Advertisement

ಹದಗೆಟ್ಟ ರಸ್ತೆಗಳಲ್ಲಿ ಸಂಕಟಮಯ ಪಯಣ

03:35 PM Sep 30, 2021 | Team Udayavani |

ಶಹಾಬಾದ: ಎಲ್ಲಿ ನೋಡಿದರಲ್ಲಿ ತಗ್ಗು-ಗುಂಡಿ, ಇಲ್ಲಿನ ಬಹುತೇಕ ರಸ್ತೆಗಳಲ್ಲಿ ಪ್ರತಿನಿತ್ಯ ಸಂಚರಿಸುವ ಜನರಿಗಂತೂ ಸಂಕಟಮಯ ಪರಿಸ್ಥಿತಿ. ಇದು ನಗರದ ಸಮೀಪದ ನಿಜಾಮ ಬಜಾರ್‌ ದಿಂದ ಹೊನಗುಂಟಾ ಗ್ರಾಮಕ್ಕೆ ಹೋಗುವ ರಸ್ತೆ, ನಗರದಿಂದ ಜೇವರ್ಗಿ ರಸ್ತೆ, ನಗರದ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವರೆಗಿನ ರಸ್ತೆ ಹಾಗೂ ನಗರದ ವಾಡಿ ಕ್ರಾಸ್‌ನಿಂದ ನಗರದೊಳಗೆ ಪ್ರವೇಶಿಸುವ ಶಹಾಬಾದನ ರಸ್ತೆಯ ದುಸ್ಥಿತಿಯಿದು.

Advertisement

ತಾಲೂಕಿನಿಂದ ಹೊರಗೆ ಯಾವುದೇ ರಸ್ತೆಯಿಂದ ಹೊರಡುವ ಜನರಿಗೆ ಹದಗೆಟ್ಟ ರಸ್ತೆಗಳ ದರ್ಶನ ಆಗದೇ ಇರಲಾರದು. ಹದಗೆಟ್ಟ ಇಲ್ಲಿನ ರಸ್ತೆಗಳು ವರ್ಷದ ಎಲ್ಲ ದಿನಗಳಲ್ಲೂ ಇದೇ ಸ್ಥಿತಿಯಿದೆ. ಜನಸ್ನೇಹಿ ಆಗಿರಬೇಕಾದ ರಸ್ತೆಗಳು ಹದಗೆಟ್ಟಿವೆ. ರಸ್ತೆಗಳಿಗಾಗಿ ಸರ್ಕಾರ ಕೊಟ್ಯಂತರ ರೂ. ಖರ್ಚು ಮಾಡಿದರೂ ಪ್ರಯೋಜನವಿಲ್ಲ ಎನ್ನುವಂತೆ ಆಗಿದೆ. ಈ ರಸ್ತೆ ಮೂಲಕ ಪ್ರತಿನಿತ್ಯ ಸಾವಿರಾರು ವಾಹನಗಳು ಚಲಿಸುತ್ತವೆ. ಈ ಪ್ರಯಾಣಿಕರಿಗೆಲ್ಲ ಜಟಕಾ ಬಂಡಿಯೊಳಗೆ ಕುಳಿತ ಅನುಭವವಾಗುತ್ತದೆ.

ಸುಮಾರು 25ರಿಂದ 40 ಟನ್‌ ಭಾರ ಹೊತ್ತ ಸಿಮೆಂಟ್‌ ಹಾಗೂ ಫರ್ಸಿ ಲಾರಿಗಳಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ಅಲ್ಲದೇ ಇವುಗಳಿಂದ ವಿಪರೀತ ಧೂಳು ಎದ್ದು ಪ್ರಯಾಣಿಕರು ನರಕಯಾತನೆ ಅನುಭವಿಸುವಂತೆ ಆಗಿದೆ.

