Advertisement
ಲಾರಿಯಿಂದ ಕೋಣವನ್ನು ತಂದಿಳಿಸಿದಾಗ ಅದರ ಕುತ್ತಿಗೆಗೆ ಕಟ್ಟಿದ್ದ ಹಗ್ಗ ತುಂಡಾಗಿ ಓಡ ತೊಡಗಿತು. ಅದನ್ನು ಹಿಡಿಯಲು ಓಡಿದ ವಿಜಯನಗರದ ಎನ್‌ಎಚ್ ರಸ್ತೆಯ ರಝಾಕ್ ಸಾಬ್ ಅವರ ಪುತ್ರ ಸಾದಿಕ್ (22) ಗೆ ಕೋಣ ಕೊಂಬಿನಿಂದ ಇರಿಯಿತು. ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯರು ತತ್‌ಕ್ಷಣ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಆ ಬಳಿಕವೂ ಪರಾಕ್ರಮ ಮುಂದುವರಿಸಿದ ಕೋಣ ಪರಿಸರದಲ್ಲಿದ್ದ ಹಲವರಿಗೆ ಹಾಯ್ದು ಗಾಯಗೊಳಿಸಿತು. ಅಲ್ಲೇ ಪಕ್ಕದ ಮನೆ ಬಳಿ ಆಟ ಆಡುತ್ತಿದ್ದ ಮುಜೀಬ್ ಅವರ ಪುತ್ರಿ ಹೈರಾಫತ್ (4 ವರ್ಷ) ಮೇಲೂ ಹಾಯ್ದ ಕಾರಣ ಆಕೆಯ ಕೆಲವು ಹಲ್ಲುಗಳು ಉದುರಿ ಹೋಗಿವೆ. ಕೋಣದ ದಾಳಿಯಲ್ಲಿ 25ರಷ್ಟು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಕೋಣವನ್ನು ಮೃತ ಸಾದಿಕ್ ಮತ್ತು ಆತನ ತಂದೆ ರಝಾಕ್ ಸಾಬ್ ಕರ್ನಾಟಕದಿಂದ ಲಾರಿಯಲ್ಲಿ ಮೊಗ್ರಾಲ್ ಪುತ್ತೂರಿಗೆ ತಂದಿದ್ದರು. ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಉಪ್ಪಳ: ಪಟ್ಟತ್ತಮೊಗರು ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತಿ ಕ್ಷೇತ್ರ ಸಮೀಪದ ಬಯಲಿನಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಮಂಜೇಶ್ವರ ಪೊಲೀಸರು ದಾಳಿ ನಡೆಸಿ ಏಳು ಮಂದಿಯನ್ನು ಬಂಧಿಸಿ 17 ಕೋಳಿಗಳನ್ನು ಹಾಗೂ 20,550 ರೂ. ವಶಪಡಿಸಿಕೊಂಡಿದ್ದಾರೆ. ಬಂಬ್ರಾಣ ನಿವಾಸಿ ಪ್ರಶಾಂತ್ ಕುಮಾರ್ (32), ಪಾಣಾಜೆಯ ರವೀಶ (23), ಮೂಡಂಬೈಲು ನಿವಾಸಿಗಳಾದ ಹರಿಜೀವನ್‌ದಾಸ್ (53), ರಾಜೀವ (55), ಪವಿ (46), ಸುರೇಶ್ (45), ಮಜಿಬೈಲಿನ ಚಂದ್ರಹಾಸ (60) ನನ್ನು ಪೊಲೀಸರು ಬಂಧಿಸಿದ್ದಾರೆ. ಕೋಳಿ ಅಂಕದ ಬಗ್ಗೆ ರಹಸ್ಯ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿದ್ದರು.
