ಬೆಂಗಳೂರು: ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹಾಗೂ ಉದ್ಯಮಿದಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಒಟ್ಟು 2,750.55 ಕೋ. ರೂ. ಮೊತ್ತದ 53 ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇದರಿಂದ ರಾಜ್ಯದಲ್ಲಿ ಒಟ್ಟು 8,619 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.
ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಶನಿವಾರ ಸಚಿವರ ನೇತೃತ್ವದಲ್ಲಿ ಜರಗಿದ 134ನೇ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನೆ ಸಮಿತಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ 50 ಕೋಟಿ ರೂ. ಗೂ ಹೆಚ್ಚು ಬಂಡವಾಳ ಹೂಡಿಕೆಯ ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇವುಗಳಿಂದ ರೂ. 1,670.69 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, ಸುಮಾರು 4000 ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ ಎಂದು ಹೇಳಿದರು.
ಜತೆಗೆ 15 ಕೋಟಿ ರೂ. ಯಿಂದ 50 ಕೋಟಿ ರೂ. ಒಳಗಿನ ಬಂಡವಾಳ ಹೂಡಿಕೆಯ 41 ಹೊಸ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಿಂದ 1,062.01 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, ಅಂದಾಜು 4,311 ಮಂದಿಗೆ ಉದ್ಯೋಗಗಳು ಸೃಜನೆಯಾಗಲಿವೆ. ಹೆಚ್ಚುವರಿ ಬಂಡವಾಳ ಹೂಡಿಕೆಯ 3 ಯೋಜನೆಗೆ ಅನುಮೋದನೆ ನೀಡಿದ್ದು, ಇದರಿಂದ 17.85 ಕೋ. ರೂ. ಬಂಡವಾಳ ಹೂಡಿಕೆಯಾಗಲಿದೆ. ಈ ರೀತಿ ಒಟ್ಟು 53 ಯೋಜನೆಗಳಿಂದ ರೂ. 2,750.55 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, ಇವುಗಳಿಂದ 8,619 ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ ಎಂದು ಸಚಿವರು ವಿವರಿಸಿದರು.