ಹೊಸದಿಲ್ಲಿ : ದಿಲ್ಲಿಯಲ್ಲಿ 90 ಶೇ.ಐಎಎಸ್ ಅಧಿಕಾರಿಗಳು ಕೆಲಸ ಮಾಡುವುದಿಲ್ಲ; ಹಾಗಾಗಿ ಅನೇಕ ಅಭಿವೃದ್ಧಿ ಕೆಲಸಗಳು ಸಚಿವಾಲಯದಲ್ಲೇ ಬಾಕಿ ಉಳಿದಿವೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
“ಗುತ್ತಿಗೆ ಕೆಲಸಗಾರರನ್ನು ಖಾಯಂ ಮಾಡುವುದಕ್ಕೆ ಅಧಿಕಾರಶಾಹಿಯ ವಿರೋಧವಿದೆ. ಒಂದೊಮ್ಮೆ ದಿಲ್ಲಿಗೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನ ಸಿಕ್ಕಿದರೆ 24 ತಾಸುಗಳ ಒಳಗೆ ನಾನು ಗುತ್ತಿಗೆ ಕೆಲಸಗಾರರನ್ನು ಖಾಯಂ ಗೊಳಿಸುತ್ತೇನೆ’ ಎಂದು ಕೇಜ್ರಿವಾಲ್ ಹೇಳಿದರು.
ವಿದ್ಯುತ್ ಇಲಾಖೆಯ ಪಿಂಚಣಿದಾರರನ್ನು ಸಮ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಕೇಜ್ರಿವಾಲ್, ಐಎಎಸ್ ಅಧಿಕಾರಿಗಳು ಅಭಿವೃದ್ಧಿ ಯೋಜನೆಗಳ ಕಡತಗಳನ್ನು ವಿನಾಕಾರಣ ಹಿಡಿದಿಟ್ಟುಕೊಂಡು ಸರಕಾರದ ಯೋಜನೆಗಳನ್ನು ಹಳ್ಳ ಹಿಡಿಸುತ್ತಿದ್ದಾರೆ ಎಂದು ದೂರಿದರು.
“ಗುತ್ತಿಗೆ ಕೆಲಸಗಾರರನ್ನು ಖಾಯಂ ಗೊಳಿಸುವ ವಿಷಯವನ್ನು ನಾನು ಪ್ರಸ್ತಾಪಿಸಿದಾಗ ಐಎಎಸ್ ಅಧಿಕಾರಿಗಳೆಲ್ಲ ಅದನ್ನು ವಿರೋದಿಸಿದರು. ಖಾಯಂ ಮಾಡಿದ ಪಕ್ಷದಲ್ಲಿ ಗುತ್ತಿಗೆ ಕೆಲಸಗಾರರು ಮತ್ತೆ ಕೆಲಸವನ್ನೇ ಮಾಡುವುದಿಲ್ಲ ಎಂದವರು ಸಬೂಬು ನೀಡಿದರು. ಹಾಗಿದ್ದರೆ ಐಎಎಸ್ ಅಧಿಕಾರಿಗಳನ್ನು ಕೂಡ ನಾವು ಗುತ್ತಿಗೆಗೆ ಇಟ್ಟುಕೊಳ್ಳಬೇಕಾಗುತ್ತದೆ; ಏಕೆಂದರೆ ಖಾಯಂ ಆಗಿರುವ ಕಾರಣಕ್ಕೆ ಅವರು ಕೂಡ ಕೆಲಸ ಮಾಡುತ್ತಿಲ್ಲ; ಅದರಿಂದಾಗಿ ಸರಕಾರದ ಅಭಿವೃದ್ಧಿ ಯೋಜನೆಗಳೆಲ್ಲ ಬಾಕಿ ಉಳಿದಿವೆ ನಾನು ಹೇಳಿದೆ. ಅದಕ್ಕೆ ಅವರ ಉತ್ತರ ಇರಲಿಲ್ಲ ಎಂದು ಕೇಜ್ರಿವಾಲ್ ಹೇಳಿದರು.
ವಿದ್ಯುತ್ ಇಲಾಖೆಯ ಪಿಂಚಣಿದಾರರಿಗೆ ನಗದು ರಹಿತ ಆರೋಗ್ಯ ಸೇವೆಯನ್ನು ಕಲ್ಪಿಸುವ ಯೋಜನೆಯ ಕಡತಗಳನ್ನು ಕೂಡ ಐಎಎಸ್ ಅಧಿಕಾರಿಗಳು ತಡೆ ಹಿಡಿದಿದ್ದಾರೆ ಎಂದು ಕೇಜ್ರಿವಾಲ್ ವಿಷಾದಿಸಿದರು.