Advertisement
ಹೌದು. ಇಂಥದ್ದೊಂದು ವಿನೂತನ ಆರೋಗ್ಯ ಸೇವೆ ಈಗ ಕೋಲಾರ ಜಿಲ್ಲೆಯಲ್ಲಿ ಲಭ್ಯ. ಎಲ್ಲಾ ರೀತಿಯ ಆರೋಗ್ಯ ಸೇವೆಗಳಿಗೂ ಒಂದೇ ಟೋಲ್ ಫ್ರೀ ನಂಬರ್‌ನ ಅಡಿಯಲ್ಲಿ ನೀಡುವ ಈ ವ್ಯವಸ್ಥೆಯನ್ನು ದೇಶದಲ್ಲೇ ಮೊದಲ ಬಾರಿಗೆ ಕೋಲಾರದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ ಕರೆಯ ಮೂಲಕ ಮಾಹಿತಿ ಪಡೆದುಕೊಳ್ಳಬಹುದು. ವೈದ್ಯರೊಂದಿಗೆ ಸಮಾಲೋಚನೆ, ಆಸ್ಪತ್ರೆಗಳಲ್ಲಿರುವ ಸೌಲಭ್ಯಗಳೇನು, ಔಷಧಿಗಳ ಲಭ್ಯತೆ, ಪ್ರಯೋಗಾಲಯ ಸೇವೆ ಇತ್ಯಾದಿ ಮಾಹಿತಿಗಳನ್ನು ಉಚಿತವಾಗಿಯೇ ಪಡೆದುಕೊಳ್ಳುವ ಅವಕಾಶ ಈ ಮೂಲಕ ಒದಗಿಸಲಾಗಿದೆ.
ಟಾಟಾ ಟ್ರಸ್ಟ್ ಇಂಥದ್ದೊಂದು ಹೊಸ ಯೋಜನೆಗೆ ಚಾಲನೆ ನೀಡಿದೆ. ಸಮುದಾಯ ಸೇವೆಗಳ ನಿಧಿಯಿಂದ ಎಲ್ಲಾ ನಾಗರೀಕರು ಕುಳಿತಲ್ಲೇ ಮಾಹಿತಿ ಪಡೆದುಕೊಳ್ಳುವಂತೆ ಯೋಜನೆ ರೂಪಿಸಿದೆ. ಆರು ತಿಂಗಳ ಬಳಿಕ ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸಿ ಅಧಿಕೃತವಾಗಿ ಜಾರಿಗೆ ತರಲಿದೆ. ಟಾಟಾ ಟ್ರಸ್ಟ್ ಈಗಾಗಲೇ ತಿರುವಂತನಪುರದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಹಾಗೂ ನವದೆಹಲಿಯ ಏಮ್ಸ್ ಆಸ್ಪತ್ರೆಗೆ ಸೀಮಿತವಾಗಿ ಟೋಲ್ ಫ್ರೀ ಕರೆಯ ಮೂಲಕ ಚಿಕಿತ್ಸೆ ಒದಗಿಸುವ ಸೇವೆಯನ್ನು ಡಿಜಿಟಲ್ ನರ್ವ್ ಸೆಂಟರ್ (ಡಿಐಎನ್‌ಸಿ) ಹೆಸರಿನಲ್ಲೇ ಆರಂಭಿಸಿದೆ. ಇದೀಗ ಕೋಲಾರ ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು ಜಿಲ್ಲಾಸ್ಪತ್ರೆಯವರೆಗೂ ಎಲ್ಲಾ ಆಸ್ಪತ್ರೆಗಳು ಒಳಪಡುವಂತೆ, ಎಲ್ಲಾ ನಾಗರಿಕರಿಗೂ ಸಿಗುವಂತೆ ಮಾಡಲಾಗಿದೆ. ಕೋಲಾರ ಜಿಲ್ಲಾಸ್ಪತ್ರೆಯೂ ಸೇರಿದಂತೆ ತಾಲೂಕು, ಸಮುದಾಯಿಕ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ 82 ಆಸ್ಪತ್ರೆಗಳನ್ನು ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಜತೆಗೆ ಜಿಲ್ಲೆಯ ತಜ್ಞ ವೈದ್ಯರು ತಮ್ಮ ನಿತ್ಯ ಸೇವಾವಧಿಯ ಒಂದು ಗಂಟೆಯನ್ನು ಕರೆ ಸ್ವೀಕರಿಸಿ ರೋಗಿಗಳ ಜತೆ ಸಂವಾದ ನಡೆಸಲು ಮೀಸಲಿಡುತ್ತಿದ್ದಾರೆ.