—————————————————-
ಬಚ್ಚಲು ಕೊಠಡಿ ಬೆಂಕಿಗಾಹುತಿ
ಉಪ್ಪಳ: ಅಟ್ಟೆಗೋಳಿ ನಿವಾಸಿ ಉಮೇಶ ಅವರ ಮನೆಗೆ ಹೊಂದಿಕೊಂಡಿರುವ ಬಚ್ಚಲು ಕೊಠಡಿಗೆ ಬೆಂಕಿ ಹತ್ತಿಕೊಂಡು ಸಾವಿರಾರು ರೂ. ನಷ್ಟ ಉಂಟಾಗಿದೆ. ಬಚ್ಚಲು ಕೊಠಡಿ ಸಮೀಪ ಸಂಗ್ರಹಿಸಿಟ್ಟಿದ್ದ 2000ದಷ್ಟು ಒಣ ತೆಂಗಿನ ಕಾಯಿ, ಮರ ಮೊದಲಾದವುಗಳು ಬೆಂಕಿಗಾಹುತಿಯಾಗಿವೆ. ಉಪ್ಪಳದ ಅಗ್ನಿಶಾಮಕ ದಳ ಮತ್ತು ಅಟ್ಟೆಗೋಳಿ ಯುವಕ ಸಂಘ ಗ್ರಂಥಾಲಯದ ಕಾರ್ಯಕರ್ತರು, ಸ್ಥಳೀಯರು ಬೆಂಕಿಯನ್ನು ಆರಿಸಿದರು.
————————————————————–
ದಿರ್ಹಂ ಬದಲು ಕಾಗದದ ಕಟ್ಟ ನೀಡಿ ವ್ಯಾಪಾರಿಗೆ 3 ಲಕ್ಷ ರೂ. ವಂಚನೆ
ಮಂಜೇಶ್ವರ: ಯುಎಇ ದಿರ್ಹಂ ಎಂದು ಸುಳ್ಳು ಹೇಳಿ ಕಾಸರಗೋಡು ಮನ್ನಿಪ್ಪಾಡಿ ಆರ್.ಡಿ. ನಗರ ಕೃಷ್ಣ ನಿಲಯದ ಆನಂದ (62) ಅವರಿಗೆ 3 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ. ಈ ಬಗ್ಗೆ ನೀಡಿದ ದೂರಿನಂತೆ ಉಪ್ಪಳದ ಹಾಶಿಂ ಮತ್ತು ಪಶ್ಚಿಮ ಬಂಗಾಲದ ರಾಜು ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.
Related Articles
—————————————————-
ಕಾರು – ಪಿಕಪ್ ಢಿಕ್ಕಿ: ಯುವಕನಿಗೆ ಗಾಯ
ಕುಂಬಳೆ: ಸೀತಾಂಗೋಳಿ ಮರದ ಮಿಲ್ ಬಳಿ ಕಾರು ಹಾಗೂ ಪಿಕಪ್ ಢಿಕ್ಕಿ ಹೊಡೆದು ಕುಡಾಲುಮೇರ್ಕಳ ನಿವಾಸಿ ಸಿದ್ದಿಕ್ (38) ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
——————————————————————
ಮಟ್ಕಾ: ಬಂಧನ
ಕಾಸರಗೋಡು: ನಗರದ ಹಳೆ ಬಸ್ ನಿಲ್ದಾಣ ಪರಿಸರದಲ್ಲಿ ಮಟ್ಕಾ ದಂಧೆಯಲ್ಲಿ ನಿರತನಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ 250 ರೂ. ವಶಪಡಿಸಿಕೊಂಡಿದ್ದಾರೆ. ಇಬ್ಬರು ಪರಾರಿಯಾಗಿದ್ದಾರೆ.
————————————————————
ಕಾರು ಢಿಕ್ಕಿ ಹೊಡೆಸಿ ಕೊಲೆಗೆ ಯತ್ನ: ಇಬ್ಬರು ವಶಕ್ಕೆ
ಕಾಸರಗೋಡು: ಬುಲೆಟ್ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಎಸ್‌ಟಿಯು ಕಾರ್ಯಕರ್ತ ಪಾರೆಕಟ್ಟೆಯ ಸಿದ್ದಿಕ್(26) ಅವರಿಗೆ ಕಾರು ಢಿಕ್ಕಿ ಹೊಡೆಸಿ ಕೊಲೆಗೈಯ್ಯಲು ಯತ್ನಿಸಿದ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಈ ಸಂಬಂಧ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕಾಸರಗೋಡು ಎಂ.ಜಿ. ರಸ್ತೆಯಲ್ಲಿ ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದೆ.
Advertisement