ಚಿಕ್ಕಬಳ್ಳಾಪುರ: ತಾಯಿಯು ಕಾಳಜಿ, ಗಮನವನ್ನು ಮಕ್ಕಳ ಕಡೆ ಹರಿಸದಿದ್ದರೆ ಮಕ್ಕಳು ಸಮಾಜದಲ್ಲಿ ಕೆಟ್ಟವರಾಗಿ ಬೆಳೆಯುತ್ತಾರೆ. ಆದ್ದರಿಂದ ತಾಯಿಂದರು ಮಕ್ಕಳ ಬಗ್ಗೆ ಕಾಳಜಿ ವಹಿಸಿದರೆ ಮಕ್ಕಳು ಉತ್ತಮ ಪ್ರಜೆಗಳಾಗಿ ಬೆಳೆಯುತ್ತಾರೆ ಎಂದು ಆದಿಚುಂಚನಗಿರಿ ಶಾಖಾ ಮಠದ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು. ನಗರದ ಹೊರ ವಲಯದ ಅಗಲಗುರ್ಕಿಯ ಬಿಜಿಎಸ್ ಇಂಗ್ಲಿಷ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾತೃಭೋಜನ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಊಟ ಬಡಿಸುವುದರ ಮೂಲಕ ಚಾಲನೆ ನೀಡಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮಕ್ಕಳ ಮುಂದೆ ಜಗಳ ಮಾಡಬೇಡಿ: ಪ್ರತಿ ಮಕ್ಕಳ ಬೆಳವಣಿಗೆಯಲ್ಲಿ ತಂದೆ ಮತ್ತು ತಾಯಿ ಇಬ್ಬರೂ ಸಮಾನವಾಗಿ ಪಾತ್ರ ವಹಿಸುತ್ತಾರೆ. ಮಕ್ಕಳ ಮುಂದೆ ಪೋಷಕರು ಜಗಳವಾಡಬಾರದು ಎಂಬ ಸಲಹೆ ನೀಡಿದರು. ಹಿರಿಯ ನಟಿ ನಟಿ ಗಿರಿಜಾ ಲೋಕೇಶ್ ಮಾತನಾಡಿ, ಮಾತೃ ಪ್ರೇಮದ ಸವಿತುತ್ತುನಿಕ್ಕುವ ಈ ಕಾರ್ಯಕ್ರಮ ವೈಶಿಷ್ಟವಾಗಿದ್ದು, ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುವುದು ಇಂದಿನ ದಿನಗಳಲ್ಲಿ ಅಗತ್ಯವಾಗಿದ್ದು, ಇವುಗಳಿಂದ ನಮ್ಮ ಸಂಸ್ಕೃತಿಯಲ್ಲಿನ ತಾಯಿ ಮಕ್ಕಳ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳುತ್ತದೆ ಎಂದರು.
ಬಿಜಿಎಸ್ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಡಾ.ಎನ್.ಶಿವರಾಮರೆಡ್ಡಿ ಮಾತನಾಡಿ, ನಾವು ಮಕ್ಕಳಿಗೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಹಾಗೂ ವೈವಿಧ್ಯಮಯ ಚಟುವಟಿಕೆಗಳನ್ನು ಶಾಲೆಯಲ್ಲಿ ಆಯೋಜಿಸ್ತುತೇವೆ ಎಂದು ಹೇಳಿದರು. ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಜಿ ನಾಗೇಶ್, ಎಸ್ಪಿ ಅಭಿನವ ಖರೆ, ಬಿಜಿಎಸ್ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ಎನ್.ಶಿವರಾಮ್, ಬೆಂಗಳೂರಿನ ಸಮಾಜ ಸೇವಕರಾದ ತಪೋವನ ಶಿವಕೀರ್ತಿ, ಬಿಜಿಎಸ್ ಪ್ರಾಂಶುಪಾಲ ಡಿ.ಸಿ.ಮೋಹನ್ ಕುಮಾರ್, ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರು ಹಾಗೂ ಬಿಜಿಎಸ್ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಪೋಷಕರು ಮನೆಗಳಿಂದ ಬಗೆ ಬಗೆಯ ರುಚಿಕರವಾದ ಅಡುಗೆ ಮಾಡಿಕೊಂಡು ಬಂದು ಎಲ್ಲಾ ಮಕ್ಕಳಿಗೂ ಕೈ ತುತ್ತುನಿಕ್ಕುವ ಮೂಲಕ ಮಾತೃ ಪ್ರೇಮ ಮೆರೆದರು. ಹಿರಿಯ ನಟಿ ಗಿರಿಜಾ ಲೋಕೇಶ್ ನಟಿಸಿರುವ ಸಿನಿಮಾದ ಹಾಡುಗಳಿಗೆ ಮಕ್ಕಳು ಆಡಿದ ನೃತ್ಯವನ್ನು ನೋಡಿ ಗಿರಿಜಾ ಲೋಕೇಶ್ ಭಾವಪರವಶರಾದರು.