ಬೆಂಗಳೂರು/ ಮಹದೇವಪುರ: ಕೋವಿಡ್ 19 ಭೀತಿ ನಡುವೆ ಆರು ವರ್ಷದ ಹೆಣ್ಣು ಮಗು ರಾಜಕಾಲುವೆಗೆ ಬಿದ್ದು ಕೊಚ್ಚಿಹೋದ ಘಟನೆ ಶುಕ್ರವಾರ ಬೆಳ್ಳಂದೂರಿನ ಕರಿಯಮ್ಮ ನಗರದಲ್ಲಿ ನಡೆದಿದೆ. ಈ ಮುಂಗಾರಿನ ಮೊದಲ ಘಟನೆ ಇದಾಗಿದೆ. ಕೊಚ್ಚಿಹೋದ ಮಗುವನ್ನು 6 ವರ್ಷದ ಡೋಲಿ ಎಂದು ಗುರುತಿಸಲಾಗಿದ್ದು, ಅಸ್ಸಾಂನಿಂದ ಕೂಲಿ ಕೆಲಸಕ್ಕೆ ಬಂದಿದ್ದ ನಿತ್ಯಾನಂದ ದಂಪತಿ ಪುತ್ರಿಯಾಗಿದ್ದಾಳೆ.
ಮಧ್ಯಾಹ್ನ 2 ಗಂಟೆ ವೇಳೆಗೆ ಊಟ ಮುಗಿಸಿದ ಡೋಲಿ ಕೈ ತೊಳೆಯಲು ರಾಜಕಾಲುವೆ ಬಳಿ ಹೋಗಿದ್ದಾಳೆ. ಕಳೆದ ಎರಡು ದಿನಗಳಿಂದ ಮಳೆಯಾಗಿದ್ದರಿಂದ ಮಣ್ಣು ಕುಸಿದು ರಾಜಕಾಲುವೆಗೆ ಬಿದ್ದಿದ್ದಾಳೆ. ಸ್ವಲ್ಪ ದೂರದವರೆಗೂ ತೇಲಿಹೋದ ಮಗು ಬಳಿಕ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದೆ. ಅಸ್ಸಾಂ ಮೂಲದ ಬೆಂಗಳೂರಿನ ನಿವಾಸಿ ದಂಪತಿ, ಬಾಂಗ್ಲಾ ವಲಸಿಗರ ಕ್ಯಾಂಪ್‌ಗ್ಳಲ್ಲಿ ವಾಸವಿದ್ದರು. ಇಬ್ಬರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಮಗು ಬಿದ್ದ ಪ್ರದೇಶದಲ್ಲಿರುವ ರಾಜಕಾಲುವೆಗೆ ಯಾವುದೇ ತಡೆಗೋಡೆ ನಿರ್ಮಿಸಿರಲಿಲ್ಲ. ಸ್ಥಳಕ್ಕೆ ಧಾವಿಸಿದ ಸರ್ಜಾಪುರ ಮತ್ತು ಮಹದೇವಪುರ ಅಗ್ನಿಶಾಮಕ ದಳದ ಸಿಬ್ಬಂದಿ, 25 ಜನರ ಅಗ್ನಿಶಾಮಕ ದಳ ತಂಡದವರಿಂದ ಕಾರ್ಯಾಚರಣೆ ನಡೆಯುತ್ತಿದೆ. ಬೋಟ್ ಮೂಲಕ ಮಗುವಿನ ಪತ್ತೆ ಕಾರ್ಯಾಚರಣೆ ನಡೆಯುತ್ತಿದ್ದು, ಸ್ಥಳಕ್ಕೆ ಮಾರತಹಳ್ಳಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶುಕ್ರವಾರ ರಾತ್ರಿವರೆಗೂ ಕಾರ್ಯಾಚರಣೆ ನಡೆದಿದ್ದು, ಮಗು ಪತ್ತೆಯಾಗಿಲ್ಲ.
