Advertisement
ಫಸಲು ಕುಸಿತದ ಜತೆಯಲ್ಲಿ ಗೇರು ಧಾರಣೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಈ ಕಾರಣ ದಿಂದ ಕೃಷಿಕರು ಕಂಗಾಲಾಗುತ್ತಿದ್ದಾರೆ. ಗೇರು ಸೀಸನ್ ಆರಂಭವಾಗುತ್ತಿದ್ದಂತೆ ಗೋಡಂಬಿಗೆ ಉತ್ತಮ ಧಾರಣೆಯಿತ್ತು. ಆದರೆ ದಿನದಿಂದ ದಿನಕ್ಕೆ ಗೇರು ಧಾರಣೆ ಕುಸಿಯುತ್ತಾ ಇದೀಗ ಸಾಮಾನ್ಯ ಧಾರಣೆಗೆ ಬಂದು ತಲುಪಿದೆ.
ಕಳೆದ ವರ್ಷಕ್ಕೆ ತುಲನೆ ಮಾಡಿದರೆ ಈ ವರ್ಷ ಗೇರು ಬೀಜಕ್ಕೆ ಉತ್ತಮ ಧಾರಣೆಯಿದೆ. ಆದರೆ ಗೇರು ಧಾರಣೆ ಇದೆ ಎಂದು ಕೃಷಿಕರು ಸಂತೋಷಪಡುವಂತಿಲ್ಲ. ಹವಾಮಾನ ವೈಪರೀತ್ಯದಿಂದ ಗೇರು ಫಸಲು ಕಡಿಮೆಯಾಗಿ ಕೃಷಿಕರ ಮೊಗದಲ್ಲಿ ಮಂದಹಾಸ ಕರಟುತ್ತಿದೆ. ಪ್ರಸ್ತುತ ವರ್ಷ ಗೇರು ಸೀಸನ್ ಆರಂಭದಲ್ಲಿ ಕಿಲೋ ಒಂದಕ್ಕೆ 150ರಿಂದ 165 ರೂ. ತನಕ ಗೇರು ಧಾರಣೆಯಿತ್ತು. ಆದರೆ ದಿನ ಕಳೆದಂತೆ ಇದೀಗ 125ರಿಂದ 130 ರೂ.ಗೆ ಇಳಿದಿದೆ. ಕಳೆದ ವರ್ಷ ಗೇರು 100 ರಿಂದ 125 ರೂ. ತನಕ ಧಾರಣೆ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಧಾರಣೆ ಹೆಚ್ಚಿದ್ದರೂ ಗೇರು ಇಳುವರಿ ಕುಂಠಿತವಾಗಿದೆ. 2007 ರಲ್ಲಿ ಗೋಡಂಬಿ ಧಾರಣೆ ಗಣನೀಯವಾಗಿ ಕಡಿಮೆಯಾಗಿತ್ತು. ಆ ವರ್ಷ 35ರಿಂದ 38 ರೂ. ವರೆಗೆ ಇತ್ತು. 2006ರಲ್ಲಿ ಕಿಲೋ ಒಂದಕ್ಕೆ 45ರಿಂದ 47 ರೂ. ತನಕವಿತ್ತು. 2008ರಲ್ಲಿ ಗೋಡಂಬಿ ಧಾರಣೆ 50ರಿಂದ 53 ರೂ. ಇದ್ದರೆ 2009ರಲ್ಲಿ ಗೋಡಂಬಿ ಧಾರಣೆ 62 ರೂ., 2010ರಲ್ಲಿ 70 ರೂ., 2011 ಹಾಗೂ 2012ರಲ್ಲಿ 75ರಿಂದ 78 ರೂ. ವರೆಗೆ ಧಾರಣೆ ಇತ್ತು. 2013ರಲ್ಲಿ ಕಿಲೋ ಒಂದಕ್ಕೆ 80 ರೂ. ಲಭಿಸಿದ್ದರೆ. 2014ರಲ್ಲಿ 87 ರೂ. ತನಕ ಹೆಚ್ಚಳಗೊಂಡಿತ್ತು. ಆದರೆ 2015ರಲ್ಲಿ ಹಿಂದಿನ ಎಲ್ಲ ಧಾರಣೆ ಮೀರಿ 92 ರೂ. ತನಕ ಹೆಚ್ಚಳವಾಗಿತ್ತು.
