ಬೆಂಗಳೂರು: ಪ್ರಸಕ್ತ ವರ್ಷದಲ್ಲಿ 4 ಬಾರಿ ಪ್ರಗತಿ ಪರಿಶೀಲನೆ ನಡೆಸಲಾಗಿದ್ದು ಕೆಲವೊಂದು ಇಲಾಖೆಗಳು ಸರಿಯಾದ ರೀತಿಯಲ್ಲಿ ಮಹಿಳಾ ಬಜೆಟ್‌ನ ಅನುದಾನ ಖರ್ಚು ಮಾಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ 29 ಇಲಾಖೆಗಳಲ್ಲಿ “ಮಹಿಳಾ ಉದ್ದೇಶಿತ ಬಜೆಟ್’ಕಾರ್ಯ ಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು. ಪ್ರಸಕ್ತ ವರ್ಷದಲ್ಲಿ 4 ಬಾರಿ ಪ್ರಗತಿ ಪರಿಶೀಲನೆ ನಡೆಸಲಾಗಿದ್ದು ಕೆಲವೊಂದು ಇಲಾಖೆಗಳು ಸರಿಯಾದ ರೀತಿಯಲ್ಲಿ ಮಹಿಳಾಬಜೆಟ್‌ನ ಅನುದಾನ ಖರ್ಚು ಮಾಡಿದ್ದಾರೆ.
ಆದರೆ, ಗೃಹ ಇಲಾಖೆ, ಆಹಾರ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ, ಜಲಸಂಪನ್ಮೂಲ ಇಲಾಖೆ, ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆ ಸೇರಿದಂತೆ 9 ಇಲಾಖೆಗಳು ಮಹಿಳಾ ಬಜೆಟ್‌ನ ಖರ್ಚು-ವೆಚ್ಚಗಳ ಮಾಹಿತಿ ಕೊಟ್ಟಿಲ್ಲ. ಈ ಸಂಬಂಧ ಮುಖ್ಯ ಕಾರ್ಯದರ್ಶಿ ಹಾಗೂ ಸಂಬಂಧಪಟ್ಟ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
14 ಲಕ್ಷ ಮಹಿಳೆಯರು ಪಹಣಿ ಹೊಂದಿದ್ದಾರೆ. ಪೋಡಿ ಮುಕ್ತ ಗ್ರಾಮ ಯೋಜನೆಯಡಿ 2015-16ನೇ ಸಾಲಿನಲ್ಲಿ 51,306 ಹಾಗೂ 2016-17ರಲ್ಲಿ 77,438 ಸೇರಿ ಒಟ್ಟು 1.28 ಲಕ್ಷ ಮಹಿಳೆಯರು ಪಹಣಿಗಳನ್ನು ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಒಟ್ಟು 28 ಲಕ್ಷ ಪೋಡಿ ಅರ್ಜಿಗಳಲ್ಲಿ ಇಲ್ಲಿವರೆಗೆ 6 ಲಕ್ಷ ಅರ್ಜಿಗಳಿಗೆ ಪೋಡಿ ಮಾಡಲಾಗಿದೆ ಎಂದರು.
ಆ್ಯಸಿಡ್ ದಾಳಿಗೆ ತುತ್ತಾದ ಸಂತ್ರಸ್ಥ ಹೆಣ್ಣು ಮಕ್ಕಳು ಮಾಸಾಶನ ಪಡೆದುಕೊಳ್ಳಲು ಮುಂದೆ ಬರುತ್ತಿಲ್ಲ. ರಾಜ್ಯದಲ್ಲಿ ಕಳೆದ 25 ವರ್ಷಗಳ ಅವಧಿಯಲ್ಲಿ ಆ್ಯಸಿಡ್ ದಾಳಿಗೆ ತುತ್ತಾದ 129 ಸಂತ್ರಸ್ಥರ ಪಟ್ಟಿ ಮಹಿಳಾ ಆಯೋಗದಲ್ಲಿದೆ. ಅದರಲ್ಲಿ ಕೇವಲ 12 ಮಂದಿ ಮಾತ್ರ ಮಾಸಿಕ 3 ಸಾವಿರ ರೂ. ಮಾಸಾಶನ ಪಡೆದುಕೊಳ್ಳುತ್ತಿದ್ದಾರೆ. ಇನ್ನುಳಿದವರಿಗೆ ಪತ್ರ ಬರೆದು ಮಾಸಾಶನ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ. ಆದರೆ, ಅನೇಕರು ಮುಂದೆ ಬರುತ್ತಿಲ್ಲ.
-ಉಮಾಶ್ರೀ, ಸಚಿವೆ