ಕೆ.ಆರ್.ಪುರ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಬಿ.ಎಂ.ಚಂದ್ರಶೇಖರ್ ಎಂಬುವವರ ಹತ್ಯೆಗೆ ಸುಪಾರಿ ಕೊಟ್ಟ ಅವರ ಸಹೋದರ ಸೇರಿ ಐವರನ್ನು ಬಂಧಿಸುವಲ್ಲಿ ರಾಮಮೂರ್ತಿನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಮಮೂರ್ತಿನಗರ ನಿವಾಸಿ ವೆಂಕಟಚಲ ಸುಪಾರಿ ಕೊಟ್ಟ ಸಹೋದರ. ಸುಪಾರಿ ಪಡೆದು ಹತ್ಯೆಗೆ ಯತ್ನಿಸಿದ ಮಂಜುನಾಥ, ಚಂದನ್, ಸೂರ್ಯ ಹಾಗೂ ಶಿವ ಎಂಬುವವರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಳಾದ ವೆಂಕಟೇಶ್ ಮತ್ತು ಸುಬ್ರಹ್ಮಣ್ಯ ಎಂಬುವವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದರು.
ಆರೋಪಿಗಳು ಡಿ.2ರಂದು ರಾತ್ರಿ 10 ಗಂಟೆ ಸುಮಾರಿಗೆ ರಿಯಲ್‌ಎಸ್ಟೇಟ್ ಉದ್ಯಮಿ ಬಿ.ಎಂ.ಚಂದ್ರಶೇಖರ್ ಅವರನ್ನು ರಾಮಮೂರ್ತಿನಗರದ ರಾಘವೇಂದ್ರ ಸರ್ಕಲ್‌ನಲ್ಲಿ ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದರು. ಈ ಸಂಬಂಧ ಉದ್ಯಮಿ ಚಂದ್ರಶೇಖರ್ ಪತ್ನಿ ಮಂಜುಳಾ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದಾಗ ಸಹೋದರನೇ ಸುಪಾರಿ ಕೊಟ್ಟ ಮಾಹಿತಿ ಲಭ್ಯವಾಗಿತ್ತು ಎಂದು ಪೊಲೀಸರು ಹೇಳಿದರು. ಆಸ್ತಿ ವಿಚಾರ ಕುರಿತು ಉದ್ಯಮಿ ಚಂದ್ರಶೇಖರ್ ಹಾಗೂ ಸಹೋದರ ವೆಂಕಟಚಲ ನಡುವೆ ಆಗಾಗ್ಗೆ ವಾಗ್ವಾದ ನಡೆಯುತ್ತಿತ್ತು.
ಇದರಿಂದ ಆಕ್ರೋಶಗೊಂಡ ವೆಂಕಟಚಲ ತನ್ನ ಸಹಚರ ಸುಬ್ರಹ್ಮಣ್ಯ ಹಾಗೂ ವೆಂಕಟೇಶ್‌ಗೆ 25 ಲಕ್ಷ ರೂ.ಗೆ ಸುಪಾರಿ ಕೊಟ್ಟಿದ್ದ. ಅಲ್ಲದೆ, ಮುಂಗಡ 5 ಲಕ್ಷ ರೂ. ಹಣ ಕೊಡ ಪಾವತಿಸಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಗಳಾದ ಚಂದನ್, ಶಿವು, ಸೂರ್ಯ ಹಾಗೂ ಮಂಜುನಾಥ್ ಡಿ.2ರಂದು ರಾತ್ರಿ ಚಂದ್ರೆಶೇಖರ ಮೇಲೆ ಮಾರಕಾಸ್ತ್ರಗಳಿಂದ ಇರಿದು ಕೊಲೆಗೆ ಯತ್ನಿಸಿದ್ದರು. ಅದೃಷ್ಟವಶಾತ್ ಚಂದ್ರಶೇಖರ್ ಪ್ರಾಣಾಪಾಯದಿಂದ ಪಾರಾಗಿದ್ದರು ಎಂದು ಪೊಲೀಸರು ಹೇಳಿದರು.