Related Articles
Advertisement
ಕುಟುಂಬಶ್ರೀ ಸದಸ್ಯರಿಗೆ ಉದ್ಯೋಗ ಕಾಸರಗೋಡು ಗೇರು ಬೀಜಕ್ಕೆ ಉತ್ತಮ ಬೇಡಿಕೆ ಇದೆ. ಇಲ್ಲಿನ ಗೇರು ಅತ್ಯುತ್ತಮ ಗುಣಮಟ್ಟದ್ದು ಎಂಬ ಖ್ಯಾತಿಯನ್ನು ಪಡೆದಿದೆ. ಜಿಲ್ಲೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಗೇರು ಕೃಷಿಕರಿಗೆ ಆದಾಯ ತರುತ್ತಿದ್ದರೂ ಗೇರು ಸಂಸ್ಕರಣೆ ನಡೆಸುವ ಉದ್ದಿಮೆಗಳು ಸಾಕಷ್ಟು ಲಾಭ ಪಡೆಯುತ್ತವೆ. ಕೇರಳ ಸರಕಾರದ ತೋಟಗಾರಿಕಾ ನಿಗಮ ಮತ್ತು ಕುಟುಂಬಶ್ರೀ ಗೇರು ಕೃಷಿಯಿಂದ ಹೆಚ್ಚಿನ ಲಾಭ ಪಡೆಯುತ್ತವೆ. ಜಿಲ್ಲೆಯ ವಿವಿಧೆಡೆ ಕುಟುಂಬಶ್ರೀ ಗೇರು ಸಂಸ್ಕರಣ ಘಟಕವನ್ನು ಆರಂಭಿಸಿದ್ದು, ಹಲವಾರು ಮಂದಿಗೆ ಉದ್ಯೋಗವನ್ನು ಕಲ್ಪಿಸಿದೆ. ಗೇರು ಸಂಸ್ಕರಣೆಯಿಂದ ಹಲವು ಕುಟುಂಬಗಳು ಆರ್ಥಿಕವಾಗಿ ಮುಂದೆ ಸಾಗಲು ಸಹಾಯಕವಾಗಿದೆ. ಹಲವು ಕುಟುಂಬಗಳಿಗೆ ಕುಟುಂಬಶ್ರೀ ಆಧಾರವಾಗಿ ನಿಂತಿದೆ. ಮೂರು ಎಸ್ಟೇಟ್
ಕಾಸರಗೋಡು ಜಿಲ್ಲೆಯಲ್ಲಿ ತೋಟಗಾರಿಕಾ ನಿಗಮದ ಕೈಕೆಳಗೆ ಮೂರು ಗೇರು ಎಸ್ಟೇಟ್‌ಗಳಿವೆ. ಕಾಸರಗೋಡು, ರಾಜಪುರಂ ಮತ್ತು ಚೀಮೇನಿ ಎಸ್ಟೇಟ್‌ಗಳಲ್ಲಿ ಗೇರು ತೋಟ ಗಳಿದ್ದು, ಈ ತೋಟಗಳಲ್ಲಿ ರೋಗಬಾಧೆ ಮತ್ತು ಹವಾಮಾನ ವೈಪರೀತ್ಯದಿಂದ ಗೇರು ಫಸಲು ಕಡಿಮೆಯಾಗಿದೆ. ಇದರಿಂದಾಗಿ ಈ ಬಾರಿ ತೋಟಗಾರಿಕಾ ನಿಗಮಕ್ಕೆ ಬರುವ ವರಮಾನ ಕಡಿಮೆಯಾಗುವ ಸಾಧ್ಯತೆ ಬಲಗೊಂಡಿದೆ.
ಗೇರು ಫಸಲು ಕುಸಿತದಿಂದ ಕುಟುಂಬಶ್ರೀಯ ಗೇರು ಸಂಸ್ಕರಣ ಘಟಕಗಳಿಗೆ ವರ್ಷಪೂರ್ತಿ ಗೇರು ಲಭಿಸುವ ಸಾಧ್ಯತೆ ಕಡಿಮೆಯಾಗಿದ್ದು, ಹಲವು ಸಂಸ್ಕರಣ ಘಟಕಗಳಿಗೆ ಕೆಲವು ತಿಂಗಳಾ ದರೂ ಕೆಲಸವಿಲ್ಲದ ದಿನಗಳು ಎದುರಾಗಲಿವೆ ಎಂಬ ಆತಂಕ ಸೃಷ್ಟಿಯಾಗಿದೆ. – ಪ್ರದೀಪ್ ಬೇಕಲ್