತ್ತದೆ. ಕೇವಲ ಒಂದು ಭಾಗ, ಪ್ರದೇಶಕ್ಕೆ ಸಿಮೀತವಾಗದ ನುಗ್ಗೆ ಎಲ್ಲೆಡೆ ಯೂ ತನ್ನ ಪ್ರಭಾವ ಉಳಿಸಿಕೊಂಡಿದೆ. ರೈತ ನಾಗಣ್ಣ ಬೆಳೆದ ನುಗ್ಗೆಯನ್ನು ಹೈದರಾಬಾದ್‌ಗೆ ಸಾಗಿಸಿ, ಮಾರಾಟ ಮಾಡುತ್ತಿದ್ದಾರೆ. ಕಡಿಮೆ ನುಗ್ಗೆಕಾಯಿ ಇದ್ದಾಗ ಮಾತ್ರ ಸ್ಥಳೀಯವಾಗಿ ಮಾರುತ್ತಾರೆ. ಎಲ್ಲೇ ಮಾರಾಟ ಮಾಡಿದರೂ ಉತ್ತಮ ಬೆಲೆ ಪಡೆಯುತ್ತಿದ್ದಾರೆ. ರೈತ ನಾಗಣ್ಣ, ಪುತ್ರ ಶರಣು ಹಾಗೂ ಕುಟುಂಬದವರು ಈ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ಒಂದು ಎಕರೆ ಫಸಲಿಗೆ ಒಂದೂವರೆ ಲಕ್ಷ ರೂ. ಲಾಭ ಗಳಿಸಿದ್ದರು. ಕಳೆದ ವರ್ಷ ಎರಡು ಎಕರೆಯಲ್ಲಿ ಬೆಳೆದು ಎರಡೂವರೆ ಲಕ್ಷ ರೂ. ಆದಾಯ ಪಡೆದಿದ್ದಾರೆ.
ಆರೇಳು ತಿಂಗಳಲ್ಲಿ ಇಳುವರಿ: ನುಗ್ಗೆಯೂ ಬೇಸಾಯ ಆರೇಳು ತಿಂಗಳಲ್ಲೇ ಫಸಲು ಕೊಡುತ್ತದೆ. ಬೀಜ ಅಥವಾ ಸಸಿ ನಾಟಿದ ಮೇಲೆ ಕೆಲ ತಿಂಗಳಲ್ಲೇ ಕಾಯಿ ಬಿಡಲು ಶುರು ಮಾಡುತ್ತದೆ. ನಂತರ ಒಂದು ತಿಂಗಳ ಪೂರ್ತಿ ಕಟಾವು ಮಾಡಬಹುದು. ಅಲ್ಲಿಂದ ಎಲ್ಲವೂ ಲಾಭವೇ ಎನ್ನುತ್ತಾರೆ ರೈತ ನಾಗಣ್ಣನ ಮಗ ಶರಣು. ಕಳೆದ ವರ್ಷದಿಂದ ಮನರೇಗಾ ಯೋಜನೆಯಡಿ ನುಗ್ಗೆ ಕೃಷಿ ಮಾಡುತ್ತಿದ್ದೇವೆ. ಪ್ರಾಯೋಗಿಕ ಎಂಬಂತೆ ಒಂದು ಎಕರೆಯಲ್ಲಿ ನುಗ್ಗೆ ಬೀಜ ಬಿತ್ತನೆ ಮಾಡಿದ್ದೇವು. ಮೊದಲ ಯತ್ನದಲ್ಲೇ ಉತ್ತಮ ಫಸಲು ಬಂತು. ಈ ವರ್ಷ ಒಂದರಿಂದ ಎರಡು ಎಕರೆಗೆ ನುಗ್ಗೆ ಕೃಷಿ ವಿಸ್ತರಿಸಿದ್ದೇವೆ.
