Advertisement

ಐಸಿಸ್ ಜೊತೆ ಸಂಬಂಧ ಶಂಕೆ; ಮಹಾರಾಷ್ಟ್ರದಲ್ಲಿ 9 ಯುವಕರ ಬಂಧನ

07:52 AM Jan 23, 2019 | Sharanya Alva |

ಮುಂಬೈ/ಥಾಣೆ: ಗಣರಾಜ್ಯೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಭಯೋತ್ಪಾದನಾ ನಿಗ್ರಹ ದಳ ಬುಧವಾರ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ಮಹಾರಾಷ್ಟ್ರದ ಮುಂಬ್ರಾ, ಕೌಸಾ, ಥಾಣೆ ಹಾಗೂ ಔರಂಗಬಾದ್ ನಲ್ಲಿ ಕಾರ್ಯಾಚರಣೆ ನಡೆಸಿ ಒಬ್ಬ ಅಪ್ರಾಪ್ತ ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇವರೆಲ್ಲರಿಗೂ ಐಸಿಸ್ ಉಗ್ರಗಾಮಿ ಸಂಘಟನೆ ಜೊತೆ ಸಂಪರ್ಕ ಇದ್ದಿರುವುದಾಗಿ ಎಟಿಎಸ್(ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ) ಆರೋಪಿಸಿದೆ.

Advertisement

ಮುಂಬರುವ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಸ್ಲೀಪರ್ ಸೆಲ್ಸ್ ಬಗ್ಗೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ತನಿಖೆ ನಡೆಸುತ್ತಿತ್ತು. ಈ ಕುರಿತು ಲಭ್ಯವಾದ ಖಚಿತ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಈ ಒಂಬತ್ತು ಮಂದಿ ಮೇಲೆ ತಂಡ ನಿಗಾ ಇರಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾವು ಒಟ್ಟು ಒಂಬತ್ತು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದೇವೆ ಎಂದು ಎಟಿಎಸ್ ಹೆಚ್ಚುವರಿ ಜನರಲ್ ಪೊಲೀಸ್ ಅತುಲ್ ಚಂದ್ರ ಕುಲಕರ್ಣಿ ಮಾಧ್ಯಮವೊಂದಕ್ಕೆ ವಿವರಿಸಿದ್ದಾರೆ. ಬಂಧನಕ್ಕೊಳಪಟ್ಟ ಯುವಕರ ವಿರುದ್ಧ ನಮ್ಮ ಬಳಿ ಬಲವಾದ ಸಾಕ್ಷ್ಯಾಧಾರಗಳಿವೆ. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸುತ್ತಿದ್ದೇವೆ ಎಂದು ವರದಿ ಹೇಳಿದೆ.

ಮುಂಬ್ರಾ ಸಮೀಪದ ಕೌಸಾದ ಅಲ್ಮಾಸ್ ಕಾಲೋನಿಯ ಮನೆಯಲ್ಲಿದ್ದ ನಾಲ್ವರು ಯುವಕರನ್ನು (18ರಿಂದ 24 ವರ್ಷದೊಳಗಿನ) ವಶಕ್ಕೆ ತೆಗೆದುಕೊಂಡಿದ್ದರೆ, ಇದರಲ್ಲಿ ಮೂವರು ಹತ್ತಿರದ ಸಂಬಂಧಿಗಳು. ಇಬ್ಬರು ಇಂಜಿನಿಯರಿಂಗ್ ಹಿನ್ನೆಲೆ ಹೊಂದಿದ್ದರೆ, ಒಬ್ಬ ಬಿಕಾಂ ವ್ಯಾಸಂಗ ಮಾಡಿರುವುದಾಗಿ ವರದಿ ವಿವರಿಸಿದೆ.

Advertisement

ಔರಂಗಬಾದ್ ನಲ್ಲಿ ಬೆಳಗ್ಗಿನ ಜಾವ 3ಗಂಟೆ ಹೊತ್ತಿಗೆ ಎಟಿಎಸ್ ತಂಡ ನಗರದ ವಿವಿಧೆಡೆ ಇದ್ದ ಐವರನ್ನು ಸುತ್ತುವರಿದಿದ್ದರು. ಒಂದು ತಂಡ ಮನೆಯ ಮುಂಭಾಗದಲ್ಲಿದ್ದ ಗೇಟ್ ಅನ್ನು ಮುರಿದು ಒಳನುಗ್ಗಿ 23 ವರ್ಷದ ಶಂಕಿತ ಯುವಕನನ್ನು ವಶಕ್ಕೆ ತೆಗೆದುಕೊಂಡಿತ್ತು. ಈತನ ಬಳಿ ಇದ್ದ ಲ್ಯಾಪ್ ಟಾಪ್, ಹಾರ್ಡ್ ಡಿಸ್ಕ್ ಮತ್ತು ಕೆಲವು ಪುಸ್ತಕಗಳನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಅದೇ ಸಮಯದಲ್ಲಿ ಮತ್ತೊಂದು ಕಡೆ ದಾಳಿ ನಡೆಸಿದ್ದ ತಂಡ 30 ವರ್ಷದ , 26 ವರ್ಷದ ಹಾಗೂ 17 ವರ್ಷದ ಅಪ್ರಾಪ್ತ ಸೇರಿದಂತೆ ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇವರೆಲ್ಲಾರನ್ನು ಕ್ರಿಮಿನಲ್ ಸಂಚು ನಡೆಸುತ್ತಿದ್ದ ಶಂಕಿತ ಭಯೋತ್ಪಾದನೆ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ಎಟಿಎಸ್ ಅಧಿಕಾರಿಗಳು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next