Advertisement

Heavy rain; ಬೆಳೆ ಸಂತ್ರಸ್ತರಿಗೆ ಸಿಎಂ ಅಭಯ:ಸಿದ್ದರಾಮಯ್ಯ ಸೂಚನೆಗಳೇನು?

01:22 AM Oct 27, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದ ಸಮಸ್ಯೆ ಸೃಷ್ಟಿಯಾಗಿದ್ದು, ಜಿಲ್ಲೆಗಳಲ್ಲಿ ಬೆಳೆ ಹಾನಿ ಜಂಟಿ ಸಮೀಕ್ಷೆಯನ್ನು ವಾರದೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

Advertisement

ಗೃಹ ಕಚೇರಿ “ಕೃಷ್ಣಾ’ದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಇತರ ಜಿಲ್ಲಾಮಟ್ಟದ ಅಧಿಕಾರಿಗಳ ಜತೆಗೆ ವೀಡಿಯೋ ಸಂವಾದ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯದ ಅಂದಾಜಿನ ಪ್ರಕಾರ ಒಟ್ಟು 1.05 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಷ್ಟವಾಗಿರುವ ಮಾಹಿತಿಯಿದ್ದು, ಜಂಟಿ ಸಮೀಕ್ಷೆಯ ಬಳಿಕ ನಿಖರವಾಗಿ ತಿಳಿಯಲಿದೆ. ಮುಂಗಾರು ಹಂಗಾಮಿನಲ್ಲಿ 80 ಸಾವಿರ ಹೆಕ್ಟೇರ್‌ ಪ್ರದೇಶದ ಆಹಾರ ಧಾನ್ಯ, ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ನಿಯಮಾನುಸಾರ ಸಂತ್ರಸ್ತ ರೈತರಿಗೆ ಪರಿಹಾರ ನೀಡುತ್ತೇವೆ ಎಂದರು.
ಹಿಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಒಟ್ಟು 25 ಜನರು ಸಾವನ್ನಪ್ಪಿದ್ದು, ನಿಯಮಾವಳಿ ಪ್ರಕಾರ ಪರಿಹಾರ ವಿತರಿಸಲಾಗಿದೆ. ಪೂರ್ಣ ಹಾನಿಗೊಂಡ ಮನೆಗಳಿಗೆ 1.20 ಲಕ್ಷ ರೂ. ಪರಿಹಾರದ ಜತೆಗೆ ಹೊಸದಾಗಿ ಮನೆ ಕಟ್ಟಿಸಿಕೊಡಲಾಗುವುದು. ಭಾಗಶಃ ಬಿದ್ದ ಮನೆಗಳಿಗೆ 50 ಸಾವಿರ ರೂ. ಪರಿಹಾರ ನೀಡಲು ಸೂಚಿಸಲಾಗಿದೆ ಎಂದರು.

ಪೂರ್ಣ ಹಾಗೂ ಭಾಗಶಃ ಬಿದ್ದ ಮನೆಗಳಿಗೆ 48 ತಾಸುಗಳ ಒಳಗೆ ಪರಿಹಾರ ವಿತರಿಸಲು ಡಿ.ಸಿ.ಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ನವೆಂಬರ್‌, ಡಿಸೆಂಬರ್‌ನಲ್ಲೂ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ. ಪ್ರಕೃತಿ ವಿಕೋಪ ಪರಿಹಾರವನ್ನು ತುರ್ತಾಗಿ ಕೈಗೆತ್ತಿಕೊಳ್ಳಲು ಹಣದ ಕೊರತೆಯಿಲ್ಲ. ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರ್‌ಗಳ ಖಾತೆಯಲ್ಲಿ 666.96 ಕೋಟಿ ರೂ. ಅನುದಾನ ಲಭ್ಯವಿದೆ ಎಂದರು.

ಅ. 1 ರಿಂದ 25ರ ವರೆಗಿನ ವಾಸ್ತವಿಕ ಮಳೆ 181 ಮಿ.ಮೀ., ವಾಡಿಕೆ ಮಳೆ 114 ಮಿ.ಮೀ. ಆದರೆ ಈ ಬಾರಿ ಶೇ. 58ರಷ್ಟು ಹೆಚ್ಚುವರಿ ಮಳೆಯಾಗಿದೆ. ಜೂನ್‌ನಿಂದ ಸೆಪ್ಟಂಬರ್‌ 30ರ ವರೆಗೆ ವಾಡಿಕೆ ಮಳೆ 852 ಮಿ.ಮೀ. ವಾಸ್ತವಿಕ ಮಳೆ 978 ಮಿ.ಮೀ. ಆಗಿದ್ದು, ಶೇ. 15ರಷ್ಟು ಅಧಿಕವಾಗಿದೆ ಎಂದರು.

ಅತಿವೃಷ್ಟಿ – ಪರಿಹಾರ: ಮುಖ್ಯಮಂತ್ರಿ ಸೂಚನೆಗಳೇನು?
ರಾಜ್ಯದಲ್ಲಿ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯ ಪರಿಣಾಮ ಜಿಲ್ಲಾವಾರು ಬೆಳೆ ಹಾನಿ ಜಂಟಿ ಸಮೀಕ್ಷೆಯನ್ನು ವಾರದೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸು ವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಪೂರಕ ಸೂಚನೆಗಳನ್ನು ನೀಡಿದ್ದಾರೆ.