ಈಗಾಗಲೇ ಎರಡೇ ಫಸಲು ಬಂದು ಮಾರಾಟವನ್ನು ಮಾಡಲಾಗಿದೆ. ಎರಡು ವರ್ಷದಲ್ಲಿ ಒಟ್ಟಾರೆ ನಾಲ್ಕು ಲಕ್ಷ ರೂ.ಗಳಷ್ಟು ಆದಾಯ ಬಂದಿದೆ ಎಂದು ಹೇಳಿದರು. ನುಗ್ಗೆ ಗಿಡದಿಂದ ಗಿಡಕ್ಕೆ ಮೂರು ಅಡಿ ಮತ್ತು ಸಾಲಿನಿಂದ ಸಾಲಿಗೆ 12 ಅಡಿಯಲ್ಲಿ ಬೆಳೆಸಲಾಗಿದೆ. ನುಗ್ಗೆ ಬೆಳೆ ನಿರ್ವಹಣೆ ಸುಲಭ ಮತ್ತು ಖರ್ಚು ಕೂಡ ಕಡಿಮೆ. ಉತ್ತಮ ಇಳುವರಿ ಬಂದ ಕಾರಣ ಚೀಲ ಗಟ್ಟಲೇ ಹೈದರಾಬಾದ್‌ಗೆ ಹೋಗಿ ಮಾರಾಟ ಮಾಡಲಾಗಿದೆ. ಒಂದು ಕೆಜಿ ನುಗ್ಗೆ ಕಾಯಿ ಗರಿಷ್ಠ 100 ರೂ. ವರೆಗೂ ಮಾರಾಟವಾಗಿದೆ. ಕೆಲವೊಮ್ಮೆ 40ರೂ. ಕ್ಕಿಂತ ಕಡಿಮೆ ಮಾರಲಾಗಿದೆ. ಆದರೆ, ನುಗ್ಗೆಯಿಂದ ನಷ್ಟ ಅನುಭವಿಸಿಲ್ಲ ಎನ್ನುತ್ತಾರೆ ಅವರು. ನುಗ್ಗೆ ಬೀಜಕ್ಕೂ ಬೇಡಿಕೆ: ನುಗ್ಗೆ ಕಾಯಿಯಂತೆ ನುಗ್ಗೆ ಬೀಜಕ್ಕೂ ಬೇಡಿಕೆ ಇದೆ.
ಹೀಗಾಗಿ ಬೀಜ ಮಾರಾಟದಿಂದಲೂ ಇವರು ಆದಾಯ ಗಳಿಸುತ್ತಿದ್ದಾರೆ. ಪ್ರತಿ ಒಂದು ಕೆಜಿ ಬೀಜ ಎರಡು ಸಾವಿರ ರೂ. ಆದಾಯ ತಂದು ಕೊಡುತ್ತಿದೆ. ನುಗ್ಗೆ ಬೆಳೆಗೆ ಹೆಚ್ಚಾಗಿ ಸಾವಯವ ಗೊಬ್ಬರವನ್ನೇ ಬಳಸುತ್ತೇವೆ. ಇದರಿಂದ ಇರುವಳಿ ಹೆಚ್ಚಾಗಿ ಬರುತ್ತದೆ. ಹೀಗಾಗಿ ಬೀಜ ಸಂರಕ್ಷಣೆ ಮಾಡಿ ಮಾರಾಟ ಮಾಡಲಾಗುತ್ತದೆ. ನಮ್ಮ ಹೊಲದ ಬೆಳೆಯನ್ನು ಸುತ್ತ-ಮುತ್ತಲಿನ ರೈತರಿಂದಲೇ ಬೀಜಕ್ಕೆ ಬಂದಿದೆ. ಒಂದು ಕೆಜಿಗೆ ಎರಡು ಸಾವಿರ ರೂ.ನಂತೆ ಐದು ಕೆಜಿ ಬೀಜ ಮಾರಲಾಗಿದೆ. ಇನ್ನು ಐದು ಕೆಜಿಯಷ್ಟು ಬೀಜಗಳು ಇವೆ ಎಂದು ರೈತ ವಿವರಿಸಿದರು.