Advertisement

Deepavali: ಕರಾವಳಿಯಲ್ಲಿ ಕಳೆಗಟ್ಟಿದ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ

03:40 AM Nov 01, 2024 | Team Udayavani |

ಮಂಗಳೂರು: ದೀಪಗಳ ಹಬ್ಬ ದೀಪಾವಳಿ ಗುರುವಾರದಿಂದ ಆರಂಭಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸಂಭ್ರಮ ಮನೆ ಮಾಡಿದೆ. ಜಿಲ್ಲೆಯ ಕೆಲವು ಮನೆ, ಅಂಗಡಿಗಳಲ್ಲಿ ಗುರುವಾರ ಲಕ್ಷ್ಮೀ ಪೂಜೆ ಆಚರಿಸಲಾಯಿತು. ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿತು. ಹಬ್ಬದ ಹಿನ್ನೆಲೆಯಲ್ಲಿ ಮನೆಗಳನ್ನು ಸಿಂಗರಿಸಿ, ರಂಗೋಲಿ ಹಾಕಲಾಯಿತು.

Advertisement

ಜಿಲ್ಲಾದ್ಯಂತ ಖರೀದಿ ಜೋರಾಗಿತ್ತು. ಸೇವಂತಿಗೆ, ಮಲ್ಲಿಗೆ, ಗುಲಾಬಿ, ಹಣ್ಣು ಸಹಿತ ಹೂವುಗಳನ್ನು ನಗರದ ವಿವಿಧ ಮಾರುಕಟ್ಟೆ, ರಸ್ತೆ ಬದಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಸಿಹಿ ತಿಂಡಿ ಖರೀದಿಯೂ ಭರ್ಜರಿಯಾಗಿತ್ತು. ಗೂಡುದೀಪಗಳಿಗೂ ಭಾರೀ ಬೇಡಿಕೆ ಕಂಡುಬಂದಿದ್ದು, ವಿವಿಧ ರೀತಿಯ ಆಕರ್ಷಕ ಗೂಡುದೀಪಗಳು ಅಂಗಡಿ ಗಳಲ್ಲಿ ಗ್ರಾಹಕರನ್ನು ಸೆಳೆಯುತ್ತಿದ್ದವು. ಹಬ್ಬದ ಕಾರಣಕ್ಕೆ ಜಿಲ್ಲೆಯಲ್ಲಿ ಗೂಡು ದೀಪ ಖರೀದಿಯೂ ಜೋರಾಗಿತ್ತು. ಪಟಾಕಿ ಖರೀದಿಯೂ ಮಳಿಗೆಗಳು ಆಕರ್ಷಕ ಕೊಡುಗೆಗಳನ್ನು ಘೋಷಿಸಿದ್ದು, ಇವುಗಳ ಖರೀದಿಗೂ ಜನ ಮುಗಿಬೀಳುತ್ತಿದ್ದರು.

ಉಡುಪಿಯಲ್ಲಿ ಸಿಹಿ ತಿಂಡಿ, ಪಟಾಕಿ ಖರೀದಿ ಜೋರು
ದೀಪಾವಳಿಯ ಮೊದಲ ದಿನವಾದ ಗುರುವಾರ ಎಲ್ಲೆಡೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುವ ಮೂಲಕ ಬೆಳಕಿನ ಹಬ್ಬಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ.
ಅ.30ರಂದು ರಾತ್ರಿ ನೀರು ತುಂಬಿಸುವ ಶಾಸ್ತ್ರ ಮುಗಿದು ಗುರುವಾರ ಬೆಳಗ್ಗೆ ಎಣ್ಣೆ ಸ್ನಾನ ನೆರವೇರಿತು. ಮಕ್ಕಳು, ಹಿರಿಯರು ಮನೆ ಮಂದಿ ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.

ಸಂಜೆ ಮನೆ, ದೇವಸ್ಥಾನಗಳಲ್ಲಿ ಸಾಲು ಹಣತೆ ಬೆಳಗಳಾಯಿತು. ವಿವಿಧ ಬಣ್ಣದ ಗೂಡು ದೀಪಗಳನ್ನು ಮನೆಯ ಮುಂದೆ ತೂಗು ಹಾಕಲಾಗಿತ್ತು. ದೀಪದ ಬೆಳಕಿನಲ್ಲಿ ಮನೆಯವರೆಲ್ಲ ಸೇರಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ದೂರದೂರುಗಳಲ್ಲಿ ಉದ್ಯೋಗ ಹಾಗೂ ಇತರ ಕಾರ್ಯ ನಿಮಿತ್ತ ನೆಲೆಸಿದವರು ತಮ್ಮ ಊರುಗಳಿಗೆ ಮರಳಿ ಕುಟುಂಬ ಸದಸ್ಯರೊಂದಿಗೆ ಹಬ್ಬ ಆಚರಣೆ ಮಾಡಿದರು. ಗೋಪೂಜೆ, ಅಂಗಡಿಪೂಜೆ, ಲಕ್ಷ್ಮೀ ಪೂಜೆಗಳಿಗೆ ಸಿದ್ಧತೆ ಸಾಗುತ್ತಿವೆ. ಕೆಲವರು ಗುರುವಾರವೇ ಲಕ್ಷ್ಮೀಪೂಜೆ, ಅಂಗಡಿಪೂಜೆ ನೆರವೇರಿಸಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಸಿಹಿ ತಿಂಡಿ, ಪಟಾಕಿ ಖರೀದಿ ಜೋರಾಗಿತ್ತು.

ಅಂಗಡಿಮುಂಗಟ್ಟು, ಮಳಿಗೆ, ಬೇಕರಿಗಳ ಮುಂದೆ ಜನಜಂಗುಳಿ ಕಂಡುಬಂದಿತ್ತು. ನಗರ ಹಾಗೂ ಗ್ರಾಮೀಣ ಭಾಗದ ಪೇಟೆಗಳಲ್ಲಿ ಜನ ಸಂಚಾರ ಅಧಿಕ ಪ್ರಮಾಣದಲ್ಲಿತ್ತು. ಎಲ್ಲೆಡೆ ದೀಪಾವಳಿ ಹಬ್ಬದ ಶುಭಾಶಯ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಮುಂದಿನ ಎರಡು ದಿನಗಳ ಕಾಲ ಹಬ್ಬದ ಸಂಭ್ರಮ ಮತ್ತಷ್ಟೂ ರಂಗು ಪಡೆದುಕೊಳ್ಳಲಿದೆ.

Advertisement

ನರಕ ಚತುರ್ದಶಿ ಅಂಗವಾಗಿ ಗುರುವಾರ ಉಡುಪಿ ಶ್ರೀ ಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಬಲೀಂದ್ರ ಪೂಜೆ ನೆರವೇರಿತು.

ತಂಪೆರೆದ ಮಳೆ
ದೀಪಾವಳಿ ಹಬ್ಬದ ಖುಷಿಯಲ್ಲಿದ್ದ ಜನರಿಗೆ ಗುರುವಾರ ಸಂಜೆ ಮತ್ತು ರಾತ್ರಿ ಸುರಿದ ಮಳೆಯಿಂದ ದೀಪ ಹಚ್ಚಲು ಹಾಗೂ ಪಟಾಕಿ ಸಿಡಿಸಲು ತುಸು ತೊಂದರೆಯಾದರೂ, ಮಳೆ ವಾತಾವರಣವನ್ನು ತಂಪಾಗಿಸಿತು.

Advertisement

Udayavani is now on Telegram. Click here to join our channel and stay updated with the latest news.

Next