ಭಾರೀ ಮಳೆಯಿಂದ ನೀರು ಹೆಚ್ಚಳ: ಬುಧವಾರ ಮತ್ತು ಗುರುವಾರ ರಾತ್ರಿ ಸುರಿದ ಭಾರೀ ಮಳೆಯಿಂದ ರಾಜಕಾಲುವೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿತ್ತು. ಹೀಗಾಗಿ ರಕ್ಷಣೆಗೂ ಸಾಧ್ಯವಾಗದೆ, ನೂರು ಮೀಟರ್‌ಗೂ ಅಧಿಕ ದೂರ ಕೊಚ್ಚಿ ಹೋಗಿರಬಹುದು ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನು ಮಗುವಿನ ಶೋಧಕಾರ್ಯ ಬೋಟ್ ಮೂಲಕ ನಡೆದಿದೆ. ಸುಮಾರು 15 ಅಡಿ ಕಾಲುವೆಯ ಮೇಲ್ಭಾಗದಲ್ಲಿ ಬೃಹತ್ ಬಂಡೆಗಳಿವೆ. ಹೀಗಾಗಿ, ಶೋಧ ಕಾರ್ಯಕ್ಕೆ ಸ್ವಲ್ಪ ಅಡ್ಡಿಯಾಗುತ್ತಿದೆ.
ಶೆಡ್ ಹಾಕುವಂತಿಲ್ಲ?: ಬೆಳ್ಳಂದೂರು ಕರೆಯಿಂದ ವರ್ತೂರು ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ಯಲ್ಲಿ ಮಗು ಬಿದ್ದಿದೆ. ಮಗು ಬಿದ್ದ ಸ್ಥಳವನ್ನು ಬಫರ್ ಝೋನ್ ಎಂದು ಗುರುತಿಸಲಾಗಿದೆ. ಇದು ಹೊರವಲಯ ವಾಗಿದ್ದರಿಂದ ತಡೆಗೋಡೆ ನಿರ್ಮಿಸಿಲ್ಲ. ಬದಲಾಗಿ ಮಣ್ಣಿನಲ್ಲಿ ಗೋಡೆಗಳನ್ನು ಭದ್ರಗೊಳಿಸಿ ಚೈನ್ ಲಿಂಕ್ ಫೆನ್ಸಿಂಗ್ ಹಾಕಲಾಗಿತ್ತು. ಆದರೆ, ಶೆಡ್‌ಗಳು ಇರುವ ಸ್ಥಳದಲ್ಲಿ ಕಿಡಿಗೇಡಿ ಗಳು ಚೈನ್ ಲಿಂಕ್ ಕಟ್ ಮಾಡಿದ್ದಾರೆ. ಆದ್ದರಿಂದ ಅವಘಡ ಸಂಭವಿಸಿದೆ ಎಂದು ರಾಜಕಾಲುವೆ ಉಸ್ತುವಾರಿ ಅಧಿಕಾರಿ ಪ್ರಹ್ಲಾದ್ ತಿಳಿಸಿದ್ದಾರೆ.
ದೂರು ದಾಖಲು: ಅಜಾಗರೂಕತೆ ಆರೋಪದಡಿ ಮಗುವಿನ ಪೋಷಕರು ಹಾಗೂ ಶೆಡ್ ಹಾಕಿ ಬಾಡಿಗೆ ವಸೂಲಿ ಮಾಡುತ್ತಿದ್ದ ರವಿ ಎಂಬುವವರ ವಿರುದ ಬಿಬಿಎಂಪಿ ಅಧಿಕಾರಿಗಳು ಮಾರತ್ ಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವ್ಯಕ್ತಿಯೊಬ್ಬ ಅನಧಿಕೃತವಾಗಿ 600 ಶೆಡ್‌ಗಳನ್ನು ನಿರ್ಮಿಸಿ ಬಾಡಿಗೆ ವಸೂಲಿ ಮಾಡುತ್ತಿದ್ದ ಎಂದು ತಿಳಿದು ಬಂದಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.