ಹೊಸದಿಲ್ಲಿ: ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಇತಿಹಾಸದಲ್ಲೇ ಅತ್ಯಂತ ವೇಗವಾಗಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಯಾಗಿ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ ಉದ್ಯೋಗ ದತ್ತಾಂಶವನ್ನು ಪ್ರಕಟಿಸಿದೆ. ಜನವರಿಯಲ್ಲಿ ಉದ್ಯೋಗ ಸೃಷ್ಟಿ 8.96 ಲಕ್ಷ ತಲುಪಿದ್ದು, ಇದು ಕಳೆದ 17 ತಿಂಗಳಲ್ಲೇ ಅತ್ಯಧಿಕವಾಗಿದೆ ಎಂದಿದೆ. ಅಷ್ಟೇ ಅಲ್ಲ, ಕಳೆದ 17 ತಿಂಗಳಲ್ಲಿ 76.48 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. 2017 ಸಪ್ಟೆಂಬರ್‌ನಿಂದ 2018 ಎಪ್ರಿಲ್‌ವರೆಗಿನ ನೇಮಕಾತಿ ವಿವರವನ್ನು ಇಪಿಎಫ್ಒ ಪ್ರಕಟಿಸಿದೆ. ಕಳೆದ ವರ್ಷದ ಜನವರಿಯಲ್ಲಿ 3.87 ಲಕ್ಷ ಉದ್ಯೋಗ ಸೃಷ್ಟಿಗೆ ಹೋಲಿಕೆ ಮಾಡಿದರೆ, ಈ ವರ್ಷದ ಜನವರಿಯಲ್ಲಿ ಶೇ. 131 ಹೆಚ್ಚಳವಾಗಿದೆ. 2017 ಸಪ್ಟೆಂಬರ್‌ನಲ್ಲಿ ನಿವ್ವಳ 2.75 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಆದರೆ 2017 ಸಪ್ಟೆಂಬರ್‌ನಿಂದ 2018 ಡಿಸೆಂಬರ್‌ವರೆಗೆ ಶೇ. 6.6 ರಷ್ಟು ಉದ್ಯೋಗ ನೇಮಕಾತಿ ಇಳಿಕೆಯಾಗಿದೆ. ಅಷ್ಟೇ ಅಲ್ಲ, 2018 ಮಾರ್ಚ್‌ನಲ್ಲಿ 29 ಸಾವಿರ ಉದ್ಯೋಗಿಗಳು ಇಪಿಎಫ್ದಿಂದ ಹೊರಹೋಗಿದ್ದಾರೆ. ಆದರೆ 2017ರ ಮಾರ್ಚ್‌ನಲ್ಲಿ ಈ ಪ್ರಮಾಣ ಕೇವಲ 5498 ಆಗಿತ್ತು. ವಿತ್ತ ವರ್ಷ ಮುಕ್ತಾಯವಾದ ಕಾರಣಕ್ಕೆ ಹಲವು ಖಾತೆಗಳನ್ನು ಮುಕ್ತಾಯಗೊಳಿಸಲಾಗಿದೆ.