ಚಾಮರಾಜನಗರ: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಪುತ್ರ ಜಿ.ಎಸ್. ಜಯದೇವ ಸ್ಥಾಪಿಸಿರುವ ನಗರದ ದೀನಬಂಧು ಕನ್ನಡ ಮಾಧ್ಯಮ ಪ್ರೌಢಶಾಲೆ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 96ರಷ್ಟು ಫಲಿತಾಂಶ ಪಡೆದಿದೆ. ಶಾಲೆಯ 24 ವಿದ್ಯಾರ್ಥಿಗಳಲ್ಲಿ 23 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಇವರಲ್ಲಿ ನಾಲ್ವರು ಅತ್ಯುನ್ನತ ಶ್ರೇಣಿಯಲ್ಲಿ, 13 ಮಂದಿ ಪ್ರಥಮ ದರ್ಜೆಯಲ್ಲಿ, 6 ಮಂದಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ನಿಂಗನಗೌಡ ಪಾಟೀಲ 562, ಗೌರಿ 556, ರಾಕೇಶ್ 545 ಹಾಗೂ ಮಮತಾ 541 ಅಂಕಗಳನ್ನು ಪಡೆಯುವ ಮೂಲಕ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ.
ಈ ಶಾಲೆಯಲ್ಲಿ ಎಲ್‌ಕೆಜಿಯಿಂದ 10ನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲೇ ಕಲಿಸಲಾಗುತ್ತಿದೆ. ದಲಿತ, ಹಿಂದುಳಿದ ವರ್ಗಗಳ ಬಡ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ದಾಖಲಿಸಿಕೊಳ್ಳುವುದು, ಅವರಿಗೆ ವಿಶೇಷ ಕಲಿಕಾ ತಂತ್ರಗಳನ್ನು ಅಳವಡಿಸಿ, ಉತ್ತಮ ಫಲಿತಾಂಶ ನೀಡುವುದು ಶಾಲೆಯ ಹೆಗ್ಗಳಿಕೆ. ಈ ಪ್ರೌಢಶಾಲೆಯ ವಾರ್ಷಿಕ ಶುಲ್ಕ 1750 ರೂ. ಎಂಬುದು ವಿಶೇಷ!
ಖಾಸಗಿ ಶಿಕ್ಷಣ ಸಂಸ್ಥೆಯೊಂದು ಕನ್ನಡ ಮಾಧ್ಯಮದಲ್ಲಿ ಶಾಲೆ ನಡೆಸಿ, ಬಡ ಹಿಂದುಳಿದ ವರ್ಗದ ಮಕ್ಕಳನ್ನು ದಾಖಲಿಸಿಕೊಂಡು, ಉತ್ತಮ ಫಲಿತಾಂಶ ನೀಡಿರುವುದು ಹೆಮ್ಮೆಯ ವಿಷಯವಾಗಿದೆ. ಕನ್ನಡ ಮಾಧ್ಯಮ ಶಿಕ್ಷಣವನ್ನು ಪಸರಿಸುವ ಪೊ್ರೀತ್ಸಾಹಿಸುವ ಇಂಥ ಶಿಕ್ಷಣ ಸಂಸ್ಥೆಗಳ ಅಗತ್ಯ ಹೆಚ್ಚಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ವಿನಯ್ ಅಭಿನಂದಿಸಿದ್ದಾರೆ.