ಹೊಸದಿಲ್ಲಿ: ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಗೆ ಅಗತ್ಯವಿರುವ ಸರಿಸುಮಾರು ಶೇ.89ರಷ್ಟು ಭೂಮಿಯನ್ನು ಕೇಂದ್ರ ಸ್ವಾಧೀನಪಡಿಸಿಕೊಂಡಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಗೆ ಬುಧವಾರ (ಮಾ.23) ತಿಳಿಸಿದ್ದಾರೆ.
ಲೋಕಸಭೆ ಕಲಾಪದಲ್ಲಿ ಮಾತನಾಡಿದ ಅವರು ಮುಂಬೈ-ಅಹಮದಾಬಾದ್ ಹೈಸ್ಪೀಡ್ ಬುಲೆಟ್ ರೈಲು ಯೋಜನೆ ಯು ವಿಶೇಷವಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ಭೂಸ್ವಾಧೀನದ ಸಮಸ್ಯೆಯಿಂದ ವಿಳಂಬವಾಗಿದೆ ಇದರ ಪರಿಣಾಮ ಒಪ್ಪಂದಗಳ ಅಂತಿಮಗೊಳಿಸುವಿಕೆ ಮತ್ತು ಮಹಾಮಾರಿ ಕೋವಿಡ್ -19ನ ಪ್ರತಿಕೂಲ ಪರಿಣಾಮದಿಂದ ಈ ಯೋಜನೆ ವಿಳಂಬವಾಗುತ್ತಿದೆ ಎಂದು ಸಚಿವರು ತಮ್ಮ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಎಂಎಚ್‌ಎಸ್‌ಆರ್ ಯೋಜನೆಗೆ ಅಗತ್ಯವಿರುವ ಒಟ್ಟು 1,396 ಹೆಕ್ಟೇರ್ ಭೂಮಿಯಲ್ಲಿ ಸುಮಾರು ಶೇ. 89ರಷ್ಟು ಅಂದಾಜು 1,248 ಹೆಕ್ಟೇರ್ ಭೂಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಅಗತ್ಯವಿರುವ ಒಟ್ಟು 297.81 ಹೆಕ್ಟೇರ್ ಗಳಲ್ಲಿ ಶೇ.68.65 ರಷ್ಟು ಭೂಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದರು.
ಮಹಾರಾಷ್ಟ್ರದ ಪಾಲ್ಘಡ್ ಜಿಲ್ಲೆಯ 5 ಗ್ರಾಮಗಳು ಗ್ರಾಮಸಭೆಗಳಲ್ಲಿ ಎಂಎಚ್‌ಎಸ್‌ಆರ್ ಯೋಜನೆಗಾಗಿ ಭೂಸ್ವಾಧೀನವನ್ನು ವಿರೋಧಿಸಿ ಪ್ರಸ್ತಾವನೆ ಅಂಗೀಕರಿಸಿವೆ ಎಂದರು.
ಗುಜರಾತ್‌ನಲ್ಲಿ ಯೋಜನೆಗೆ ಅಗತ್ಯವಿರುವ 954.28 ಹೆಕ್ಟೇರ್ ಗಳಲ್ಲಿ ಶೇ.98.76 ರಷ್ಟು ಭೂಸ್ವಾಧೀನಪಡಿಸಲಾಗಿದೆ ಎಂದು ಸಚಿವರು ಹೇಳಿದರು.
ದಾದ್ರಾ ಮತ್ತು ನಗರ ಹವೇಲಿಯಲ್ಲಿ ಯೋಜನೆಗೆ ಅಗತ್ಯವಿರುವ 7.9 ಹೆಕ್ಟೇರ್ ಭೂಮಿಯಲ್ಲಿ ಶೇ. 100 ರಷ್ಟು ಕೇಂದ್ರ ಭೂಸ್ವಾಧೀನಪಡಿಸಿಕೊಂಡಿದೆ ಎಂದು ಅವರು ತಿಳಿಸಿದರು.