Advertisement

ಕುಂಟ ಕೋಣ ಮೂಕ ಜಾಣ:ಮಾಸ್‌ ಲೆಕ್ಕಾಚಾರಕ್ಕೊಂದು ಸ್ಪಷ್ಟ ನಿದರ್ಶನ 

01:29 PM Sep 01, 2018 | |

ವೃತ್ತಿ ನಾಟಕರಂಗ ಹಾಗೂ ಹವ್ಯಾಸಿ ನಾಟಕರಂಗ- ಈ ಎರಡು ಧ್ರುವಗಳು ವಿರುದ್ಧ ದಿಕ್ಕಿಗೆ ಮುಖಮಾಡಿ ನಿಂತಂತಿವೆ. ಕಲೆ ಒಂದೇ; ಆದರೆ, ವೃತ್ತಿನಾಟಕ ಕಂಪನಿಗಳವರದು ನಾಟಕದ ಮೂಲಕ ಜೀವನ ನಿರ್ವಹಣಾ ಮಾರ್ಗ. ಬೇರೆ ಬೇರೆ ಪ್ರಾಂತಗಳಲ್ಲಿ ಕ್ಯಾಂಪು ಹಾಕಬೇಕು; ಆದರೆ, ಹವ್ಯಾಸಿಗಳದ್ದು ಒಂದು ರೀತಿ ಸ್ಥಾವರದಲ್ಲಿ ವ್ಯವಹಾರ. ತೀರಾ ಅಪರೂಪಕ್ಕೆ ಮಾತ್ರ ಜಂಗಮತ್ವ. ಪ್ರದರ್ಶನಗಳೂ ಅಷ್ಟೇ; ಆಗೊಂದು ಈಗೊಂದು. ವೃತ್ತಿಗಳವರದು ದಿನನಿತ್ಯದ ಪ್ರದರ್ಶನ ಮತ್ತು ಪ್ರತಿ ಪ್ರದರ್ಶನವೂ ಹೌಸ್‌ಫ‌ುಲ್‌. ಹವ್ಯಾಸಿಗಳು ಆಡುವ ನಾಟಕ ಘನ ಬುದ್ಧಿಜೀವಿಗಳದ್ದಾದರೆ ಮತ್ತು ನಾಟಕದಲ್ಲಿ ನಟಿಸುತ್ತಿರುವ ನಟನಟಿಯವರ ಕಡೆಯವರು ಬಂದು ನೋಡಿದರೆ ಮಾತ್ರ ಮೊದಲ ಎರಡು ಶೋಗಳು ಹೌಸ್‌ಫ‌ುಲ್‌. ಮೂರನೇ ಶೋ ಹೊತ್ತಿಗೆ ಖಾಲಿಖಾಲಿ. ಕಾಮಿಡಿಗಳೆಂದರೆ ಒಂದಿಷ್ಟು ತಲೆಗಳು ಇಣುಕುತ್ತವೆ. ಆದರೆ, ಹವ್ಯಾಸಿಗಳಲ್ಲಿ ಕಾಮಿಡಿಗಳ ಬಗೆಗೆ ಬುದ್ಧಿಜೀವಿ ಧಿಮಾಕು ಇದೆ. ಪರಿಣಾಮ ಮೂರನೆ ಶೋ ಹೊತ್ತಿಗೆ ಕಣ್ಕಣ್ಣು ಬಿಡಬೇಕಾದ ಪರಿಸ್ಥಿತಿ. ಆದರೆ, ವೃತ್ತಿಗಳವರಲ್ಲಿ ಈ ಧಿಮಾಕು ಇಲ್ಲ. ಅವರಿಗೆ ಹಾಸ್ಯವೇ ಬಂಡವಾಳ. ಮುಂಚೆ ಸಂಗೀತ ಬಂಡವಾಳವಾಗಿದ್ದಿತು. ಈಗ ಸಂಗೀತದ ಶಕೆ ಮುಕ್ತಾಯವಾಗುತ್ತಿರುವಂತೆ ತೋರುತ್ತಿರುವಾಗ ಅವರು ಹಾಸ್ಯವನ್ನ ಪ್ರಧಾನವಾಗಿಸಿಕೊಂಡಿದ್ದಾರೆ.