Related Articles
ಜಿಲ್ಲೆಯ 956 ಆಶಾ ಕಾರ್ಯಕರ್ತರ ಪೈಕಿ 300 ಆಶಾ ಕಾರ್ಯಕರ್ತರಿಗೆ 300 ಟ್ಯಾಬ್‌ಗಳನ್ನು ನೀಡಿದ್ದು, ಇವರು ತಮ್ಮ ವ್ಯಾಪ್ತಿಯ ಸಾರ್ವಜನಿಕರನ್ನು ಯೋಜನೆಗೆ ನೋಂದಾಯಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ನೇರವಾಗಿ ಆಸ್ಪತ್ರೆಗೆ ಬಂದು ಯೋಜನೆಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲೂ ಅವಕಾಶವಿದೆ. ಇವೆಲ್ಲದರ ಜತೆಗೆ ಡಿಜಿಟಲ್ ನರ್ವ್ ಸೆಂಟರ್‌ನಿಂದಲೂ ಮಾಹಿತಿ ನೀಡಲು ಅವಕಾಶ ಮಾಡಲಾಗಿದೆ.
Advertisement
ಯಾವೆಲ್ಲಾ ಆಸ್ಪತ್ರೆಗಳು ಈ ವ್ಯಾಪ್ತಿಗೆ?ಕೋಲಾರ ಜಿಲ್ಲೆಯಲ್ಲಿ ಸದ್ಯಕ್ಕೆ ಎಸ್‌ಎನ್‌ಆರ್, ಆಸ್ಪತ್ರೆ, 5 ತಾಲೂಕು ಆಸ್ಪತ್ರೆಗಳು, ಬೇತಮಂಗಲ ಹಾಗೂ ಗೌನಪಲ್ಲಿ ಸಮುದಾಯಿಕ ಆಸ್ಪತ್ರೆ, ಕೋಲಾರದ ಮುನ್ಸಿಫಲ್, ದರ್ಗಾ ಮೊಹಲ್ಲಾ ಆಸ್ಪತ್ರೆ, ಮಾಲೂರಿನ ದೊಡ್ಡಶಿವಾರ, ಬಂಗಾರಪೇಟೆಯ ಜನರಲ್ ಮತ್ತು ಅರ್ಬನ್ ಆಸ್ಪತ್ರೆ, ಶ್ರೀನಿವಾಸಪುರದ ಅಡ್ಡಗಲ್ ಮತ್ತು ಮುಳಬಾಗಿಲಿನ ತಾಯಲೂರು ಆಸ್ಪತ್ರೆಗಳಲ್ಲಿ ಡಿಜಿಟಲ್ ನರ್ವ್ ಸೆಂಟರ್ ಕೌಂಟರ್‌ಗಳನ್ನು ತೆರೆದು ಸಿಬ್ಬಂದಿ ನೇಮಕ ಮಾಡಿ ಕರೆ ಮಾಡಿ ಬಂದವರಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಮುಂದಿನ ಒಂದು ತಿಂಗಳೊಳಗಾಗಿ ಎಲ್ಲಾ 82 ಆಸ್ಪತ್ರೆಗಳಲ್ಲಿಯೂ ಇಂತ ಕೌಂಟರ್‌ಗಳನ್ನು ತೆರೆಯಲಾಗುತ್ತದೆ. ಉಪಯೋಗವೇನು?:
ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಏನೆಲ್ಲಾ ಚಿಕಿತ್ಸೆಗಳು ಲಭ್ಯವಿದೆ. ತಜ್ಞ ವೈದ್ಯರು ಎಲ್ಲಿ, ಯಾವ ಸಮಯದಲ್ಲಿ ಸಿಗುತ್ತಾರೆ. ಔಷಧಿ,ಆಧುನಿಕ ವೈದ್ಯೋಪಕರಣಗಳ ಮಾಹಿತಿಯನ್ನು ಪಡೆದು, ನಿಗದಿಪಡಿಸಿದ ವೇಳೆಯಲ್ಲೇ ಆಸ್ಪತ್ರೆಗೆ ತೆರಳಬಹುದು. ಇದರಿಂದ ಅನಗತ್ಯ ಓಡಾಟ, ಕಾಯುವಿಕೆಯನ್ನು ತಪ್ಪಲಿದೆ. ರೋಗಿಯ ಚಿಕಿತ್ಸೆಗೆ ಅಗತ್ಯವಾದಲ್ಲಿ ಬೆಂಗಳೂರಿನ ಆಸ್ಪತ್ರೆಗಳ ಮಾಹಿತಿಯನ್ನೂ ಸಂಗ್ರಹಿಸಿ ನೀಡಲಾಗುತ್ತದೆ. ಇದರಿಂದ ಪರಿಣಾಮಕಾರಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ. ವೈದ್ಯರ ಸಮಯವೂ ಉಳಿತಾಯವಾಗಲಿದೆ. ಚಿಕಿತ್ಸೆ ಪಡೆಯುವುದು ಹೇಗೆ?
