Advertisement

ಎಸ್ಸೆಸ್ಸೆಲ್ಸಿ ಪರೀಕ್ಷಾ ವಿಧಾನ ಬದಲಾವಣೆ ಹೈಕೋರ್ಟ್‌ ಅಂಗಳಕ್ಕೆ

09:32 AM Feb 28, 2017 | Team Udayavani |

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷಾ ವಿಧಾನ ಬದಲಾಯಿಸಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸುವಂತೆ 34 ವಿದ್ಯಾರ್ಥಿಗಳ ಪೋಷಕರಿಂದ ಹೈಕೋರ್ಟ್‌ಗೆ ರಿಟ್‌ ಅರ್ಜಿ
ಸಲ್ಲಿಕೆಯಾಗಿದೆ. ಈ ಸಂಬಂಧ ಸೋಮವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಸುಜಾತ ಅವರಿದ್ದ ಏಕಸದಸ್ಯ ಪೀಠ, ವಿದ್ಯಾರ್ಥಿಗಳ ಪೋಷಕರು ಸಲ್ಲಿಸಿರುವ ರಿಟ್‌ ಅರ್ಜಿಗೆ ವಾರದೊಳಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ಸೂಚಿಸಿತು, ಅಲ್ಲದೆ ಉತ್ತರಪತ್ರಿಕೆ ಮುದ್ರಣದ ಟೆಂಡರ್‌ ಪ್ರಕ್ರಿಯೆ
ಸೇರಿದಂತೆ ಯಾವುದೇ ಚಟುವಟಿಕೆಗಳನ್ನು ಮುಂದುವರಿಸಬಾರದು ಎಂದು ಮೌಖೀಕ ಸೂಚನೆ ನೀಡಿ ಮುಂದಿನ ಸೋಮವಾರಕ್ಕೆ ವಿಚಾರಣೆ ಮುಂದೂಡಿದರು.

Advertisement

ವಿಚಾರಣೆ ವೇಳೆ ಅರ್ಜಿದಾರ ವಿದ್ಯಾರ್ಥಿಗಳ ಪರ ವಕೀಲರಾದ ಸುಮನ್‌ ಹೆಗ್ಡೆ,ರಾಜ್ಯ ಸರ್ಕಾರ ಹೊಸ ಮಾದರಿ ಬದಲಾವಣೆ ಪರೀಕ್ಷಾ ಪದ್ಧತಿಯನ್ನು ಪೂರ್ವ ತಯಾರಿಯಿಲ್ಲದೆ ಜಾರಿಗೊಳಿಸಲು ಮುಂದಾಗಿದೆ. ಇದರಿಂದ ಸರಕಾರದ ಬೊಕ್ಕಸಕ್ಕೂ ಹೊಡೆತ ಬೀಳಲಿದೆ. ಒಂದು ವೇಳೆ ಸರ್ಕಾರಕ್ಕೆ ಪರೀಕ್ಷಾ ಮಾದರಿ ಬದಲಾವಣೆ ಮಾಡುವ ಮನಸ್ಸಿದ್ದರೆ, ಶಿಕ್ಷಣ ತಜ್ಞರ ಸಲಹೆ ಪಡೆದು ಸಾಧಕ-ಬಾಧಕಗಳನ್ನು ಚರ್ಚಿಸಿ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಮಾಡಬೇಕಿತ್ತು. ಕಳೆದ ಡಿಸೆಂಬರ್‌ 6ರಂದು ಏಕಾಏಕಿ ಪರೀಕ್ಷಾ ಮಾದರಿ ಬದಲಾವಣೆ ಮಾಡುವ ನಿರ್ಧಾರದಿಂದ ವಿದ್ಯಾರ್ಥಿಗಳು
ಆತಂಕಕ್ಕೆ ಒಳಗಾಗಿದ್ದಾರೆ. ಈಗಾಗಲೇ ಅರ್ಧವಾರ್ಷಿಕ ಪರೀಕ್ಷೆ, ಪೂರ್ವಭಾವಿ ಪರೀಕ್ಷೆಯನ್ನು ಹಿಂದಿನ ಮಾದರಿಯಲ್ಲಿಯೇ ಉತ್ತರಿಸಿರುವ ವಿದ್ಯಾರ್ಥಿಗಳು ಹೊಸ ಬದಲಾವಣೆಗೆ ಒಗ್ಗಿಕೊಳ್ಳಲು ಕಷ್ಟವಾಗಲಿದೆ.

ಹೀಗಾಗಿ ವಿದ್ಯಾರ್ಥಿಗಳ ಮಾನಸಿಕ ಪರೀಕ್ಷಾ ಸಿದ್ಧತೆಯನ್ನು ಪರಿಗಣಿಸಿ, ಸರ್ಕಾರದ ಹೊಸ ಮಾದರಿ ಪರೀಕ್ಷಾ ಬದಲಾವಣೆ ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂದು ಕೋರಿದ್ದರು.

ಏನಿದು ವಿವಾದ? 
ಇದುವರೆಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಯನ್ನೊಳಗೊಂಡ ಒಂದೇ ಬುಕ್‌ಲೆಟ್‌ ನೀಡಲಾಗುತ್ತಿತ್ತು. ಆದರೆ ಇದೀಗ ಹೊಸ ಬದಲಾವಣೆ ಮಾದರಿಯಂತೆ ರಾಜ್ಯ ಪಠ್ಯಕ್ರಮ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆ ಬುಕ್‌ಲೆಟ್‌ ನೀಡಲಾಗುತ್ತದೆ. ಉತ್ತರ ಬರೆದ ಬುಕ್‌ಲೆಟ್‌ ಪ್ರತಿಯನ್ನು ವಿದ್ಯಾರ್ಥಿಗಳು ತೆಗೆದುಕೊಂಡು ಹೋಗುವುದರಿಂದ ಅವರೇ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಬಹುದು. ಪರೀಕ್ಷಾ ವಿಧಾನವೂ ಸುಲಭವಾಗಲಿದೆ ಎಂಬ ವಿವರಣೆ ನೀಡಿ ಡಿ.6ರಂದು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಅಧಿಸೂಚನೆ ಹೊರಡಿಸಿತ್ತು. ಈಗಾಗಲೇ ಉತ್ತರ ಪತ್ರಿಕೆಗಳ ಮುದ್ರಣದ ಟೆಂಡರ್‌ ಕೂಡ ನೀಡಲಾಗಿದೆ. ಆದರೆ ಸರ್ಕಾರದ ಅಧಿಸೂಚನೆ ವಿದಾರ್ಥಿಗಳಿಗೆ ತೊಂದರೆಯುಂಟಾಗಲಿದೆ. ಅಲ್ಲದೆ ಶೈಕ್ಷಣಿಕ ವರ್ಷಾಂತ್ಯದಲ್ಲಿ ಹೊಸ ವಿಧಾನ ಬದಲಾವಣೆ ಮಾಡಿರುವ ಕ್ರಮ ಸರಿಯಲ್ಲ ಹೀಗಾಗಿ ಅಧಿಸೂಚನೆ ರದ್ದುಪಡಿಸಬೇಕು
ಎಂದು ಕೋರಿ ಪೋಷಕರು ಹೈಕೋರ್ಟ್‌ಗೆ ರಿಟ್‌ ಅರ್ಜಿಸಲ್ಲಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next