Advertisement

ಮುಂದಿನ ಶೈಕ್ಷಣಿಕ ವರ್ಷದ ಶಾಲಾ ದಿನಗಳಲ್ಲಿ ಭಾರೀ ಕಡಿತ…

09:22 PM Apr 16, 2023 | Team Udayavani |

ಬೆಂಗಳೂರು: ಮುಂಬರುವ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು 244 ದಿನ ಕರ್ತವ್ಯ ನಿರ್ವಹಿಸಲಿವೆ. ಹಿಂದಿನ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ಶಾಲಾ ಕರ್ತವ್ಯ ದಿನಗಳಲ್ಲಿ ಭಾರೀ ಕಡಿತವಾಗಿದೆ. ಅದೇ ರೀತಿ ಕಲಿಕಾ ದಿನಗಳಲ್ಲಿಯೂ ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯವಾಗಿ, 48 ದಿನಗಳಷ್ಟು ಇಳಿಕೆ ಕಂಡು ಬಂದಿದೆ.

Advertisement

2022-23ರ ಶೈಕ್ಷಣಿಕ ವರ್ಷದಲ್ಲಿ 270 ಕರ್ತವ್ಯದ ದಿನಗಳಿದ್ದವು. ಈ ಮೂಲಕ ಹೆಚ್ಚುವರಿಯಾಗಿ 26 ರಜಾ ದಿನಗಳು ಈ ವರ್ಷ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸಿಗಲಿದೆ. ಒಟ್ಟಾರೆಯಾಗಿ ಹಿಂದಿನ ವರ್ಷದ ಶೇ. 74ರಷ್ಟು ದಿನ ಶಿಕ್ಷಣ ಸಂಬಂಧಿ ಚಟುವಟಿಕೆ ನಡೆದಿದ್ದರೆ, ಈ ವರ್ಷ ಶೇ. 67ರಷ್ಟು ದಿನ ನಡೆಯಲಿದೆ.

ಕಳೆದ ವರ್ಷದಲ್ಲಿ ಹೆಚ್ಚುವರಿಯಾಗಿದ್ದ ಕಲಿಕಾ ಚೇತರಿಕೆ ಈ ವರ್ಷ ಇಲ್ಲದಿರುವುದು ಮತ್ತು ಈ ವರ್ಷ ದಸರಾ ರಜೆ ಹೆಚ್ಚಾಗಿರುವುದರಿಂದ ಶಾಲಾ ದಿನಗಳು ಕಡಿಮೆಯಾಗಿವೆ.

ಕಳೆದ ಬಾರಿ ಕೊರೊನಾ ಕಾರಣದಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಆಗಿರುವ ಹಿನ್ನಡೆಯನ್ನು ಸರಿದೂಗಿಸಲು ಮೇ ತಿಂಗಳ 14ರಿಂದ ಶಾಲಾ ಶೈಕ್ಷಣಿಕ ಚಟುವಟಿಕೆ ಆರಂಭಿಸಲಾಗಿತ್ತು. ಮೇ ತಿಂಗಳಲ್ಲಿ 14 ದಿನ ಕಲಿಕಾ ಚೇತರಿಕೆ ಕಾರ್ಯಕ್ರಮ ನಡೆಸಲಾಗಿತ್ತು. ಆದರೆ ಈ ವರ್ಷ ಕಲಿಕಾ ಚೇತರಿಕೆ ಕಾರ್ಯಕ್ರಮ ನಡೆಯುವುದಿಲ್ಲ. ಮೇ 29ರಿಂದ ಶಾಲೆ ಆರಂಭಗೊಳ್ಳಲಿದೆ.

10 ದಿನ ದಸರಾ ರಜೆ
ಹಾಗೆಯೇ ಕಳೆದ ಶೈಕ್ಷಣಿಕ ವರ್ಷದಲ್ಲಿ ಅ. 3ರಿಂದ 16ರ ವರೆಗೆ ಅಂದರೆ, 14 ದಿನ ಮಾತ್ರ ದಸರಾ ರಜೆ ನಿಗದಿ ಪಡಿಸಲಾಗಿತ್ತು. ಆದರೆ ಈ ವರ್ಷ ಅ. 8ರಿಂದ ಅ. 25ರ ತನಕ ಒಟ್ಟು 20 ದಿನ ರಜೆ ಇರಲಿದೆ. ಅದೇ ರೀತಿ ಕಳೆದ ವರ್ಷಕ್ಕೆ ಹೋಲಿಸಿದರೆ ಜೂನ್‌, ಜುಲೈಯಲ್ಲಿ ಒಂದು ದಿನ ಮತ್ತು ಡಿಸೆಂಬರ್‌ನಲ್ಲಿ ಮೂರು ರಜಾ ದಿನ ಹೆಚ್ಚಿದೆ.

