Advertisement

Karnataka: ಸರಕಾರದ ವಿರುದ್ಧ ಭ್ರಷ್ಟಾಚಾರದ ಬಾಂಬ್‌

12:16 AM Oct 18, 2023 | Team Udayavani |

ಬೆಂಗಳೂರು: ಈ ಹಿಂದೆ ಬಿಜೆಪಿ ಸರಕಾರದ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಆರೋಪ ಮಾಡಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಇದೀಗ ಮುಖ್ಯ
ಮಂತ್ರಿ ಸಿದ್ದರಾಮಯ್ಯ ಸರಕಾರ ವಿರುದ್ಧವೂ ಭ್ರಷ್ಟಾಚಾರ ಬಾಂಬ್‌ ಸ್ಫೋಟಿಸಿದ್ದಾರೆ. ಕಾಂಗ್ರೆಸ್‌ ಸರಕಾರದಲ್ಲಿ ಯಾವುದೇ ಪ್ರಮುಖ ಕೆಲಸಗಳು ನಡೆಯುತ್ತಿಲ್ಲ. ಈ ಸರಕಾರದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳುವ ಮೂಲಕ ಹೊಸ ರಾಜಕೀಯ ಚರ್ಚೆಗೆ ಕಾರಣರಾಗಿದ್ದಾರೆ.

Advertisement

ಮಂಗಳವಾರ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರ ಉಸ್ತುವಾರಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. ಭ್ರಷ್ಟಾಚಾರದ ಬಗ್ಗೆ ಡಿ.ಕೆ. ಶಿವಕುಮಾರ್‌ ಗಮನಕ್ಕೆ ತಂದಿದ್ದೇನೆ. ಭ್ರಷ್ಟಾಚಾರ ಇಲ್ಲ ಅಂತ ಹೇಳಿದರೆ ನನ್ನಂತ ಮೂರ್ಖ ಇನ್ನೊಬ್ಬರಿಲ್ಲ. ಹಿಂದೆಯೂ ಇತ್ತು, ಈಗಲೂ ಇದೆ. ಅದನ್ನು ತಡೆಗಟ್ಟಬೇಕೆಂದು ಹೇಳಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಐದೂವರೆ ತಿಂಗಳು ಆಗಿದೆ. ಕಾಮಗಾರಿ ಬಿಲ್‌ ಪೇಮೆಂಟ್‌ನಲ್ಲಿ ಅವ್ಯವಹಾರ ನಡೆಯುತ್ತಿದೆ. ಈ ಬಗ್ಗೆ ಡಿ.ಕೆ. ಶಿವಕುಮಾರ್‌ ಗಮನಕ್ಕೆ ತರಲಾಗಿದೆ. ಅವರು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ. ಪ್ರಮುಖ ಕಾಮಗಾರಿ ನಡೆದರೆ ಆಗ ಭ್ರಷ್ಟಾಚಾರದ ಬಗ್ಗೆ ಗೊತ್ತಾಗಲಿದೆ ಎಂದರು.

ಸಿಬಿಐ, ಇಡಿ ತನಿಖೆ ನಡೆಸಲಿ
ಸಿಎಂ ಸೂಚನೆ ಮೇರೆಗೆ ಕೆಂಪಣ್ಣ ಅವರು ಅಂಬಿಕಾಪತಿ ಅವರನ್ನು ಭೇಟಿ ಮಾಡಿದ್ದಾರೆಂಬ ಮಾಜಿ ಸಿಎಂ ಸದಾನಂದ ಗೌಡ ಹೇಳಿಕೆ ವಿರುದ್ಧ ಕಿಡಿಕಾರಿದ ಅವರು, ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಮೇಲಿನ ಆರೋಪ ಸುಳ್ಳು. ನಾನು ಅಂಬಿಕಾಪತಿ ಸುಮಾರು 45 ವರ್ಷಗಳಿಂದ ಸ್ನೇಹಿತರು. ಅಂಬಿಕಾಪತಿ ಆರೋಗ್ಯ ಸರಿಯಿರಲಿಲ್ಲ. ಆ ಹಿನ್ನೆಲೆಯಲ್ಲಿ ಅವರನ್ನು ಭೇಟಿ ಮಾಡಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಿಂದ ನಾನು ನೇರವಾಗಿ ನಮ್ಮ ಮನೆಗೆ ಹೋಗಿದ್ದೇನೆ ಎಂದರು.

ಕೆಲವು ಅಧಿಕಾರಿಗಳ ಮೇಲೆ ದೂರು ಹೇಳಿದ್ದೇವೆ
ಬಿಲ್‌ ಪಾವತಿ ವಿಚಾರದಲ್ಲಿ ಯಾರಾದರೂ ಕಮಿಷನ್‌ ಕೇಳಿದರೆ ಖಂಡಿತ ನಾನು ವಿರೋಧಿಸುತ್ತೇನೆ. ಪೇಮೆಂಟ್‌ ವಿಚಾರವಾಗಿ ಡಿ.ಕೆ. ಶಿವಕುಮಾರ್‌ ಅವರ ಜತೆಗೆ ಚರ್ಚೆ ನಡೆಸಿಲ್ಲ. ಆದರೆ ಬಿಬಿಎಂಪಿ ವಿಚಾರವಾಗಿ ಮಾತ್ರ ಮಾತನಾಡಿದ್ದೇವೆ. ಆದರೆ ಪಾಲಿಕೆ ಮುಖ್ಯ ಆಯುಕ್ತರ ವಿರುದ್ಧ ದೂರು ಹೇಳಿಲ್ಲ. ಕೆಲವು ಅಧಿಕಾರಿಗಳ ವಿರುದ್ಧ ದೂರು ಹೇಳಿದ್ದೇವೆ ಎಂದು ರಾಜ್ಯಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಹೇಳಿದರು. ಈ ತಿಂಗಳಲ್ಲಿ ಬಿಲ್‌ ಬಾಕಿ ಕೊಡಿಸುವುದಾಗಿ ತಿಳಿಸಿದ್ದಾರೆ. ಉಪ ಮುಖ್ಯಮಂತ್ರಿಗಳ ಭೇಟಿ ನಮಗೆ ಸಮಾಧಾನ ತಂದಿದೆ. ಹಣ ಬಿಡುಗಡೆಯಾದ ಮೇಲೆ ಪೂರ್ತಿ ಸಮಾಧಾನ ಆಗಲಿದೆ ಎಂದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next