ಕುಂದಾಪುರ: ಇಲ್ಲಿನ ನಿವಾಸಿ ರತಿಕ್ ಮುರುಡೇಶ್ವರ ಅವರು ನಟಿಸಿದ ಆ 90 ದಿನಗಳು ಸಿನಿಮಾ ಅಂತಾರಾಷ್ಟ್ರೀಯ ಚಿತ್ರೋತ್ಸವದ ಭಾರತೀಯ ಸಿನೆಮಾ ಸ್ಪರ್ಧೆಗೆ ಆಯ್ಕೆಯಾಗಿದೆ.
ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಅವರ ಪುತ್ರ ರತಿಕ್ ಅವರು ನಾಯಕ ನಟರಾಗಿ ನಟಿಸಿದ ಆ 90 ದಿನಗಳು ಸಿನಿಮಾ, 13 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2021ರ ಟಾಪ್ 12ರಲ್ಲಿ ಆಯ್ಕೆಯಾಗಿದೆ. ಮಾಲ್ವಿಕ ಮೋಶನ್ ಪಿಚ್ಚರ್ಸ್ ನಿರ್ಮಾಣದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗುಲ್ವಾಡಿ ಟಾಕೀಸ್ ಅರ್ಪಿಸಿದ ರೊನಾಲ್ಡ್ ಲೋಬೊ ಮತ್ತು ಯಾಕೂಬ್ ಖಾದರ್ ಗುಲ್ವಾಡಿ ನಿರ್ದೇಶನದ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥೆ ಹೊಂದಿರುವ ಆ 90 ದಿನಗಳು ಸಿನಿಮಾದಲ್ಲಿ ರತಿಕ್ ಮುರ್ಡೇಶ್ವರ್, ಪ್ರಸಿದ್ಧ ನಟಿ ಭವ್ಯಾ, ರಾಧಾ ಭಗವತಿ, ಕೃತಿಕಾ ದಯಾನಂದ್, ಜೋ ಸೈಮನ್, ಪ್ರದೀಪ್ ಪೂಜಾರಿ , ಅಮೀರ್ ಹಂಝ, ಪಕೀರ್ ಸಲಾಂ, ರವಿ ಕಿರಣ್ ಮುರ್ಡೇಶ್ವರ ಮುಂತಾದವರು ಅಭಿನಯಿಸಿದ್ದಾರೆ.
ರತಿಕ್ ಮುರುಡೇಶ್ವರ
ಸಹ ನಿರ್ಮಾಪಕರಾಗಿ ಗಿರೀಶ ಶೆಟ್ಟಿಗಾರ್, ನವೀನ ವಿಲಿಯಮ್ಸ್ ಬರ್ಬೊಜ, ತಾಂತ್ರಿಕ ನಿರ್ದೇಶನದಲ್ಲಿ ಬಿ. ಶಿವಾನಂದ್, ಛಾಯಾಗ್ರಹಣದಲ್ಲಿ ಪಿ.ವಿ.ಆರ್. ಸ್ವಾಮಿ ಗೂಗಾರ ದೊಡ್ಡಿ, ಸಂಗೀತದಲ್ಲಿ ಕೃಷ್ಣ ಬಸ್ರೂರು , ಸಂಕಲನದಲ್ಲಿ ನಾಗೇಶ ಎನ್., ಕಲರಸ್ಟ್‌ನಲ್ಲಿ ಜೆ. ಗುರು ಪ್ರಸಾದ್, ಸೌಂಡ್ ಡಿಸೈನರ್ ಆಗಿ ಬಾಲಕೃಷ್ಣ, ಸಾಹಿತ್ಯದಲ್ಲಿ ಪ್ರಮೋದ ಮರವಂತೆ ,ಗಾಯಕರಾಗಿ ಅರ್ಫಾಝ್ ಉಳ್ಳಾಲ್, ಶಶಿಕಲ ಸುನಿಲ್ ಮುಂತಾದವರು ಕೆಲಸ ಮಾಡಿದ್ದಾರೆ ಎಂದು ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ ತಿಳಿಸಿದ್ದಾರೆ.
ಜಗತ್ತಿನಾದ್ಯಂತ 6 ಸಾವಿರ ಚಲನಚಿತ್ರೋತ್ಸವ ನಡೆಯುತ್ತವೆ. ಈ ಪೈಕಿ ಬೆಂಗಳೂರು ಚಲನಚಿತ್ರೋತ್ಸವ ಮಾನ್ಯತೆ ಪಡೆದ 43 ಚಿತ್ರೋತ್ಸವಗಳ ಸಾಲಿನಲ್ಲಿ ಸೇರಿದ್ದು, ಭಾರತೀಯ ಚಿತ್ರರಂಗದ 60 ಸಿನಿಮಾದಲ್ಲಿ 12 ಉತ್ತಮ ಸಿನಿಮಾ ಆಯ್ಕೆ ಮಾಡಲಾಗುತ್ತದೆ.
ಅದರಂತೆ ಆ 90 ದಿನಗಳು ಸಿನಿಮಾ ಉತ್ತಮ ಚಿತ್ರದಲ್ಲಿ ಮೊದಲನೇ ಟಾಪ್ 12 ರಲ್ಲಿ ಸಮಿತಿಯಿಂದ ಆಯ್ಕೆ ಆಗಿದೆ. ಇದರಲ್ಲಿ ತಮಿಳು, ಕನ್ನಡ ಚಿತ್ರಗಳು ಆಯ್ಕೆಯಾಗಿದ್ದು ಹಿಂದಿ ಸೇರಿಲ್ಲ.