Advertisement

84 ಕೆರೆಗಳ ಪುನರುಜ್ಜೀವನ: ಡಾ|ಹೆಗ್ಗಡೆ

04:45 PM Jun 10, 2017 | Team Udayavani |

ಧಾರವಾಡ: 2016-17ನೇ ಸಾಲಿನಲ್ಲಿ 10 ಕೋಟಿ ರೂ. ಅನುದಾನದಲ್ಲಿ 84 ಕೆರೆಗಳನ್ನು ಪುನರುಜ್ಜೀವನಗೊಳಿಸಲಾಗಿದ್ದು, ಪ್ರಸಕ್ತ ವರ್ಷದಲ್ಲಿ 126 ಕೆರೆಗಳ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಹೇಳಿದರು. 

Advertisement

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದೇವರಹುಬ್ಬಳ್ಳಿ ಕೆರೆ ಅಭಿವೃದ್ಧಿ ಸಮಿತಿ ಹಾಗೂ ಗ್ರಾಪಂ ಸಹಭಾಗಿತ್ವದಲ್ಲಿ ನಮ್ಮ ಊರು ನಮ್ಮ ಕೆರೆ ಯೋಜನೆಯಡಿ ಪುನಶ್ಚೇತನಗೊಳಿಸಿದ ತಾಲೂಕಿನ ದೇವರಹುಬ್ಬಳ್ಳಿ ಕೆರೆ ಹಸ್ತಾಂತರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಧಾರವಾಡ ಜಿಲ್ಲೆಯಲ್ಲಿ 9 ಕೆರೆಗಳ ದುರಸ್ತಿ ನಡೆಸಿದೆ. ಮುಂಬರುವ ವರ್ಷದಲ್ಲಿ ಇನ್ನೂ 5 ಕೆ‌ರೆಗಳನ್ನು ದುರಸ್ತಿಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು. ಸಾಂಪ್ರದಾಯಿಕವಾಗಿ ಬಂದಿರುವ ಕೆರೆಗಳನ್ನು ಉಳಿಸಿ-ಬೆಳೆಸದ ಕಾರಣದಿಂದಲೇ ನೀರಿನ ಉದ್ಭವಿಸಲು ಕಾರಣವಾಗಿದೆ.

ನೀರನ್ನು ಸುಖಾಸುಮ್ಮನೇ ಪೋಲು ಮಾಡುತ್ತಿದ್ದೇವೆ ಹೊರತು ಜಲಜೀವ ರಕ್ಷಣೆಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಹೀಗಾಗಿ ಇಂದು ನಿರ್ಮಿಸಿರುವ ಸುಂದರ ಕೆರೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಗ್ರಾಮಸ್ಥರದ್ದಾಗಿದೆ ಎಂದರು. ಗ್ರಾಮಸ್ಥರು ತಮ್ಮ ಕೆರೆಯನ್ನು ಉಳಿಸಿಕೊಂಡಾಗ ಮಾತ್ರ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತದೆ.

ಈ ನಿಟ್ಟಿನಲ್ಲಿ 3.30 ಎಕರೆ ವಿಸ್ತೀರ್ಣವುಳ್ಳ ದೇವರಹುಬ್ಬಳ್ಳಿಯ ಕುಡಿಯುವ ನೀರಿನ ಕೆರೆ ಪುರುಜ್ಜೀವನಕ್ಕೆ ಗ್ರಾಮಸ್ಥರು 13.60 ಲಕ್ಷ ರೂ. ನೀಡಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ 11  ಲಕ್ಷ ರೂ. ಅನುದಾನದಲ್ಲಿ ಮೂರು ತಿಂಗಳ ಕಾಲ ಕಾಮಗಾರಿ ನಡೆಸಲಾಗಿದೆ ಎಂದರು. 

Advertisement

ದೇವರಹುಬ್ಬಳ್ಳಿ ಸಿದ್ಧಾರೂಢ ಮಠದ ಸಿದ್ಧ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಮನುಷ್ಯನಲ್ಲಿ ಇಚ್ಛಾಶಕ್ತಿ, ಜ್ಞಾನಶಕ್ತಿ ಹಾಗೂ ಕ್ರಿಯಾ ಶಕ್ತಿ ಎಂಬ ಮೂರು ಶಕ್ತಿಗಳಿವೆ. ಇವುಗಳನ್ನು ಸರ್ಕಾರ ಹಾಗೂ ಜನಪ್ರತಿನಿಧಿಗಳು ಲೋಕ ಕಲ್ಯಾಣಕ್ಕಾಗಿ ಬಳಸಿಕೊಂಡಲ್ಲಿ ಸಮಾಜದಲ್ಲಿ ಸಾಕಷ್ಟು ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ ಎಂದರು. 

ಇದಕ್ಕೂ ಪೂರ್ವದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಸಿದ್ಧ ಶಿವಯೋಗಿ ಸ್ವಾಮೀಜಿ ಅವರು ಕುಂಭ ಮೇಳದೊಂದಿಗೆ ಕೆರೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಬೀಜದುಂಡೆ ತಯಾರಿಕೆ  ಪ್ರಾತ್ಯಕ್ಷಿಕೆ ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಸಾಂಕೇತಿಕವಾಗಿ ಬೀಜದುಂಡೆ ವಿತರಿಸಲಾಯಿತು. 

ಗ್ರಾಪಂ ಅಧ್ಯಕ್ಷೆ ಮಂಜುಳಾ ಕೋಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಎನ್‌. ಜಯಶಂಕರ್‌ ಶರ್ಮಾ, ಜಿಪಂ ಸದಸ್ಯ ನಿಂಗಪ್ಪ ಘಾಟೀನ, ತಾಪಂ ಸದಸ್ಯೆ ಫ‌ಕ್ಕೀರವ್ವ ನಾಯಕ, ಯೋಜನಾಧಿಕಾರಿ ಕುಸುಮಾಧರ, ಕೃಷಿ ಅಧಿಕಾರಿಗಳು, ಸೇವಾ ಪ್ರತಿನಿಧಿಗಳು, ಮೇಲ್ವಿಚಾರಕರು, ಕೆರೆ ಅಭಿವೃದ್ಧಿ ಸಮಿತಿ ಸದಸ್ಯರು ಇದ್ದರು. ದಿನೇಶ ಎಂ. ಸ್ವಾಗತಿಸಿದರು. ಉಲ್ಲಾಸ್‌ ಮೇಸ್ತ ನಿರೂಪಿಸಿದರು. ಸುರೇಶಗೌಡ ಕರಿಗೌಡ್ರ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next