ರಸ್ತೆಯುದ್ದಕ್ಕೂ ತಗ್ಗು, ಗುಂಡಿಗಳು, ನೆಲದ ಮೇಲೆ ಹರಡಿಕೊಂಡಿರುವ ಕಂಕರ್‌ನಿಂದ ತಪ್ಪಿಸಿಕೊಂಡು ವಾಹನ ಚಾಲನೆ ಮಾಡ ಬೇಕಾದ ದುಸ್ಥಿತಿಯಿದೆ. ಶಹಾಬಾದ ನಗರದಿಂದ ಹೊನಗುಂಟಾ ಗ್ರಾಮಕ್ಕೆ ಹೋಗಬೇಕಾದರೆ ಸಾಕಾಗಿಹೋಗುತ್ತದೆ. ಆದ್ದರಿಂದ ಕೂಡಲೇ ಸುಸಜ್ಜಿತ ರಸ್ತೆ ನಿರ್ಮಿಸಿ.
ರಾಯಪ್ಪ ಹುರಮುಂಜಿ,
ಸಾಮಾಜಿಕ ಕಾರ್ಯಕರ್ತ

ಪರ್ಸೆಂಟೇಜ್‌ ಸಂಸ್ಕೃತಿಯಿಂದ ನಗರದ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದ ವರೆಗಿನ ರಸ್ತೆ ಸಂಪೂರ್ಣ ಹಾಳಾಗಿದೆ. ಸರ್ಕಾರದ ಕೋಟ್ಯಂತರ ರೂ. ಅನುದಾನ ವ್ಯರ್ಥವಾಗುತ್ತಿದೆ. ಆದರೂ ನಗರಸಭೆ ಹಾಗೂ ಡಿಯುಡಿಸಿ ಅಧಿಕಾರಿಗಳು ಏನೂ ಮಾಡುತ್ತಿಲ್ಲ. ಕೂಡಲೇ ಡಿಸಿ ಕ್ರಮ ಕೈಗೊಳ್ಳಬೇಕು.
ಪೂಜಪ್ಪ ಮೇತ್ರೆ, ನಾಗರಿಕ

Advertisement

ನಗರೋತ್ಥಾನ ಯೋಜನೆಯಲ್ಲಿ ನಗರಸಭೆಯಿಂದ ನಿರ್ಮಾಣವಾಗುತ್ತಿರುವ ನಗರದ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದ ವರೆಗಿನ ನೂತನ ರಸ್ತೆ ಹಳ್ಳ ಹಿಡಿದಿದೆ. ಮೂರು ವರ್ಷದಿಂದ ಜನರು ಸರಿಯಾದ ರಸ್ತೆ ಕಾಣದೇ ತೊಂದರೆ ಅನುಭವಿಸುತ್ತಿದ್ದರೂ ಶಾಸಕರು ಸರಿಪಡಿಸುವ ಗೋಜಿಗೆ ಮುಂದಾಗುತ್ತಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಮೂಲಭೂತ ಸೌಕರ್ಯ ನೀಡದ ಜನಪ್ರತಿನಿಧಿಗಳಿಗೆ ಮುಂದಿನ ಚುನಾವಣೆಯಲ್ಲಿ ಜನರೇ ಪಾಠ ಕಲಿಸುತ್ತಾರೆ.
ಲೋಹಿತ್‌ ಕಟ್ಟಿ ಪ್ರ.ಕಾರ್ಯದರ್ಶಿ, ಜೆಡಿಎಸ್‌

ನಗರದೊಳಗೆ ಪ್ರವೇಶ ಮಾಡಿದರೂ, ನಗರದಿಂದ ಹೊರಗೆ ಹೋದರೂ ಹದಗೆಟ್ಟ ರಸ್ತೆಗಳ ದರ್ಶನ ಜತೆಗೆ ಕೆಟ್ಟ ಅನುಭವ ಉಂಟಾಗುತ್ತಿದೆ. ತಗ್ಗು, ಗುಂಡಿಯಲ್ಲಿ ಬಿದ್ದು ಅದೆಷ್ಟೋ ಜನರು ಆಸ್ಪತ್ರೆಗೆ ಸೇರಿದ್ದಾರೆ. ಧೂಳಿನಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದರೂ ಜನರ ಸಂಕಷ್ಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ.
ಶಾಸಕರೇ ಜನರ ಸಂಕಷ್ಟಕ್ಕೆ ದಯಮಾಡಿ ಸ್ಪಂದಿಸಿ.
ನಾಗಣ್ಣ ರಾಂಪೂರೆ, ನಾಗರಿಕ

Advertisement

Udayavani is now on Telegram. Click here to join our channel and stay updated with the latest news.

Next