Advertisement

  ಇಷ್ಟಾಗಿಯೂ ಈ ಎರಡು ವಿರುದ್ಧಮುಖೀ ಧ್ರುವಗಳ ಒಳಜಗಳ ನಡೆದೇ ಇದೆ- ಅದೂ ನೇರಾನೇರಾ ಆರೋಪಗಳಲ್ಲಿ. ವೃತ್ತಿಗಳವರಿಗೆ ಹವ್ಯಾಸಿ ನಾಟಕಗಳು ಕಲೆಕ್ಷನ್‌ನಲ್ಲಿ ಡಲ್‌. ಮಿಗಿಲಾಗಿ ಅರ್ಥವಾಗುವುದಿಲ್ಲ. ಹಾಗೊಂದು ವೇಳೆ ಅರ್ಥಕ್ಕೆ ನಿಲುಕಿದರೂ ಕೆಲವೇ ಮಂದಿಗೆ ಮಾತ್ರ. 

   ಹವ್ಯಾಸಿಗಳದ್ದು ಸಿದ್ಧಾಂತಮುಖೀ ರಾದ್ಧಾಂತ. ಇಸಂಗಳ ಅಬ್ಬರ. ರೂಪಕಗಳ ಗೊಡವೆ. ಕಾಮಿಡಿ ಎನ್ನುವುದು ಸಿಚುಯೇಷನಲ್‌ ಆಗೇ ಇರಬೇಕು ಎನ್ನುವ ಧಿಮಾಕು. ಜನ ಬರಲಿ, ಬಿಡಲಿ ತಮ್ಮ ವಿಷನ್‌ ಮಾತ್ರ ಬದಲು ಮಾಡಿಕೊಳ್ಳುವುದಿಲ್ಲ. ಇವರಿಗೆ ವೃತ್ತಿನಾಟಕ‌ ಕಂಪನಿಗಳ ನಾಟಕಗಳು ಡಬ್ಬಲ್‌ ಮೀನಿಂಗ್‌ನಿಂದ ಗಮನ ಸೆಳೆಯುತ್ತವೆ ಅನಿಸುತ್ತದೆ. ಅವು ಪರಮವಾಚ್ಯ ಅನಿಸುತ್ತವೆ. ಆದರೆ, ವೃತ್ತಿಯವರಿಗೆ ಹವ್ಯಾಸಿಗಳ ನಾಟಕಗಳಲ್ಲಿ ಒಂದು ಬೀಡುಬೀಸು ಇರುವುದಿಲ್ಲ. ಆ ಪರಿ ಮೌನಕ್ಕೆ ಅರ್ಥಕಾಣಿಸಿದರೆ ಜನ ಎದ್ದುನಡೆಯುತ್ತಾರೆ… ಹೀಗೆ.

  ಒಟ್ಟಿನಲ್ಲಿ ವೃತ್ತಿನಾಟಕಗಳ ಕಂಪನಿಗಳು ಬಹುತೇಕ ಕಾಣೆಯಾಗಿವೆ ಎಂದು ಮಾತು ಆರಂಭವಾಗಿರುವ ಸಂದರ್ಭದಲ್ಲೇ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಈಚೆಗೆ ವೃತ್ತಿ ನಾಟಕೋತ್ಸವ ನಡೆಯಿತು. ಜೇವರ್ಗಿ ರಾಜಣ್ಣನವರ ಕಂಪನಿಯ ಅವರ ವಿರಚಿತ ನಾಲ್ಕು ನಾಟಕಗಳು ಪ್ರದರ್ಶನಕ್ಕೆ ಅಣಿಯಾಗಿದ್ದವು. ಇವರ ಕಂಪನಿಯ ಜನಪ್ರಿಯ ನಾಟಕ “ಕುಂಟ ಕೋಣ ಮೂಕ ಜಾಣ’ ಈವರೆಗೆ 14 ಸಾವಿರ ಪ್ರದರ್ಶನಗಳನ್ನು ಕಂಡು ಮುನ್ನಡೆಯುತ್ತಿದೆ.

