Advertisement

ರೋಜ್‌ ಗಾರ್‌ ಯೋಜನೆ 9 ತಿಂಗಳು ವಿಸ್ತರಣೆ : ನಿರ್ಮಲಾ ಸೀತಾರಾಮನ್‌

03:04 AM Jun 29, 2021 | Team Udayavani |

ಹೊಸದಿಲ್ಲಿ: ಈ ವರ್ಷದ ಮೇ ತಿಂಗಳಿಂದ ನವೆಂಬರ್‌ ವರೆಗೆ ದೇಶದ 80 ಕೋಟಿ ಬಡಜನರಿಗೆ ಪ್ರತೀ ತಿಂಗಳು 5 ಕೆಜಿ ಆಹಾರ ಧಾನ್ಯವನ್ನು ಉಚಿತವಾಗಿ ಒದಗಿಸುವ ಯೋಜನೆಗೆ ಕೇಂದ್ರ ಸರಕಾರ 93,869 ಕೋಟಿ ರೂ.ಗಳನ್ನು ವೆಚ್ಚ ಮಾಡಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ.

Advertisement

ಆರ್ಥಿಕತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸೋಮವಾರ ಹೊಸ ಪ್ಯಾಕೇಜ್‌ ಘೋಷಣೆ ವೇಳೆ ಅವರು ಈ ವಿಚಾರ ತಿಳಿಸಿದ್ದಾರೆ.
ಕಳೆದ ವರ್ಷವೇ ರಾಷ್ಟ್ರೀಯ ಭದ್ರತಾ ಕಾಯ್ದೆಯ ಅನ್ವಯ ಕೇಂದ್ರ ಸರಕಾರ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆಯನ್ನು ಜಾರಿ ಮಾಡಿತ್ತು. 2020ರ ಎಪ್ರಿಲ್‌-ನವೆಂಬರ್‌ ಅವಧಿಯಲ್ಲಿ ಇದು ಚಾಲ್ತಿಯಲ್ಲಿತ್ತು. ಆದರೆ ಈ ವರ್ಷ ಕೊರೊನಾ ಎರಡನೇ ಅಲೆ ಅಪ್ಪಳಿಸಿದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಮೊದಲಿಗೆ ಮೇ -ಜೂನ್‌ ಅವಧಿಗೆ, ಅನಂತರ ನವೆಂಬರ್‌ ವರೆಗೆ ವಿಸ್ತರಿಸಿ ಸರಕಾರ ಆದೇಶ ಹೊರಡಿಸಿತ್ತು. ಕಳೆದ ವಿತ್ತೀಯ ವರ್ಷದಲ್ಲಿ ಸರಕಾರವು ಈ ಯೋಜನೆಗೆ 1,33,972 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ ಎಂದು ಸಚಿವೆ ತಿಳಿಸಿದ್ದಾರೆ.

ರೋಜ್‌ ಗಾರ್‌ ಯೋಜನೆ ವಿಸ್ತರಣೆ: ಉದ್ಯೋಗ ಸೃಷ್ಟಿಯ ಉದ್ದೇಶದಿಂದ ಕಳೆದ ವರ್ಷ ಘೋಷಿಸಿದ್ದ ಆತ್ಮನಿರ್ಭರ ಭಾರತ ರೋಜ್‌ ಗಾರ್‌ ಯೋಜನೆಯನ್ನು ಕೇಂದ್ರ ಸರಕಾರ ಇನ್ನೂ 9 ತಿಂಗಳ ಕಾಲ ವಿಸ್ತರಣೆ ಮಾಡಿದೆ. ಅಂದರೆ, 2022ರ ಮಾ.31ರ ವರೆಗೆ ಈ ಯೋಜನೆ ಚಾಲ್ತಿಯಲ್ಲಿರುತ್ತದೆ. ಪ್ರಸಕ್ತ ವರ್ಷದ ಜೂನ್‌ 18ರ ವರೆಗೆ 79,577 ಸಂಸ್ಥೆಗಳ ಸುಮಾರು 21.42 ಲಕ್ಷ ಮಂದಿ ಈ ಯೋಜನೆಯ ಅನುಕೂಲತೆ ಪಡೆದಿದ್ದಾರೆ ಎಂದು ಸಚಿವೆ ನಿರ್ಮಲಾ ಮಾಹಿತಿ ನೀಡಿದ್ದಾರೆ.

