Advertisement
ಆ ರೆಸಾರ್ಟ್‌ಗೆ ಮೂವರು ಹುಡುಗರು, ಮೂವರು ಹುಡುಗಿಯರು ಎಂಟ್ರಿಯಾಗುತ್ತಾರೆ. ಕತ್ತಲ ರಾತ್ರಿಯಲ್ಲಿ ಅಲ್ಲಿ ನಡೆಯುವ ವಿಚಿತ್ರ ಘಟನೆಗಳೇ ಚಿತ್ರದ ಹೈಲೈಟ್. ಅಲ್ಲಿಗೆ ಇದೊಂದು ದೆವ್ವದ ಚಿತ್ರ ಅಂತ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. “ವಜ್ರಮುಖಿ’ ಒಂದು ಹಾರರ್ ಚಿತ್ರ. ಹಾಗಂತ, ಇಲ್ಲಿ ಬೆಚ್ಚಿ ಬೀಳಿಸುವ ದೆವ್ವ, ಭೂತ, ಪಿಶಾಚಿಗಳಿಲ್ಲ. ಬದಲಾಗಿ, ಸ್ವಲ್ಪ ಹೆದರಿಸುವ, ಅಷ್ಟೇ ನಗಿಸುವ, ಅಳುವ ಮತ್ತು ಆಗಾಗ ಅಳಿಸುವ ದೆವ್ವ ಇದೆ. ಅದೊಂದು ಹೆಣ್ಣು ದೆವ್ವ ಅನ್ನೋದು ಮತ್ತೂಂದು ವಿಶೇಷ.
Related Articles
Advertisement
ನೋಡುಗರನ್ನೂ ಕೂಡ ಬೆಚ್ಚಿಬೀಳಿಸಬಹುದಾದಂತಹ ಅಂಶಗಳನ್ನು ಸೇರಿಸಬಹುದಿತ್ತು. ಮೊದಲೇ ಹೇಳಿದಂತೆ ಇಲ್ಲಿರುವ ಆತ್ಮ ಅಷ್ಟಾಗಿ ಹೆದರಿಸಲ್ಲ ಎಂಬುದನ್ನು ಬಿಟ್ಟರೆ, ಒಂದು ಅಂಶ ಮಾತ್ರ, ಸಮಾಜಕ್ಕೊಂದು ಸಂದೇಶ ಕೊಡುವಂತಿದೆ. ಅದರಲ್ಲೂ ಮಾಟ, ಮಂತ್ರ, ಮೂಢನಂಬಿಕೆಗಳಿಂದ ಯಾವುದೇ ಅಪರಾಧ ಮಾಡಬೇಡಿ ಎಂಬ ಅಂಶದ ಅರಿವಾಗುವುದರ ಜೊತೆಗೆ, ಒಂದಷ್ಟು ಮರುಕ ಹುಟ್ಟಿಸುತ್ತದೆ. ಆ ಅಂಶಗಳಷ್ಟೇ “ವಜ್ರಮುಖಿ’ ಆಕರ್ಷಣೆ ಎನ್ನಬಹುದು. ಕಥೆ ಬಗ್ಗೆ ಹೇಳುವುದಾದರೆ, “ವಜ್ರಮುಖಿ’ ರೆಸಾರ್ಟ್‌ಗೆ ಸಂಬಂಧಿಸಿದ ಮೂವರು ಕೊಲೆಯಾಗಿರುತ್ತಾರೆ.
