ಆಫೀಸುಗಳಲ್ಲಿರುವ ಬಕೆಟ್ ಸಂಸ್ಕೃತಿ ಬಗ್ಗೆ ಅನೇಕರಿಗೆ ಗೊತ್ತು. ಆದರೆ, ಕಾಲೇಜಿನಲ್ಲೊಂದು ಬಕೆಟ್ ಕತೆಯುಂಟು… ಅದೇನು?
ಬಕೆಟ್ ಹಾಕೋದು, ಬಕೆಟ್ ಹಿಡಿಯೋದು… ಉದ್ಯೋಗ ಪ್ರಪಂಚದಲ್ಲಿ ಸಾಮಾನ್ಯವಾಗಿ ಇದನ್ನು ಕೇಳಿರುತ್ತೀರಿ. ಈ ಆಚರಣೆ ಭೂಮಿ ಮೇಲೆ ಕಣಿºಟ್ಟಿದ್ದು ಹೇಗೆ? ಇದೇ ನನ್ನ ಸಂಶೋಧನೆಯ ಸದ್ಯದ ಟಾಪಿಕ್. ಬಕೆಟ್ ಆಚರಣೆಯ ಮೂಲವನ್ನು ಹುಡುಕುತ್ತಾ ಹೋದವಳು, ಕೊನೆಗೆ ನಾನು ಬಂದು ನಿಂತಿದ್ದು ಕಾಲೇಜಿನ ಬುಡದಲ್ಲಿ! ಇದು ಕ್ಯಾಂಪಸ್ಸಿನಲ್ಲಿಯೇ ಹುಟ್ಟಿದ್ದೆನ್ನುವುದು ನನಗೆ ಆಗಲೇ ಗೊತ್ತಾಗಿದ್ದು! ಈ ಬಕೆಟ್‌ಗಳನ್ನು ಹಿಂಬಾಲಿಸಿ ಹೊರಟಾಗ, ಕೆಲವು ಮಜಬೂತ್ ನ್ಯೂಸುಗಳು ಸಿಕ್ಕವು.
ಕ್ಯಾಂಪಸ್ಸಿನ ಪ್ರಮುಖ ವಿದ್ಯಮಾನಗಳಲ್ಲಿ ಬಕೆಟ್‌ಗಳ ಕಾರುಬಾರು ದೊಡ್ಡದು. ಅಷ್ಟಕ್ಕೂ, “ಬಕೆಟ್ ಹಿಡಿಯುವುದು ಹೇಗೆ?’- ಈ ಪ್ರಶ್ನೆಯನ್ನು ನನಗೆದುರಾದ ಕೆಲವು ಬಕೆಟ್ ಕಿಂಗ್ ಹಾಗೂ ಕ್ವೀನ್ಸ್‌ಗಳ ಮುಂದಿಟ್ಟೆ. ಅವರು ತಿಳಿಸಿದ್ದಿಷ್ಟು: “ಇದು ವಿದ್ಯಾರ್ಥಿಗಳು- ಲೆಕ್ಚರರ್ ನಡುವೆ ನಡೆಯುವ ಕ್ರಿಯೆ. ಮೊದಲು ಲೆಕ್ಚರರ್ಗಳೊಂದಿಗೆ ನಯವಾಗಿ ಮಾತನಾಡಬೇಕು. ಅವರು ಕೊಟ್ಟ ಕೆಲಸಗಳನ್ನು ನಿಗದಿತ ಸಮಯಕ್ಕೆ ಮುಂಚಿತವಾಗಿ ಮುಗಿಸಬೇಕು. ಹೆಚ್ಚೆಚ್ಚು ಡೌಟ್ಸ್‌ಗಳನ್ನು ಕೇಳುತ್ತಿರಬೇಕು. ಕ್ಲಾಸಿನ ಪುಂಡು ಪೋಕರಿಗಳ ಬಗ್ಗೆ ಚಾಡಿ ಹೇಳಬೇಕು. ಡಿಪಾರ್ಟ್‌ಮೆಂಟ್‌ನಲ್ಲಿ ಯಾವಾಗ್ಲೂ ಝಾಂಡಾ ಹೂಡಬೇಕು. ಒಂದೇ ಮಾತಿನಲ್ಲಿ ಹೇಳ್ಳೋದಾದ್ರೆ, ಲೆಕ್ಚರರ್ಗಳ ಗುಲಾಮರಾಗಬೇಕು. ಇಷ್ಟೆಲ್ಲ ಮಾಡಿದರೆ ಒಂದು ಹಂತಕ್ಕೆ ನೀವು ಬಕೆಟ್ ಆದಂತೆ…’!