ಸಾಗರೋತ್ತರ ಯೋಜನೆಗಳಿಗೂ ಅನುಕೂಲ: ಮುಂದಿನ 5 ವರ್ಷಗಳ ಕಾಲ ಸಾಗರೋತ್ತರ ಯೋಜನೆಗಳಿಗೆ ವಿಮಾ ಖಾತ್ರಿ ಒದಗಿಸಲು ರಾಷ್ಟ್ರೀಯ ರಫ್ತು ವಿಮಾ ಖಾತೆ (ಎನ್‌ಇಐಎ)ಗೆ ಹೆಚ್ಚುವರಿ 33 ಸಾವಿರ ಕೋಟಿ ರೂ.ಗಳ ನಿಧಿಯನ್ನು ವಿತ್ತ ಸಚಿವಾಲಯ ಘೋಷಿಸಿದೆ.

ಅಪೌಷ್ಟಿಕತೆಯ ವಿರುದ್ಧ ಹೋರಾಟ: ಅಪೌಷ್ಟಿಕತೆಯ ವಿರುದ್ಧದ ಹೋರಾಟ ಮತ್ತು ರೈತರ ಆದಾಯ ದುಪ್ಪಟ್ಟುಗೊಳಿಸುವ ಉದ್ದೇಶದಿಂದ ಪ್ರೊಟೀನ್‌, ಕಬ್ಬಿಣದ ಅಂಶ, ವಿಟಮಿನ್‌-ಎ ಅಂಶಗಳನ್ನು ಒಳಗೊಂಡಿರುವ ಪೌಷ್ಟಿಕಾಂಶ ಯುಕ್ತ ಬಯೋಫೋರ್ಟಿ ಫೈಡ್‌ ಬೆಳೆಗಳ ವಿಧಗಳನ್ನು ಗುರುತಿಸಲಾಗಿದೆ. ಈ ರೀತಿಯ ಅಕ್ಕಿ, ಸೋಯಾಬಿನ್‌, ಮೆಕ್ಕೆ ಜೋಳ, ರಾಗಿ ಮತ್ತಿತರ ಬೆಳೆಗಳನ್ನು ಸದ್ಯದಲ್ಲೇ ಅನಾವರಣಗೊಳಿಸಲಾಗುತ್ತದೆ ಎಂದೂ ಸಚಿವೆ ಹೇಳಿದ್ದಾರೆ.

Advertisement

ವೇತನ ಸಬ್ಸಿಡಿ ವಿಸ್ತರಣೆ
ಹೊಸದಿಲ್ಲಿ: ನೌಕರರ ಭವಿಷ್ಯ ನಿಧಿ (ಇಪಿಎಫ್ಒ) ವತಿಯಿಂದ ಕಡಿಮೆ ವೇತನದಾರರಿಗೆ ನೀಡಲಾಗುವ ವೇತನ ಸಬ್ಸಿಡಿ ಸೌಲಭ್ಯವನ್ನು ಮುಂದಿನ 9 ತಿಂಗಳ ವರೆಗೆ ವಿಸ್ತರಿಸುವಂತೆ ಕೇಂದ್ರ ವಿತ್ತ ಸಚಿವಾಲಯ ಆದೇಶ ಹೊರಡಿಸಿದೆ. ಸೌಲಭ್ಯ ವಿಸ್ತರಣೆಯಿಂದಾಗಿ, ಕಂಪೆನಿಗಳ ಮೇಲೆ ಬೀಳುವ ಆರ್ಥಿಕ ಹೊರೆಯನ್ನು (ಕಾಸ್ಟ್‌ ಟು ಕಂಪೆನಿ) ಕಡಿಮೆಯಾಗಿ, ಕಡಿಮೆ ವೇತನ ಶ್ರೇಣಿಯಲ್ಲಿ ಹೆಚ್ಚು ಮಂದಿಯನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ. ವೇತನ ಸಬ್ಸಿಡಿ ಸೌಲಭ್ಯ ಇದೇ ತಿಂಗಳ 30ಕ್ಕೆ ಮುಕ್ತಾಯವಾಗಬೇಕಿತ್ತು. ಹೊಸ ಆದೇಶದಂತೆ ಅದು, 2022ರ ಮಾ. 31ರ ವರೆಗೆ ಮುಂದುವರಿಯಲಿದೆ. 2020ರ ಅ. 1ರಿಂದ 2022ರ ಮಾ. 31ರ ಅವಧಿಯಲ್ಲಿ ಉದ್ಯೋಗಕ್ಕೆ ಸೇರ್ಪಡೆಯಾಗುವ ಹಾಗೂ ಮಾಸಿಕ ಗರಿಷ್ಠ 15,000 ರೂ. ವೇತನ ಪಡೆಯುವ ಉದ್ಯೋಗಿಗಳಿಗೆ ಈ ಸೌಲಭ್ಯ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next