– ಟೋಲ್ ಫ್ರೀ ನಂಬರ್‌ಗೆ ಕರೆಮಾಡಿ ಆಧರ್ ಸಂಖ್ಯೆ ನೀಡಿ ಹೆಸರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ.
– ಆಶಾ ಕಾರ್ಯಕರ್ತರ ಮೂಲಕವೂ ನೋಂದಣಿ ಸಾಧ್ಯ.
– ಬೆಳಗ್ಗೆ 9ಗಂಟೆಯಿಂದ ಸಂಜೆ 5ರವರೆಗೆ ನೋಂದಣಿಗೆ ಅವಕಾಶ.
– ಕರೆಯ ಮೂಲಕ ಜಿಲ್ಲೆಯ ಯಾವ ಆಸ್ಪತ್ರೆಯಲ್ಲಿ ಸಮಸ್ಯೆಗೆ ಚಿಕಿತ್ಸೆ, ಔಷಧಗಳು, ವೈದ್ಯೋಪಕರಣಗಳ ಬಗ್ಗೆ ಮಾಹಿತಿ ಲಭ್ಯ.
– ವೈದ್ಯರ ಭೇಟಿಗೂ ಸಮಯ, ದಿನಾಂಕ ನಿಗದಿಪಡಿಸಿಕೊಳ್ಳಬಹುದು. ಸ್ಥಳೀಯ ಆಸ್ಪತ್ರೆಗಳಲ್ಲೂ ಚಿಕಿತ್ಸೆಗೆ ಅವಕಾಶ.
– ಸ್ಥಳೀಯವಾಗಿ ಲಭ್ಯವಾಗದಿದ್ದರೆ, ಜಿಲ್ಲಾ ವೈದ್ಯಾಧಿಕಾರಿಗಳ ಜತೆ ಚರ್ಚಿಸಿ, ವಚ್ಯುìವಲ್ ಮೀಡಿಯಾ ಮೂಲಕ ಚಿಕಿತ್ಸೆ ಸಾಧ್ಯ. (ಅಂಕಿ-ಸಂಖ್ಯೆ ಬಳಕೆಗೆ)
4.30 ಲಕ್ಷ: ಆರು ತಿಂಗಳಿಂದ ಆಗಿರುವ ನೋಂದಣಿ
400: ಕರೆಗಳನ್ನು ಪ್ರತಿದಿನ ಸ್ವೀಕರಿಸುವ ಸಾಮರ್ಥ್ಯದ ಕೇಂದ್ರ ಸ್ಥಾಪನೆ
100: ಸದ್ಯಕ್ಕೆ ಪ್ರತಿದಿನ ಸ್ವೀಕರಿಸಲಾಗುತ್ತಿರುವ ಕರೆಗಳು ಕೋಲಾರ ಜಿಲ್ಲೆಯಲ್ಲಿ ಆರಂಭವಾಗಿರುವ ಡಿಜಿಟಲ್ ನರ್ವ್ ಸೆಂಟರ್ ದೇಶದ ಗಮನ ಸೆಳೆದಿದೆ. ಕೇಂದ್ರ ಆರೋಗ್ಯ ಮಂತ್ರಿ ಸೇರಿದಂತೆ ಅನೇಕ ಹಿರಿಯರು ಕಾರ್ಯವೈಖರಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೀಘ್ರವೇ ಈ ಯೋಜನೆ ಇಡೀ ದೇಶಕ್ಕೆ ವಿಸ್ತರಣೆಯಾಗಲಿದೆ.
– ಡಾ.ವಸಂತ್, ಡಿಜಿಟಲ್ ನರ್ವ್ ಸೆಂಟರ್ ಜಿಲ್ಲಾ ಸಂಯೋಜಕರು. ಗ್ರಾಮಾಂತರ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರ ಮೂಲಕ ನೋಂದಣಿ ಕಾರ್ಯ ಚುರುಕಾಗಿದೆ. ಆದರೆ, ನಗರ ಪ್ರದೇಶದ ಜನರಿಂದ ನಿರೀಕ್ಷಿಸಿದಷ್ಟು ನೋಂದಣಿ ಆಗುತ್ತಿಲ್ಲ. ಜಿಲ್ಲೆಯ 16 ಲಕ್ಷ ಮಂದಿಯೂ ನೋಂದಣಿ ಮಾಡಿಸಿಕೊಂಡರೆ ಎಲ್ಲಾ ಆಸ್ಪತ್ರೆಗಳಲ್ಲಿ ಪೂರ್ಣ ಪ್ರಮಾಣದ ಚಿಕಿತ್ಸೆ ಸಿಗುವಂತೆ ಮಾಡಲಾಗುವುದು.
– ಡಾ.ಬಿಂದು ಲಾವಣ್ಯ, ಎಸ್‌ಎನ್‌ಆರ್ ಆಸ್ಪತ್ರೆ, ಸಂಯೋಜಕರು. – ಕೆ.ಎಸ್.ಗಣೇಶ್