ಆ ಕೊಲೆಗೆ ಕಾರಣ ಗೊತ್ತಿಲ್ಲ. ಆದರೆ, ಅಲ್ಲಿರುವ ಎಲ್ಲರಿಗೂ ಅಲ್ಲಿ ದೆವ್ವ ಇದೆ, ಆತ್ಮವೊಂದು ಓಡಾಡುತ್ತಿದೆ, ಅಮವಾಸ್ಯೆ ದಿನವೇ ಕೊಲೆಯಾಗುತ್ತಿದೆ ಎಂಬ ಭಯ ಇರುತ್ತೆ. ಅದ್ಯಾವ ವಿಷಯ ಗೊತ್ತಿರದ ಆರು ಮಂದಿ ಯುವಕ, ಯುವತಿಯರು ಆ ರೆಸಾರ್ಟ್‌ಗೆ ಹೋಗುತ್ತಾರೆ. ಅಲ್ಲಿ ಅವರಿಗೂ ದೆವ್ವ, ಆತ್ಮದ ಕಾಟ ಶುರುವಾಗುತ್ತೆ. ಆ ಆರು ಮಂದಿ ಇರುವ ರೆಸಾರ್ಟ್‌ಗೆ ಮಹಿಳಾ ತನಿಖಾಧಿಕಾರಿ ಎಂಟ್ರಿಯಾಗುತ್ತಾಳೆ. ಆಕೆ ಯಾಕೆ ಬರುತ್ತಾಳೆ. ಆ ಕೊಲೆಯ ಹಿಂದಿನ ರಹಸ್ಯ ಏನೆಂಬುದೇ ಚಿತ್ರದ ಕಥೆ. ಕುತೂಹಲವೇನಾದರೂ ಇದ್ದರೆ, “ವಜ್ರಮುಖಿ’ಯ ಸಣ್ಣಪುಟ್ಟ ಆರ್ಭಟ ನೋಡಿಕೊಂಡು ಬರಬಹುದು.
ನೀತು ಶೆಟ್ಟಿ ತನಿಖಾಧಿಕಾರಿಯಾಗಿ ತಕ್ಕಮಟ್ಟಿಗೆ ಇಷ್ಟವಾಗುತ್ತಾರೆ. ಹಾಗೆಯೇ, ದೆವ್ವ ಪಾತ್ರದಲ್ಲೂ ತಮ್ಮ ಶಕ್ತಿ ಮೀರಿ ಅರಚಾಡಿರುವುದು ಗೊತ್ತಾಗುತ್ತದೆ. ದಿಲೀಪ್ ಪೈ ಕ್ಲೈಮ್ಯಾಕ್ಸ್‌ನಲ್ಲಿ ಮಾತ್ರ “ಆತ್ಮ’ಕ್ಕೆ ವಂಚಿಸಿಲ್ಲ. ಉಳಿದಂತೆ ಸಂಜನಾ ಸೇರಿದಂತೆ ತೆರೆ ಮೇಲೆ ಬರುವ ಇತರೆ ಪಾತ್ರಗಳೆಲ್ಲವೂ ನಿರ್ದೇಶಕರ ಅಣತಿಯಂತೆಯೇ ನಟಿಸಿದಂತಿದೆ. ಮಂಗಳೂರು ರಾಘವೇಂದ್ರ ಅವರ ಹಾಸ್ಯದಲ್ಲಿ ಒಂದಷ್ಟು ಲವಲವಿಕೆ ತುಂಬಿದೆ. ರಾಜ್ ಭಾಸ್ಕರ್ ಸಂಗೀತದಲ್ಲೇನೂ ಸ್ವಾದವಿಲ್ಲ. ಪಿ.ಕೆ.ಹೆಚ್. ದಾಸ್ ಛಾಯಾಗ್ರಹಣದಲ್ಲಿ “ವಜ್ರಮುಖಿ’ಯ ಕತ್ತಲು, ಬೆಳಕಿನ ಆಟ, ಆರ್ಭಟ ಎಲ್ಲವೂ ಆಕರ್ಷಣೆಯಾಗಿದೆ.
ಚಿತ್ರ: ವಜ್ರಮುಖಿನಿರ್ಮಾಣ: ಶಶಿಕುಮಾರ್
ನಿರ್ದೇಶನ: ಆದಿತ್ಯ ಕುಣಿಗಲ್
ತಾರಾಗಣ: ನೀತು ಶೆಟ್ಟಿ, ದಿಲೀಪ್ ಪೈ, ಸಂಜನಾ, ಶಶಿಕುಮಾರ್, ಮಂಗಳೂರು ರಾಘವೇಂದ್ರ ಇತರರು. * ವಿಜಯ್ ಭರಮಸಾಗರ