Advertisement

180 ದಿನ ಮಾತ್ರ ಪಾಠ
ಅದೇ ರೀತಿ ಕಳೆದ ಶೈಕ್ಷಣಿಕ ವರ್ಷದಲ್ಲಿ 228 ಬೋಧನಾ – ಕಲಿಕೆ ದಿನಗಳಿದ್ದರೆ ಈ ವರ್ಷ ಕೇವಲ 180 ಕಲಿಕಾ ದಿನಗಳಿರಲಿವೆ. ಈ ಶೈಕ್ಷಣಿಕ ವರ್ಷದಲ್ಲಿ 244 ಶಾಲಾ ಕರ್ತವ್ಯದ ದಿನಗಳನ್ನು ಸರಕಾರ ನಿಗದಿ ಪಡಿಸಿದೆ. ಇದರಲ್ಲಿ ಬೋಧನಾ – ಕಲಿಕೆ ಪ್ರಕ್ರಿಯೆಗೆ ಕೇವಲ 180 ದಿನ ಉಳಿಯಲಿದೆ. ಉಳಿದಂತೆ ಪರೀಕ್ಷೆಗಳು ಮತ್ತು ಮೌಲ್ಯಾಂಕನ ಪ್ರಕ್ರಿಯೆಗಳಿಗಾಗಿ 26 ದಿನಗಳು, ಪಠ್ಯೇತರ ಚಟುವಟಿಕೆಗಳ / ಪಠ್ಯ ಚಟುವಟಿಕೆಗಳ/ ಸ್ಪರ್ಧೆಗಳ ನಿರ್ವಹಣೆ ಕಾರ್ಯಕ್ಕಾಗಿ 24 ದಿನಗಳು, ಮೌಲ್ಯಮಾಪನ ಮತ್ತು ಫ‌ಲಿತಾಂಶ ವಿಶ್ಲೇಷಣೆ ಕಾರ್ಯಕ್ಕಾಗಿ 10 ದಿನಗಳು ಮತ್ತು ಶಾಲಾ ಸ್ಥಳೀಯ ರಜೆಗಳು ಎಂದು ನಾಲ್ಕು ದಿನವನ್ನು ನಿಗದಿಪಡಿಸಲಾಗಿದೆ.

ಶಿಕ್ಷಕರ ಸಂಘದ ಆಕ್ಷೇಪ
ಸರಕಾರದ ಈ ವೇಳಾಪಟ್ಟಿಗೆ ಪ್ರಾಥಮಿಕ ಶಿಕ್ಷಕರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ. ಸುಮಾರು ಹತ್ತರಿಂದ ಹದಿನೈದು ದಿನ ಹೆಚ್ಚುವರಿಯಾಗಿ ಶಿಕ್ಷಣ ಚಟುವಟಿಕೆ ನಿರ್ವಹಿಸಲು ಸೂಚಿಸಲಾಗಿದೆ. ಕಳೆದ ವರ್ಷದ ಕೋವಿಡ್‌ ಪ್ರಭಾವಿತ ಶೈಕ್ಷಣಿಕ ವರ್ಷಕ್ಕೆ ಈ ಶೈಕ್ಷಣಿಕ ವರ್ಷವನ್ನು ಹೋಲಿಸಲು ಸಾಧ್ಯವಿಲ್ಲ. ದಸರಾ ರಜೆಯನ್ನು ಕೇವಲ 20 ದಿನಗಳಿಗೆ ಸೀಮಿತಗೊಳಿಸಿರುವುದು ಸರಿಯಲ್ಲ. ಈ ಮೊದಲಿದ್ದಂತೆ ಅ. 2ರಿಂದ 30ರ ತನಕ ದಸರಾ ರಜೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌ ನುಗ್ಗಲಿ ಆಗ್ರಹಿಸಿದ್ದಾರೆ.

ನಾವು ಈಗಾಗಲೇ ಶಾಲಾ ಕರ್ತವ್ಯ ದಿನಗಳ ವೇಳಾಪಟ್ಟಿಯನ್ನು ಪ್ರಕಟಿಸಿದ್ದೇವೆ. ಇದರಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ನಾವು ಎನ್‌ಸಿಇಆರ್‌ಟಿಯ ನಿಯಮದಂತೆ ವೇಳಾಪಟ್ಟಿ ತಯಾರಿಸಿಲ್ಲ. ನಮ್ಮ ನಿಯಮಗಳ ಅಡಿ ವೇಳಾಪಟ್ಟಿ ರಚಿಸಿದ್ದೇವೆ.
– ಆರ್‌. ವಿಶಾಲ್‌, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು

~ ರಾಕೇಶ್‌ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next