ಬೆಂಗಳೂರು: ಬಿಬಿಎಂಪಿಯಿಂದ ಸಲ್ಲಿಕೆಯಾಗಿದ್ದ 9,994 ಕೋಟಿ ರೂ. ಪರಿಷ್ಕೃತ ಬಜೆಟ್‌ಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. 2017-18ನೇ ಸಾಲಿನ ಬಜೆಟ್‌ನ್ನು ಪಾಲಿಕೆಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್ ಅವರು ಮಾರ್ಚ್‌ನಲ್ಲಿ ಮಂಡಿಸಿದ್ದರು.
ಈ ವೇಳೆ ಬಜೆಟ್ 9,243.41 ಕೋಟಿ ರೂ. ಸ್ವೀಕೃತಿಗಳು ಮತ್ತು 9,241.04 ಕೋಟಿ ರೂ. ವೆಚ್ಚಗಳನ್ನು ಒಳಗೊಂಡಿತ್ತು. ಆನಂತರದಲ್ಲಿ ಬಜೆಟ್‌ಗೆ ಕೆಲವೊಂದು ಯೋಜನೆಗಳನ್ನು ಸೇರಿಸಿರುವುದರಿಂದ 2017-18ನೇ ಸಾಲಿನ ಬಜೆಟ್ ಗಾತ್ರ 9,994.54 ಕೋಟಿ ರೂ.ಗೆ ಹೆಚ್ಚಿದೆ.
ಪರಿಷ್ಕೃತ ಬಜೆಟ್‌ನಲ್ಲಿ ವಿವಿಧ ಮೂಲಗಳಿಂದ ಹೆಚ್ಚಿನ ವರಮಾನವನ್ನು ನಿರೀಕ್ಷೆ ಮಾಡಲಾಗಿದೆ. ಅದಕ್ಕೆ ತಕ್ಕಂತೆ 559 ಕೋಟಿ ರೂ. ಗಳನ್ನು ವಾರ್ಡ್‌ಗಳ ಅಭಿವೃದ್ಧಿಗಾಗಿ ವಿಶೇಷ ಅನುದಾನದ ಹೆಸರಿನಲ್ಲಿ ನೀಡಲು ತೀರ್ಮಾನಿಸಲಾಗಿದೆ. ಜತೆಗೆ ಕೆಂಪೇಗೌಡ ದಿನಾಚರಣೆಗೆ ಹೆಚ್ಚುವರಿಯಾಗಿ 2.25 ಕೋಟಿ ರೂ. ಮತ್ತು ವಿಶೇಷ ಅಭಿವೃದ್ಧಿ ಕಾಮಗಾರಿಗಳ ಹೆಸರಲ್ಲಿ ಬೇಗೂರು ಮತ್ತು ವಸಂತಪುರ ವಾರ್ಡ್‌ಗೆ ಹೆಚ್ಚುವರಿಯಾಗಿ 17 ಕೋಟಿ ರೂ. ಅನುದಾನ ನೀಡಲಾಗಿದೆ.
ಕೆಂಪೇಗೌಡ ಅಧ್ಯಯನ ಪೀಠಕ್ಕೆ 50 ಕೋಟಿ: ಜ್ಞಾನಭಾರತಿ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಕೆಂಪೇಗೌಡ ಅಧ್ಯಯನ ಪೀಠಕ್ಕೆ ಹೆಚ್ಚುವರಿಯಾಗಿ ಅನುದಾನ ನೀಡಲಾಗಿದೆ. ಈ ಹಿಂದೆ ಪೀಠಕ್ಕೆ 7 ಕೋಟಿ ರೂ. ಅನುದಾನ ನೀಡುವುದಾಗಿ ಘೋಷಿಸಲಾಗಿತ್ತು. ಪರಿಷ್ಕೃತ ಬಜೆಟ್‌ನಲ್ಲಿ ಅನುದಾನವನ್ನು 50 ಕೋಟಿ ರೂ. ಗೆ ಹೆಚ್ಚಿಸಲಾಗಿದೆ. ಯಶವಂತಪುರ, ಕೆ.ಆರ್.ಪುರ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಿಗೆ ತಲಾ 15 ಕೋಟಿ ರೂ. ಗಳಂತೆ ವಿಶೇಷ ಅನುದಾನ ನೀಡಲಾಗಿದೆ.
ರಾಜ್ಯ ಹಣಕಾಸು ಆಯೋಗದಿಂದ ನೀಡಲಾಗಿರುವ 286.26 ಕೋಟಿಗಳ ಪೈಕಿ 215.28 ಕೋಟಿ ರೂ.ಗಳನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿರುವ 16 ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿದೆ. ಉಳಿದ ಹಣವನ್ನು 20 ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ನೀಡಲಾಗುತ್ತಿದೆ. ಆ ಅನುದಾನದಲ್ಲಿ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಒಂದು ರೂಪಾಯಿ ಅನುದಾನವನ್ನು ನೀಡದೆ ತಾರತಮ್ಯ ಎಸಗಲಾಗಿದೆ ಎಂಬ ಆರೋಪ ಕೇಳಿಬಂದಿದೆ.