Advertisement

Indrali: ರಸ್ತೆಯಲ್ಲೇ ನಿಲ್ಲುವ ಬಸ್‌, ಗುಂಡಿಗಳಿಂದ ಅಪಾಯಕ್ಕೆ ಆಹ್ವಾನ

06:12 PM Aug 06, 2024 | Team Udayavani |

ಉಡುಪಿ: ಇಂದ್ರಾಳಿ ಬಸ್‌ ನಿಲ್ದಾಣ ಸಮೀಪದ ರಸ್ತೆ ಬದಿಯಲ್ಲಿರುವ ಗುಂಡಿಗಳು ದಿನದಿಂದ ದಿನಕ್ಕೆ ಬೃಹತ್‌ ಗಾತ್ರದ ಸ್ವರೂಪ ಪಡೆಯುವ ಮೂಲಕ ಅಪಾಯವನ್ನು ಆಹ್ವಾನಿಸುತ್ತಿದೆ. ಇನ್ನೊಂದೆಡೆ ಜಂಕ್ಷನ್‌ನ ರಸ್ತೆಯಲ್ಲಿಯೇ ಬಸ್‌ ನಿಲುಗಡೆ ಮಾಡುತ್ತಿರುವುದರಿಂದ ಪ್ರಯಾಣಿಕರು, ಸವಾರರಿಗೆ ಸಂಕಟ ಎದುರಾಗಿದೆ.

Advertisement

ಮಣಿಪಾಲ-ಉಡುಪಿ ಮುಖ್ಯರಸ್ತೆ ಯಲ್ಲಿ ಪ್ರಮುಖ ಪ್ರದೇಶವಾದ ಇಂದ್ರಾಳಿ ಪರಿಸರವು ಶಾಲೆ, ರೈಲ್ವೇ ನಿಲ್ದಾಣ, ರುದ್ರಭೂಮಿ ಸಹಿತ ಪ್ರಮುಖ ಸಂಸ್ಥೆ, ಸ್ಥಳಗಳನ್ನು ಹೊಂದಿದೆ. ಈ ಭಾಗದಲ್ಲಿ ಜನ ಓಡಾಟ ಅತ್ಯಂತ ಹೆಚ್ಚಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯರಸ್ತೆಯ ಬದಿಯಲ್ಲಿ ಬೃಹತ್‌ ಗುಂಡಿ ಸವಾರರನ್ನು ದಂಗು ಬಡಿಸುವಂತಿದೆ. ಇಲ್ಲಿನ ಹೆದ್ದಾರಿ ರಸ್ತೆ ವ್ಯವಸ್ಥಿತಗೊಂಡು ಎರಡು ವರ್ಷ ಕಳೆದಿದೆ. ಆದರೆ ರೈಲ್ವೇ ಮೇಲ್ಸೇತುವೆ ಸರಿಯಾಗಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಈ ರೀತಿ ಕೆಲವು ಸಮಸ್ಯೆಗಳು ಇನ್ನೂ ಜೀವಂತವಿದೆ.

ಇಂದ್ರಾಳಿ ಶ್ರೀ ಪಂಚದುರ್ಗಾ ಪರಮೇಶ್ವರೀ ದೇವಸ್ಥಾನ ಕಡೆಗೆ ಹೋಗುವ ರಸ್ತೆಯ ಅಂಚಿನಲ್ಲಿ ಮೂರು ಬೃಹತ್‌ ಗುಂಡಿಗಳು ಸಾಲಾಗಿ ನಿರ್ಮಾಣಗೊಂಡಿದ್ದು, ಸವಾರರಿಗೆ ಮರಣ ಬಾವಿಯಂತೆ ಬಾಯ್ದೆರೆದುಕೊಂಡಿವೆ. ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ಹೋಗುವವರು ವೇಗವಾಗಿ ಓವರ್‌ಟೇಕ್‌ ಮಾಡುವ ಭರದಲ್ಲಿ ಸಾಗಿದರೆ ಈ ಗುಂಡಿಗೆ ವಾಹನಗಳು ಬಿದ್ದು ಖಂಡಿತ ಅಪಘಾತ ಸಂಭವಿಸುತ್ತದೆ.

ಗುಂಡಿಗಳು ಅರಿವಿಗೆ ಬಾರದೆ ಅಪಘಾತ

ಮಳೆಗಾಲ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿರುವ ಈ ಬೃಹತ್‌ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತವೆ. ಓವರ್‌ಟೇಕ್‌ ಭರದಲ್ಲಿ ಸಾಗುವ ವಾಹನಗಳು ಗುಂಡಿಯ ಗಾತ್ರದ ಅರಿವಿಲ್ಲದೆ ವೇಗವನ್ನು ತಗ್ಗಿಸದೆ ವಾಹನ ಚಲಾಯಿಸುತ್ತಾರೆ. ಈ ವೇಳೆ ನಿಯಂತ್ರಣ ತಪ್ಪಿ ಕೆಲವರು ಬಿದ್ದ ಘಟನೆಗಳು ನಡೆದಿದೆ. ರಾತ್ರಿವೇಳೆ ಇಲ್ಲಿನ ವಾಹನ ಚಾಲನೆ ಮತ್ತಷ್ಟು ಅಪಾಯಕಾರಿಯಾಗಿದೆ. ತಾತ್ಕಾಲಿಕ ನೆಲೆಯಲ್ಲಿಯಾದರೂ ರಸ್ತೆ ಬದಿಯ ಗುಂಡಿ ಮುಚ್ಚುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement

ದ್ವಿಚಕ್ರವಾಹನ ಸವಾರರು ಸ್ವಲ್ಪಮಟ್ಟಿನ ಅಜಾಗರೂಕತೆ ತೋರಿದರೂ ಅಪಘಾತ ಕಟ್ಟಿಟ್ಟ ಬುತ್ತಿ ಎಂಬಂತಿದೆ. ಈಗಾಗಲೆ ಕೆಲವು ಈ ಗುಂಡಿ ಅವ್ಯವಸ್ಥೆಯಿಂದ ಬಿದ್ದು ಪೆಟ್ಟು ಮಾಡಿಕೊಂಡ ಘಟನೆಗಳು ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬಸ್‌ ನಿಲ್ದಾಣದ ಎದುರು ಬಸ್‌ ಗಳನ್ನು ನಿಲುಗಡೆ ಮಾಡುವಂತೆ ಪೊಲೀಸ್‌ ಇಲಾಖೆ ಕ್ರಮ ತೆಗೆದುಕೊಳ್ಳಬೇಕು. ಅಪಾಯಕಾರಿ ಗುಂಡಿಗಳನ್ನು ಮುಚ್ಚಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನಗರಸಭೆ, ಸಂಬಂಧಪಟ್ಟ ಇಲಾಖೆ ಮುಂದಾಗಬೇಕು ಎಂದು ನಾಗರಿಕರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next