“ಬಕೆಟ್ ಹಿಡಿಯುವುದೆಂದರೆ, ಲೆಕ್ಚರರ್ಗಳಿಂದ ಸಕಾರಾತ್ಮಕವಾಗಿ ಗುರುತಿಸಲ್ಪಡುವುದು. ಅವರ sಠಿಛಿrಛಿಟಠಿyಟಛಿ ಅರ್ಥ ಮಾಡಿಕೊಳ್ಳುವುದು. ಒಟ್ಟಾರೆ ಫ್ರೆಂಡ್ಸ್ ಕೈಯಲ್ಲಿ ಉಪನ್ಯಾಸಕರ “ಚೇಲ’ ಎಂದು ಕರೆಸಿಕೊಳ್ಳುವುದು’ ಎನ್ನುತ್ತಾನೆ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿ ಗುರುರಾಜ್. “ಒಳ್ಳೆಯ ಕಾರಣಗಳಿಗೆ ಬಕೆಟ್ ಹಿಡಿಯುವುದರಿಂದ, ಲೆಕ್ಚರರ್ ಜತೆ ಸ್ನೇಹ ಸಂಪಾದನೆ ಸಾಧ್ಯ. ಆದರೆ, ಕೆಲವು ಲೆಕ್ಚರರ್, ವಿದ್ಯಾರ್ಥಿಗಳ ಅತಿರಿಕ್ತ ನಡವಳಿಕೆಯನ್ನು ಗಮನಿಸಿ, ಬಕೆಟ್ ಹಿಡಿಯಲು ಆಸ್ಪದ ಕೊಡುವುದಿಲ್ಲ’ ಎನ್ನುವ ವಾದ ಹಿರಿಯ ಪಿಜಿ ವಿದ್ಯಾರ್ಥಿ ಗಣೇಶ್‌ನದ್ದು.
“ಅಷ್ಟಕ್ಕೂ, ಬಕೆಟ್ ಏಕೆ ಹಿಡಿಯುತ್ತಾರೆ?’ ಎಂಬ ಪ್ರಶ್ನೆಗೆ ಹೀಗೊಂದು ಪಾಸಿಟಿವ್ ಉತ್ತರ ಬಂತು: “ಕೆಲವೊಂದು ಅನಿರೀಕ್ಷಿತ ಸನ್ನಿವೇಶಗಳಲ್ಲಿ ಬಕೆಟ್ ನಮ್ಮನ್ನು ರಕ್ಷಿಸಬಹುದು’ ಅಂತ! “ಕಾಲೇಜಿನ ಸುಂದರ ಗೋಡೆಗಳನ್ನು ನೋಡುತ್ತಾ, ಸಹಪಾಠಿಗಳಿಗೆ ಕಮೆಂಟ್ ಹಾಕುವ ಬದಲು ಬಕೆಟ್ ಹಿಡಿಯುವುದೇ ಲೇಸು’ ಎನ್ನುತ್ತಾರೆ ಕೆಲವರು. ಬಕೆಟ್‌ಗಳಿಗೆ ಉಪನ್ಯಾಸಕರಿಂದ ಗುರುತರ ಜವಾಬ್ದಾರಿಗಳು ಸಿಗುವುದರಲ್ಲಿ ಅನುಮಾನವಿಲ್ಲ. ಹಾಗಂತ ಬಕೆಟ್ ಹಾಕದವರು ದುಃಖೀಸಬೇಕಾಗಿಲ್ಲ. ಕಾಲೇಜಿನಲ್ಲಿ ನಿಮ್ಮ ಇರುವಿಕೆಯನ್ನು ನೀವು ಖಾತ್ರಿ ಪಡಿಸಿ, ಎಲ್ಲಾ ಚಟುವಟಿಕೆಗಳಲ್ಲಿ ಭಾಗಿಯಾಗಿ ಲೆಕ್ಚರರ್ಗಳಿಂದ ಭೇಷ್ ಎನಿಸಿಕೊಂಡರೆ ಬಕೆಟ್ ಹಿಡಿಯುವ ಅಗತ್ಯವೇ ಬಾರದು.
– ಪ್ರಜ್ಞಾ ಹೆಬ್ಟಾರ್, ಉಜಿರೆ