  ಈ ವೃತ್ತಿನಾಟಕಗಳನ್ನು ಹವ್ಯಾಸಿ ನಾಟಕಗಳ ಕಿಂಡಿಯಿಂದ ನೋಡಲು ಕೂರುವುದೇ ತಪ್ಪು. ಹಾಗೆ ಕೂತರೆ, ಬುದ್ಧಿಜೀವಿ ಧಿಮಾಕು ನಾಟಕವನ್ನು ಡಿಸೆಕ್ಟ್ ಮಾಡಿಬಿಡುತ್ತದೆ. ಇದರ ಬದಲಿಗೆ ವೃತ್ತಿಗಳವರ ದರ್ಶನದ ಅನುಸಾರ ನಾಟಕ ನೋಡಿದರೆ ಅದು ಬೇರೆಯಾಗಿಯೇ ಕಾಣುತ್ತದೆ. 

Advertisement

   ಕಥೆಯನ್ನು ಒಂದೇ ಎಳೆಯಲ್ಲಿ ಹೇಳಬಹುದು. ಕುರುಡ ಇದ್ದಾನೆ. ಅವನ ಹೆಂಡತಿಗೆ ಕುರುಡನನ್ನು ಕಂಡರೆ ಅಸಡ್ಡೆ. ಆಕೆಗೆ ಒಬ್ಬ ಕುಂಟನ ಬಗೆಗೆ ಸೆಳೆತ ಆರಂಭವಾಗಿದೆ. ಇದು ಕುರುಡನಿಗೆ ತಿಳಿಯುತ್ತಿಲ್ಲ. ಇವುಗಳ ನಡುವೆ ಮೂಕನ ಪ್ರವೇಶ. ಇವನಿಗೆ ಕುರುಡನ ಪತ್ನಿ ಹಾಗೂ ಕುಂಟನ ನಡುನ ಪ್ರೇಮ ಚಿಗುರುತ್ತಿರುವುದು ತಿಳಿಯುತ್ತಿದೆ. ಇದನ್ನು ಅವನು ಕುರುಡನಿಗೆ ಅರ್ಥಮಾಡಿಸಬೇಕು. ಆಡಿ ಹೇಳಲು ಮಾತಿಲ್ಲ. ಕರುಡನಿಗೆ ಕಾಣುವುದಿಲ್ಲ. ಇದರ ಜೊತೆಗೆ ಕುಟುಂಬವೊಂದರ ಏಳುಬೀಳುಗಳು ಮತ್ತು ರಾದ್ಧಾಂತ. 

   ಇಷ್ಟನ್ನು ರೂಪಕ ಮತ್ತು ವಾಚ್ಯಗಳ ಗೊಡವೆ ಹತ್ತಿಸಿಕೊಳ್ಳದೆ ತಂಡ ನಾಟಕ ಪ್ರದರ್ಶಿಸಿತು. ಮೊದಲೇ ಹೇಳಿದಂತೆ ಹಾಸ್ಯ ಇಲ್ಲಿ ಹೇರಳ ಮತ್ತು ಅದೇ ಪ್ರಧಾನ. ಹಿನ್ನೆಲೆಗೆ ಸುಂದರ ಸೀನರಿಗಳು ಮತ್ತು ಪರದೆಗಳು. ಪ್ರತಿಯೊಬ್ಬರ ಅಭಿನಯ ಚೇತೋಹಾರಿ. ಇದು ಪಕ್ಕಾ ಮಾಸ್‌ ಲೆಕ್ಕಾಚಾರದ ನಾಟಕವಾದ್ದರಿಂದ ಹವ್ಯಾಸಿಗಳು ಮಾಡುವ ಡಿಸೆಕ್ಟ್ಗೆ ಹೆದರಿಕೊಂಡಿಲ್ಲ. ವಸ್ತು ತಂತ್ರ ಕಲಾತ್ಮಕ ಆಂಗಿಕತೆಯ ಸಿದ್ಧಾಂತಗಳಲ್ಲೇ ತಮ್ಮನ್ನು ತಾವು ಜೀಕಿಕೊಳ್ಳುವವರಿಗೆ ಈ ನಾಟಕ ರುಚಿಸುವುದಿಲ್ಲ. ಕಂಪನಿಯವರ ಮಾಸ್‌ ಲೆಕ್ಕಾಚಾರದಿಂದ ನೋಡಿದರೆ ಮತ್ತು ಇದರಲ್ಲಿನ ಡಬಲ್‌ ಮೀನಿಂಗ್‌ಗಳನ್ನೂ ಮಾನ್ಯ ಮಾಡಿ ನೋಡಿದರೆ ನಾಟಕ ಇಷ್ಟವಾಗುತ್ತದೆ.

ಎನ್‌.ಸಿ. ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next