ಹೊಸದಿಲ್ಲಿ: ವಾಣಿಜ್ಯ ಬಳಕೆಯ 19ಕೆಜಿ ಸಿಲಿಂಡರ್ ಬೆಲೆಯಲ್ಲಿ ರವಿವಾರ 102 ರೂ. ಏರಿಕೆ ಮಾಡಲಾಗಿದ್ದು, ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ 19ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 2,355.50 ರೂ. ಆಗಿದೆ. ಈ ಬಗ್ಗೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ನಾಯಕರು ಬಿಜೆಪಿ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.
19ಕೆಜಿ ಸಿಲಿಂಡರ್ ಜತೆ 5ಕೆಜಿ ಸಿಲಿಂಡರ್ ಬೆಲೆಯಲ್ಲೂ ಏರಿಕೆ ಮಾಡಲಾಗಿದೆ. ಈ ಹಿಂದೆ 569 ರೂ. ಇದ್ದ 5ಕೆಜಿ ಸಿಲಿಂಡರ್ ಬೆಲೆ ರವಿ ವಾರದಿಂದ 655 ರೂ. ಆಗಿದೆ. ಈ ಬಗ್ಗೆ ಅಖೀಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ)ಯ ಪ್ರಧಾನ ಕಚೇರಿಯಲ್ಲಿ ಮಾತನಾಡಿರುವ ಪಕ್ಷದ ನಾಯಕಿ ಆಲ್ಕಾ ಲಂಬಾ “ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಮಾ.1ರಂದು 105 ರೂ. ಮತ್ತು ಎ.1ರಂದು 250 ರೂ. ಏರಿಸಲಾಗಿದೆ.
ಇದೀಗ ಮತ್ತೆ 102 ರೂ. ಏರಿಕೆ ಮಾಡಲಾಗಿದೆ. ಕಳೆದ 8 ತಿಂಗಳುಗಳಲ್ಲಿ 618.50 ರೂ. ಏರಿಕೆ ಯಾಗಿದೆ. ಪ್ರತಿ ಹಬ್ಬ ಬಂದಾಗ ಸರಕಾರ ಉಡು ಗೊರೆ ಕೊಡುವುದರ ಬಗ್ಗೆ ಬೆಲೆ ಏರಿಕೆಯ ಬರೆ ಕೊಡುತ್ತಿದೆ’ ಎಂದಿದ್ದಾರೆ.
“ಸರಕಾರ ಬೆಲೆ ಏರಿಕೆ ಮೂಲಕ ಬಡವರ ಹೊಟ್ಟೆ ಮೇಲೆ ಹೊಡೆಯು ತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆಯೂ ಇಳಿಕೆ ಯಾಗುತ್ತಿಲ್ಲ. ಹಣದುಬ್ಬರದ ವಿರುದ್ಧ ದಾಳಿ ಮಾಡಬೇಕಿದ್ದ ಮೋದಿ ಸರಕಾರ, ರಾಹುಲ್, ಕಾಂಗ್ರೆಸ್ ವಿರುದ್ಧ ದಾಳಿ ಮಾಡುವುದರಲ್ಲೇ ನಿರತವಾಗಿದೆ’ ಎಂದು ಆರೋಪಿಸಿದ್ದಾರೆ.