Advertisement

ಡಿಸೆಂಬರ್‌ವರೆಗೆ ರಾಜ್ಯದ ಹಲವು ಭಾಗಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುವ ಮುನ್ಸೂಚನೆಯಿದೆ. ಈಗಿನಿಂದಲೇ ಎಚ್ಚರಿಕೆ ವಹಿಸಿ.

ಅತಿವೃಷ್ಟಿ, ಪ್ರವಾಹ ಬಾಧಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳ ಜತೆಗೆ ಭೇಟಿ ನೀಡಿ, ನೊಂದವರಿಗೆ ಸಾಂತ್ವನ, ತತ್‌ಕ್ಷಣ ಪರಿಹಾರ ಕಾರ್ಯ, ಯಾವುದೇ ಅನಾಹುತ ಸಂಭವಿಸದಂತೆ ಕೈಗೊಂಡ ಮುನ್ನೆಚ್ಚರಿಕೆ ಕ್ರಮ ಪರಿಶೀಲಿಸಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ.

ಬಿತ್ತನೆ ಬೀಜಕ್ಕೆ ಬೇಡಿಕೆ ಬಂದರೆ ಕೂಡಲೇ ಒದಗಿಸಲು ಹೆಚ್ಚುವರಿ ಬೀಜ ದಾಸ್ತಾನು. ಪರ್ಯಾಯ ಬೆಳೆ ಬೆಳೆಸಲು ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಸಾಕಷ್ಟು ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಬೇಕು.

ಹಾನಿಗೀಡಾದ ಗ್ರಾಮೀಣ ರಸ್ತೆಗಳು, ಕಿರು ಸೇತುವೆಗಳು, ಮೋರಿಗಳ ದುರಸ್ತಿಗೆ ಸಮಗ್ರ ವರದಿ ಸಲ್ಲಿಸಲಾಗಿದೆ. ಉದ್ಯೋಗ ಖಾತ್ರಿಯಡಿ 63,647 ಕೆರೆ, ಕಲ್ಯಾಣಿಗಳ ಅಭಿವೃದ್ಧಿಗೆ ಕೈಗೊಂಡ ಕ್ರಮದ ಮೇಲೂ ನಿಗಾ ಇರಿಸಬೇಕು

ರಾಜ್ಯದ ಪ್ರಮುಖ ಜಲಾಶಯಗಳ ಒಟ್ಟು ಸಂಗ್ರಹಣ ಸಾಮರ್ಥ್ಯ 895.62 ಟಿಎಂಸಿ ಅಡಿಗಳು. ಪ್ರಸ್ತುತ 871.26 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 505.81 ಟಿಎಂಸಿ ಅಡಿ ನೀರು ಸಂಗ್ರಹ ಇತ್ತು. ಕುಡಿಯುವ ನೀರಿಗೆ ಕಾದಿಟ್ಟುಕೊಂಡು ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕ ನೀರು ಪೂರೈಕೆ, ವಿದ್ಯುತ್‌ ಉತ್ಪಾದನೆಗೆ ಅಡಚಣೆಯಾಗದಂತೆ ಕ್ರಮ.

ಕೆರೆಗಳ ಒತ್ತುವರಿ ತೆರವುಗೊಳಿಸಲು ಈಗಾಗಲೇ ಎಲ್ಲ ಜಿಲ್ಲಾಧಿಕಾರಿಗಳಿಗೆ ಗಡುವು ವಿಧಿಸಲಾಗಿತ್ತು. ಬೆಂಗಳೂರು ಸುತ್ತಮುತ್ತ ಬಹುತೇಕ ಕೆರೆಗಳು ಕೇವಲ ಶೇ. 30ರಷ್ಟು ಭರ್ತಿಯಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು.

ಹಿಂಗಾರು ಅವಧಿಯ ಅತಿವೃಷ್ಟಿಗೆ 25 ಜನರ ಸಾವು, ನಿಯಮದಂತೆ ಪರಿಹಾರ ಪಾವತಿ ಮಾಡಿ.

19 ದೊಡ್ಡ, 66 ಸಣ್ಣ ಜಾನುವಾರುಗಳು ಸಾವು. ದೊಡ್ಡ ಜಾನುವಾರುಗಳಿಗೆ 6.84 ಲಕ್ಷ ರೂ., ಸಣ್ಣ ಜಾನುವಾರುಗಳಿಗೆ 2.80 ಲಕ್ಷ ರೂ ಸೇರಿ 9.60 ಲಕ್ಷ ರೂ. ಪರಿಹಾರ ಪಾವತಿಸಲಾಗಿದೆ.

84 ಮನೆಗಳು ಸಂಪೂರ್ಣ, 2,077 ಮನೆಗಳು ಭಾಗಶಃ ಕುಸಿತವಾಗಿದೆ.

74,993 ಹೆಕ್ಟೇರ್‌ ಕೃಷಿ ಬೆಳೆಗಳು, 30,941 ಹೆಕ್ಟೇರ್‌ ತೋಟ ಗಾರಿಕೆ ಸೇರಿ 1,05,941 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ.

12,553 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳು, 1106 ಕಿರು ಸೇತುವೆಗಳು, ಮೋರಿಗಳಿಗೆ ಹಾನಿ.

Advertisement

Udayavani is now on Telegram. Click here to join our channel and stay updated with the latest news.

Next