ಮಹಾನಗರ: ನಗರ ವ್ಯಾಪ್ತಿ ಹಸುರೀಕರಣಕ್ಕೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗಿದ್ದು, ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ 46 ಪಾರ್ಕ್ ಮತ್ತು ಉತ್ತರದಲ್ಲಿ 43 ಪಾರ್ಕ್ ಅಭಿವೃದ್ಧಿಗೊಳಿಸಿಸಲು ಯೋಜನೆ ರೂಪಿಸಲಾಗುತ್ತಿದೆ.
ನಗರದ ಕೆಲವೊಂದು ವಾರ್ಡ್ ವ್ಯಾಪ್ತಿಗಳಲ್ಲಿ ಈಗಾಗಲೇ ಪಾರ್ಕ್‌ಗಳಿಲ್ಲ. ಇನ್ನು, ಈಗಿರುವ ಕೆಲವೊಂದು ಸಣ್ಣ ಪಾರ್ಕ್‌ಗಳು ಅಭಿವೃದ್ಧಿ ಕಾಣದೆ ಪಾಳು ಬಿದ್ದಿವೆ. ಈ ರೀತಿಯ ಪಾರ್ಕ್ ಗಳ ಅಭಿವೃದ್ಧಿ, ನಿರ್ವಹಣೆಗೂ ಆದ್ಯತೆ ನೀಡಲಾಗುತ್ತದೆ. ಮೊದಲನೇ ಹಂತದಲ್ಲಿ ಮಂಗಳೂರು ದಕ್ಷಿಣದಲ್ಲಿ 15 ಪಾರ್ಕ್, ಮಂಗಳೂರು ಉತ್ತರದಲ್ಲಿ 13 ಸಣ್ಣ ಪಾರ್ಕ್ ಅಭಿವೃದ್ಧಿಗೆ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ. ಮುಂಬರುವ ದಿನಗಳಲ್ಲಿ ಈ ಪಾರ್ಕ್‌ಗಳ ನಿರ್ವಹಣೆಯನ್ನು ಪಾಲಿಕೆಗೆ ವಹಿಸಲು ಚಿಂತನೆ ನಡೆಯುತ್ತಿದೆ.
ನಗರದ ಕೆಲವು ಕಡೆಗಳಲ್ಲಿ ಈಗಾಗಲೇ ಮಿನಿ ಪಾರ್ಕ್ ಇದೆ. ಬಿಜೈಯ ವಿವೇಕಾನಂದ ಮಿನಿ ಪಾರ್ಕ್, ಕರಂಗಲ್ಪಾಡಿ ಆರೈಸ್ ಆವೇಕ್ ಮಿನಿ ಪಾರ್ಕ್ ಪ್ರಮುಖವಾದುದು. ಇಲ್ಲಿ ಪುಟಾಣಿಗಳಿಗೆ ಆಟವಾಡಲು ಒಂದಷ್ಟು ಜಾಗ ಮೀಸಲಿರಿಸಲಾಗಿದೆ. ಜತೆಗೆ ಹಿರಿಯು ನಾಗರಿಕರು ಕುಳಿತು ಆರಾಮ ಪಡೆಯಲು ವ್ಯವಸ್ಥೆ ರೂಪಿಸಲಾಗಿದೆ. ಇಂತಹ ಪ್ರಯತ್ನಗಳು ನಗರದ ಇತರ ವಾರ್ಡ್‌ಗಳಲ್ಲೂ ನಡೆದರೆ ಸ್ಥಳೀಯ ವಾಗಿ ನಿವಾಸಿಗಳಿಗೆ ಮಿನಿ ಪಾರ್ಕ್ ಉಪಯೋಗ ಲಭಿಸುತ್ತದೆ. ಆ ಹಿನ್ನೆಲೆಯಲ್ಲಿ ಮುಡಾ ಇದೀಗ ಯೋಜನೆ ರೂಪಿಸುತ್ತಿದೆ. ನಗರದಲ್ಲಿ ಸದ್ಯ 60 ವಾರ್ಡ್ ಗಳಿಗೆ ಪ್ರಸ್ತುತ ಇರುವ ಪ್ರಧಾನ ಉದ್ಯಾನವೆಂದರೆ ಕದ್ರಿಪಾರ್ಕ್ ಮಾತ್ರ. ಇಲ್ಲಿ ಸದ್ಯ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ. ಪುರಭವನದ ಮುಂಭಾಗದ ಗಾಂಧಿ ಪಾರ್ಕ್ ಬಳಿ ಸ್ಮಾರ್ಟ್‌ಸಿಟಿ ಕಾಮಗಾರಿ ನಡೆಯುತ್ತಿದ್ದು, ಪಾರ್ಕ್ ನ ಮೂಲ ಮರೆಯಾಗಿದೆ. ಬಾವುಟ ಗುಡ್ಡೆಯ ಟಾಗೋರ್ ಪಾರ್ಕ್‌ನಲ್ಲಿ ನಿರ್ವಹಣೆ ಕೊರತೆ ಇದೆ. ಮಲ್ಲಿಕಟ್ಟೆಯ ಗ್ರಂಥಾಲಯದ ಮುಂಭಾಗದಲ್ಲಿದ್ದ ಪಾರ್ಕ್ ಪುನಃ ನಿರ್ಮಾಣಕ್ಕೆ ಕೆಡವಿ ವರ್ಷಗಳಾದರೂ ಇನ್ನೂ ಅಭಿವೃದ್ಧಿಗೆ ವೇಗ ದೊರಕಿಲ್ಲ. ಹೀಗಿರುವಾಗ ಮಂಗಳೂರಿನ ಜನತೆಗೆ ವಾಯು ವಿಹಾರಕ್ಕೂ ಉದ್ಯಾನವನವಿಲ್ಲ. ವಾರ್ಡ್ ಮಟ್ಟದಲ್ಲಿ ಮಿನಿ ಪಾರ್ಕ್ ನಿರ್ಮಿಸುವುದರಿಂದ ಹಿರಿಯ ನಾಗರಿಕರಿಗೆ ವಾಯುವಿಹಾರಕ್ಕೆ ಅನುಕೂಲವಾಗಲಿದೆ.
ಭೂಮಿ ಖರೀದಿಸಿ ಪಾರ್ಕ್ ಅಭಿವೃದ್ಧಿ
ಮಂಗಳೂರಿನ ಜನತೆಗೆ ವಾಯುವಿಹಾರ, ಆಟೋಟ ಸಹಿತ ಉಪಯೋಗಿಸುವ ನಿಟ್ಟಿನಲ್ಲಿ ಮುಡಾ ವ್ಯಾಪ್ತಿಯ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ 7 ಪಾರ್ಕ್‌ಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. ಮಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 3 ಪಾರ್ಕ್, ಮಂಗಳೂರು ಉತ್ತರದಲ್ಲಿ 2 ಪಾರ್ಕ್, ಮಂಗಳೂರು ಕ್ಷೇತ್ರ ಮತ್ತು ಮೂಲ್ಕಿ ಕ್ಷೇತ್ರದಲ್ಲಿ ತಲಾ 1 ಪಾರ್ಕ್ ನಿರ್ಮಾಣಕ್ಕೆ ಮುಡಾ ಮುಂದೆ ಬಂದಿದೆ. ಇಲ್ಲಿ ಹೊಸತಾಗಿ ಭೂಮಿ ಖರೀದಿ ಮಾಡಿ ದೊಡ್ಡ ಪಾರ್ಕ್ ಆಗಿ ರೂಪಿಸುವುದು ಮುಡಾದ ಕನಸು. ಅದರಂತೆ ಕೆಲವೇ ದಿನಗಳಲ್ಲಿ ಈ ಯೋಜನೆಯೂ ಕಾರ್ಯಗತಗೊಳ್ಳಲಿದೆ. ಈಗಾಗಲೇ ಜಾಗ ಗುರುತು ಕಾರ್ಯ ನಡೆಯುತ್ತಿದೆ.
ಹಸುರೀಕರಣಕ್ಕೆ ಆದ್ಯತೆ
ಮುಡಾ ವ್ಯಾಪ್ತಿಯಲ್ಲಿ ಹಸುರೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕ್ರಿಯಾಯೋಜನೆಗಳನ್ನು ರೂಪಿಸಲಾಗಿದೆ. ನಗರೀಕರಣದ ಮಧ್ಯೆ ಹಸುರು ಮರೆಯಾಗಿದ್ದು, ಎರಡು ವಿಧಾನಸಭೆ ಕ್ಷೇತ್ರ ವ್ಯಾಪ್ತಿ 89 ಮಿನಿ ಪಾರ್ಕ್ ರೂಪಿಸಲಾಗುತ್ತಿದೆ. ಇದರಲ್ಲಿ ಮಿಯಾವಾಕಿ ಪಾರ್ಕ್‌ಗೂ ಆದ್ಯತೆ ನೀಡುತ್ತೇವೆ. ಇನ್ನು, ಹೊಸದಾಗಿ 5 ದೊಡ್ಡ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. -ರವಿಶಂಕರ ಮಿಜಾರ್, ಮುಡಾ ಅಧ್ಯಕ್ಷ
– ನವೀನ್ ಭಟ್ ಇಳಂತಿಲ