ಯಡ್ರಾಮಿ : ಕೂಲಿ ಕೆಲಸಕ್ಕೆ ಹೋದ ಮಹಿಳೆಯ 9ತಿಂಗಳ ಹಸುಗೂಸು ನಾಪತ್ತೆಯಾದ ಪ್ರಕರಣ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದಲ್ಲಿ ನಡೆದಿದೆ.
ಎಂದಿನಂತೆ ಮಂಗಳವಾರ ಬೆಳಗ್ಗೆ ಕೂಲಿ ಕೆಲಸಕ್ಕೆ ಹೋದ ಗ್ರಾಮದ ಶಾಂತಮ್ಮ ಗಂಡ ಗೌಡಪ್ಪ ವಕ್ರಾಣಿ ಎಂಬ ಮಹಿಳೆ ತನ್ನ 9 ತಿಂಗಳ ಮಗ ಬೀರಪ್ಪನನ್ನು ಮರಕ್ಕೆ ಕಟ್ಟಿದ ಜೋಳಿಗೆಯಲ್ಲಿ ಮಲಗಿಸಿ, ಹೊಲದಲ್ಲಿ ಕಳೆ ಕೀಳುತ್ತಿದ್ದಳು. ಸ್ವಲ್ಪ ಸಮಯದ ನಂತರ ನೀರು ಕುಡಿಯಲು ಗಿಡದ ಹತ್ತಿರ ಬಂದು ಜೋಳಿಗೆ ಕಡೆ ಗಮನ ಹರಿಸಿದಾಗ ಜೋಳಿಗೆಯಲ್ಲಿ ಮಗು ಕಾಣದಾದಾಗ ತಾಯಿ ಶಾಂತಮ್ಮ ಗಾಬರಿಯಾಗಿ ಕಿರುಚಿದ್ದಾಳೆ.
ಶಾಂತಮ್ಮಳ ಕಿರುಚಾಟ ಕೇಳಿದ ಹೊಲದಲ್ಲಿನ ಉಳಿದ ಮಹಿಳಾ ಕೆಲಸಗಾರರು ಗಾಬರಿಯಿಂದ ಮರದ ಹತ್ತಿರ ಬಂದಾಗ ಕೂಸು ನಾಪತ್ತೆಯಾದ ವಿಷಯ ತಿಳಿದು, ಹೊಲದ ಸುತ್ತಲೆಲ್ಲ ಹುಡುಕಾಡಿದ್ದಾರೆ. ಆದರೆ ಮಗು ಬೀರಪ್ಪ (9) ಎಲ್ಲಿಯೂ ಕಾಣಸಿಕ್ಕಿಲ್ಲ. ಈ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಗ್ರಾಮಸ್ಥರು ಸುತ್ತಲಿನ ಜಮೀನುಗಳಲ್ಲೆಲ್ಲ ಹುಡುಕಾಟ ನಡೆಸಿದ್ದಾರೆ.
ಮಕ್ಕಳ ಕಳ್ಳರು ಮಗು ಕದ್ದಿದ್ದಾರೆಂಬ ಭಯ ಗ್ರಾಮಸ್ಥರಲ್ಲಿ ಕಾಡಲಾರಂಭಿಸಿದೆ. ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ರಾತ್ರೋರಾತ್ರಿ ಗಡಿಯಾರ ಕಂಬ ತೆರವುಗೊಳಿಸಿದ ಜಿಲ್ಲಾಡಳಿತ : ಪಾಲಿಕೆ ಕಾಂಗ್ರೆಸ್ ಸದಸ್ಯರ ವಿರೋಧ