ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಲ್ಸ್ ಪೊಲೀಯೊ ಕಾರ್ಯಕ್ರಮದ ಸಿದ್ಧತೆ ಬಗ್ಗೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮಕ್ಕೆ ಸೂಚನೆ ನೀಡಿದರು.
ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪಲ್ಸ್ ಪೊಲೀಯೊ ವನ್ನು ಕಡ್ಡಾಯವಾಗಿ ಹಾಕಬೇಕು. ಕೊಡಗು ಜಿಲ್ಲೆಯಿಂದ ಹೊರ ಹೋಗುವ ಹಾಗೂ ಬರುವ ವಲಸೆ ಮಕ್ಕಳು, ಜೊತೆಗೆ ಕಳೆದ ಬಾರಿ ಪಲ್ಸ್ ಪೊಲೀಯೊದಿಂದ ಹೊರಗುಳಿದ ಮಕ್ಕಳನ್ನು ಗುರ್ತಿಸಿ ಪಲ್ಸ್ ಪೊಲೀಯೊ ಹನಿ ಹಾಕಬೇಕು. ಹಾಗೆಯೇ ಜಿಲ್ಲೆಯ ಜನ ದಟ್ಟಣೆ ಇರುವ ಪ್ರದೇಶಗಳಲ್ಲಿ ತಂಡ ರಚಿಸಿ ಪಲ್ಸ್ ಪೊಲೀಯೊ ಹನಿ ಹಾಕುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಧಿಕಾರಿ ನಿರ್ದೇಶನ ನೀಡಿದರು.
Advertisement
ಜಿಲ್ಲೆಯಲ್ಲಿ ಅಲ್ಲಲ್ಲಿ ಮನೆಗಳು ಇರುವುದರಿಂದ ಮತ್ತು ಕುಗ್ರಾಮಗಳಿಗೆ ಪಲ್ಸ್ ಪೊಲೀಯೊ ಪೂರೈಕೆ ಮಾಡಲು ಅಗತ್ಯ ವಾಹನಗಳನ್ನು ಒದಗಿಸಬೇಕು. ಜತೆಗೆ ಪೊಲೀಯೊ ಲಸಿಕೆ ಹಾಳಾಗದಂತೆ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ತಿಳಿಸಿದರು.ಜಿ.ಪಂ. ಸಿಇಒ ಚಾರುಲತಾ ಸೋಮಲ್ ಅವರು ಮಾತ ನಾಡಿ, ಪಲ್ಸ್ ಪೊಲೀಯೊ ಜಿಲ್ಲೆಯಲ್ಲಿ ಯಶಸ್ವಿಯಾಗಲು ಸಾರ್ವಜನಿಕ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಕಾರ್ಯ ನಿರ್ವಹಿಸಬೇಕೆಂದರು.
ಜಿಲ್ಲೆಯ ವಿವಿಧ ಹಾಡಿಗಳು, ವಲ್ನರೆಬಲ್ ಪ್ರದೇಶ, ಲೈನ್‌ಮನೆಗಳು ಹಾಗೂ ಜನದಟ್ಟಣೆ ಪ್ರದೇಶಗಳಿಗೆ ತೆರಳಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೊ ಹನಿ ಹಾಕಬೇಕು ಎಂದು ಜಿ.ಪಂ. ಸಿಇಒ ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್‌ಸಿಎಚ್ ಅಧಿಕಾರಿ ಡಾ| ನಿಲೇಶ್ ಅವರು ಜಿಲ್ಲೆಯಲ್ಲಿ ಒಟ್ಟು 5,76,086 ಜನಸಂಖ್ಯೆ ಇದ್ದು, ಇವರಲ್ಲಿ 54,735 ಮಂದಿ ನಗರ/ಪಟ್ಟಣ ಪ್ರದೇಶದಲ್ಲಿ ಮತ್ತು 5,21,351 ಗ್ರಾಮೀಣ ಪ್ರದೇಶದಲ್ಲಿ ಜನಸಂಖ್ಯೆ ಇದ್ದಾರೆ. ಇವರಲ್ಲಿ 5 ವರ್ಷದೊಳಗಿನ 45,650 ಮಕ್ಕಳು ಜಿಲ್ಲೆಯಲ್ಲಿದ್ದು, ಇವರಲ್ಲಿ 4,678 ನಗರ ಮತ್ತು 40,972 ಗ್ರಾಮೀಣ ಪ್ರದೇಶದ ಮಕ್ಕಳಿದ್ದಾರೆ. ಹಾಗೆಯೇ ಜಿಲ್ಲೆಯಲ್ಲಿ 2,15,598 ವಲಸಿಗ ಜನಸಂಖ್ಯೆ ಇದ್ದು, ಇವರಲ್ಲಿ 17,660 ಐದು ವರ್ಷದೊಳಗಿನ ಮಕ್ಕಳು ಇದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ 1,24,004 ಕುಟುಂಬಗಳಿವೆ ಎಂದು ತಿಳಿಸಿದರು.
ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲ, ಚೇರಂ ಬಾಣೆ, ಸಂಪಾಜೆ, ಮಡಿಕೇರಿ ನಗರದ ಖಾಸಗಿ ಬಸ್ ನಿಲ್ದಾಣ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತ, ರಾಜಾಸೀಟು, ಸೋಮವಾರಪೇಟೆ ತಾಲೂಕಿನ ಸೋಮವಾರಪೇಟೆ ಖಾಸಗಿ ಬಸ್ ನಿಲ್ದಾಣ, ಕುಶಾಲನಗರದ ಖಾಸಗಿ ಬಸ್ ನಿಲ್ದಾಣ, ಕೆ.ಎಸ್.ಆರ್.ಟಿ. ಬಸ್ ನಿಲ್ದಾಣ, ನಿಸರ್ಗಧಾಮ, ಕೊಡ್ಲಿಪೇಟೆ ಬಸ್ ನಿಲ್ದಾಣ, ಶನಿವಾರಸಂತೆ ಬಸ್ ನಿಲ್ದಾಣ. ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ಬಸ್ ನಿಲ್ದಾಣ, ಮಾಕುಟ್ಟ, ಕುಟ್ಟ ಗೇಟ್, ತಿತಿಮತಿ ಆನೆ ಚೌಕೂರು ಗೇಟ್, ಮಾಲ್ದಾರೆ ಗೇಟ್, ಅಮ್ಮತ್ತಿ ಬಸ್ ನಿಲ್ದಾಣ, ಸಿದ್ದಾಪುರ ಬಸ್ ನಿಲ್ದಾಣಗಳಲ್ಲಿ ಟ್ರಾನ್ಸಿಸ್ಟ್ ತಂಡವನ್ನು ನಿಯೋಜಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಒ.ಆರ್. ಶ್ರೀರಂಗಪ್ಪ ಅವರು ಜಿಲ್ಲಾ ಸರ್ಜನ್ ಡಾ| ಅಜೀಜ್, ಸಾರಿಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರ್ವಜನಿಕ ಶಿಕ್ಷಣ, ನಗರ ಸಭೆ ಹೀಗೆ ನಾನಾ ಇಲಾಖೆ ಅಧಿಕಾರಿಗಳು ಹಾಜರಿದ್ದರು.