Advertisement
ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿರುವ ಸುರೇಶ್ ಹಿರಿಯಡಕದಿಂದ ಹರಿಖಂಡಿಗೆಗೆ ಹೋಗುವ ರಸ್ತೆಯ ಸಮೀಪ ಮಾಣೈ ಎಂಬಲ್ಲಿ ಸುಮಾರು 5 ಎಕ್ರೆ ಗದ್ದೆಯಲ್ಲಿ ಕಳೆದ 6ವರ್ಷಗಳಿಂದ ಕಲ್ಲಂಗಡಿ ಹಣ್ಣು ಬೆಳೆಯುತ್ತಿದ್ದಾರೆ. ಈ ಬಾರಿ ಆಧುನಿಕ ಪದ್ಧತಿ ಮೂಲಕ ಫಸಲು ಪಡೆದಿದ್ದಾರೆ.
ಜನವರಿಯಲ್ಲಿ ಚಿಕ್ಕಮಗಳೂರಿನ ಕಡೂರಿನಿಂದ ಕಲ್ಲಂಗಡಿ ಬೀಜ ತಂದು ಬಿತ್ತನೆ ಮಾಡಿದ್ದರು. ಬಳಿಕ ಗದ್ದೆಯಲ್ಲಿ ಇರುವ ಕ್ರಿಮಿ ಕೀಟಗಳು, ನವಿಲುಗಳಿಂದ, ಸೂರ್ಯನ ಶಾಖದಿಂದ ತೊಂದರೆ ಆಗದಂತೆ ಇಸ್ರೇಲ್‌ನ ಗ್ರೋ ಕವರ್ ತಂತ್ರಜ್ಞಾನ ಬಳಸಿ ಯಶಸ್ಸನ್ನು ಕಂಡಿದ್ದಾರೆ. ಇದರಿಂದ ಹಣ್ಣುಗಳಿಗೆ ಹಾನಿಯಾಗಿಲ್ಲ. ಕಲ್ಲಂಗಡಿ ಹಣ್ಣಿನ ಗಿಡಗಳಿಗೆ ಕಾಲ ಕಾಲಕ್ಕೆ ಕ್ರಿಮಿನಾಶಕಗಳನ್ನು ಅಲ್ಪ ಪ್ರಮಾಣದಲ್ಲಿ ಸಿಂಪಡಿಸಿದ್ದು ಅಗತ್ಯಕ್ಕೆ ತಕ್ಕಷ್ಟು ನೀರನ್ನೂ ಆಧುನಿಕ ಪದ್ಧತಿಯಲ್ಲೇ ನೀಡಿದ್ದಾರೆ.
ಆಧುನಿಕ ಯಂತ್ರ ಬಳಕೆ
ಕೂಲಿಯಾಳುಗಳ ಸಮಸ್ಯೆಯನ್ನು ಸುರೇಶ್ ಅವರೂ ವ್ಯಾಪಕವಾಗಿ ಎದುರಿಸುತ್ತಿದ್ದಾರೆ. ಹಿನ್ನೆಲೆಯಲ್ಲಿ ಅವರು ಹಿಂದಿನಿಂದಲೂ ಆಧುನಿಕ ಯಂತ್ರಗಳನ್ನು ಕೃಷಿಗೆ ಬಳಸುತ್ತಾರೆ. ಕಳೆದ ಬಾರಿ ಭತ್ತದ ನಾಟಿಯನ್ನು ಟ್ರೇ ವಿಧಾನದಲ್ಲಿ ಮಾಡಿದ್ದು ಕೃಷಿಕರ ಗಮನ ಸೆಳೆದಿದ್ದರು. ಈಗಲೂ ಅವರು ಯಂತ್ರೋಪಕರಣಗಳು, ಆಧುನಿಕ ಕೃಷಿ ವಿಧಾನಗಳನ್ನು ನೆಚ್ಚಿಕೊಂಡಿದ್ದು, ಹೆಚ್ಚಿನ ಲಾಭ ಪಡೆಯಲು ಕಾರಣವಾಗಿದೆ. ಎಕರೆಗೆ 40 ಸಾವಿರ ರೂ. ಲಾಭ
ಕಟಾವಿಗೆ ಬಂದ ಕೆಲವೊಂದು ಹಣ್ಣುಗಳು 15 ಕೆ.ಜಿ ಗೂ ಅಧಿಕ ತೂಕ ಹೊಂದಿದೆ. ಸುಮಾರು 5 ಎಕ್ರೆ ಜಾಗದಲ್ಲಿ ಬೆಳೆ ಬೆಳೆದಿದ್ದು, ಎಕ್ರೆ ಒಂದಕ್ಕೆ ಸುಮಾರು 40 ಸಾವಿರ ರೂ.ವರೆಗೆ ಲಾಭ ಪಡೆದಿದ್ದಾರೆ. ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಣ್ಣು ಕೆ.ಜಿಗೆ ಸುಮಾರು 20 ರೂ ಇದ್ದು, ಮಧ್ಯವರ್ತಿಗಳ ಮೂಲಕ ಜಿಲ್ಲೆಯ ವಿವಿಧ ಮಾರುಕಟ್ಟೆಗೆ ಹಾಗೂ ದೂರದ ಕೇರಳ ಹಾಗೂ ಮುಂಬೈ ನಗರಗಳಿಗೆ ಮಾರಾಟ ಮಾಡುತ್ತಿದ್ದಾರೆ. ಕಲ್ಲಂಗಡಿಯೊಂದಿಗೆ ಮುಳ್ಳುಸೌತೆ ಹಾಗೂ ಇತರ ತರಕಾರಿಗಳನ್ನೂ ಬೆಳೆದಿದ್ದು, ಉತ್ತಮ ಫಸಲು ಬಂದಿದೆ.
Related Articles
ಪ್ರತಿಯೊಬ್ಬರು ಕೂಡ ಆಧುನಿಕ ತಂತ್ರಜ್ಞಾನವನ್ನು ಬಳಸಿ ಯಾವುದೇ ನಷ್ಟವಾಗದಂತೆ ಕಲ್ಲಂಗಡಿ ಹಣ್ಣನ್ನು ಬೆಳೆಯಬಹುದು. ಈ ಬಾರಿ ಹೊಸ ಮಾದರಿಯ ತಂತ್ರಜ್ಞಾನದಿಂದ ನನಗೆ ಉತ್ತಮ ಫಸಲಿನೊಂದಿಗೆ ಹೆಚ್ಚಿನ ಲಾಭಬಂದಿದೆ.
– ಸುರೇಶ್ ನಾಯಕ್,
ಕೃಷಿಕರು, ಬೊಮ್ಮರಬೆಟ್ಟು
Advertisement
– ಉದಯ ಕುಮಾರ್ ಶೆಟ್ಟಿ