Advertisement

ಚಾ.ನಗರ-ಗುಂಡ್ಲುಪೇಟೆ ತಾ. ಶೇ. 83.65ರಷ್ಟು ಮತದಾನ; ಹಕ್ಕು ಚಲಾಯಿಸಿದ 28 ಕೋವಿಡ್ ಸೋಂಕಿತರು

07:59 PM Dec 22, 2020 | Mithun PG |

ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ತಾಲೂಕಿನ 43 ಹಾಗೂ ಗುಂಡ್ಲುಪೇಟೆ ತಾಲೂಕಿನ 34 ಗ್ರಾಮ ಪಂಚಾಯಿತಿಗಳ ಒಟ್ಟು 1179 ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಎರಡೂ ತಾಲೂಕುಗಳಿಂದ  ಒಟ್ಟು  ಶೇ. 83.65ರಷ್ಟು ಶಾಂತಿಯುತ ಮತದಾನವಾಗಿದೆ.

Advertisement

ಚಾಮರಾಜನಗರ ತಾಲೂಕಿನಲ್ಲಿ ಶೇ. 79.25ರಷ್ಟು ಹಾಗೂ ಗುಂಡ್ಲುಪೇಟೆ ತಾಲೂಕಿನಲ್ಲಿ ಶೇ. 88.05ರಷ್ಟು ಮತದಾನವಾಗಿದೆ.

ಚಾಮರಾಜನಗರ ತಾಲೂಕಿನ ಗ್ರಾ.ಪಂ.ಗಳ 742 ಸ್ಥಾನಗಳಿಗೆ ಹಾಗೂ ಗುಂಡ್ಲುಪೇಟೆ ತಾಲೂಕಿನ 499 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಈ ಪೈಕಿ ಚಾಮರಾಜನಗರ ತಾಲೂಕಿನ 49 ಸ್ಥಾನಗಳು ಹಾಗೂ ಗುಂಡ್ಲುಪೇಟೆ ತಾಲೂಕಿನ 13 ಅಭ್ಯರ್ಥಿಗಳು ಸೇರಿ ಒಟ್ಟು 62 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ 1179 ಸ್ಥಾನಗಳಿಗೆ ಚುನಾವಣೆ ನಡೆಯಿತು. ಒಟ್ಟು 3079 ಅಭ್ಯರ್ಥಿಗಳು ಕಣದಲ್ಲಿದ್ದರು.

ಕೋವಿಡ್ ನಡುವೆಯೂ ಜನರು ಉತ್ಸಾಹದಿಂದ ಮತ ಚಲಾಯಿಸಿದರು. ಗ್ರಾಮಪಂಚಾಯಿತಿ ಚುನಾವಣೆಗಳಲ್ಲಿ, ಸ್ಥಳೀಯರೇ ಅಭ್ಯರ್ಥಿಗಳಾಗಿರುವುದರಿಂದ ಮತದಾನ ಬಿರುಸಿನಿಂದ ನಡೆಯುತ್ತದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತಾದರೂ, ಚಳಿಯ ಕಾರಣ ಮೊದಲ ಒಂದು ಗಂಟೆ ಅವಧಿಯಲ್ಲಿ ಮತದಾರರು ವಿರಳ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದರು. 8 ಗಂಟೆಯ ನಂತರ ಮತದಾನ ಚುರುಕಾಯಿತು.

Advertisement

ಬಹುತೇಕ ಮತಗಟ್ಟೆಗಳಲ್ಲಿ ಉದ್ದನೆಯ ಸರತಿಯ ಸಾಲಿತ್ತು.  ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಗ್ರಾಮಗಳ ಜನರನ್ನು ವಿನಂತಿಸಿ ಮತಗಟ್ಟೆಗಳಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದರು.

ಬೆಳಿಗ್ಗೆ 9 ಗಂಟೆಯವರೆಗೆ ಎರಡೂ ತಾಲೂಕುಗಳಲ್ಲಿ ಶೇ. 6.75ರಷ್ಟು ಮತದಾನವಾಯಿತು. ಚಾಮರಾಜನಗರ ತಾಲೂಕಿನಲ್ಲಿ ಶೇ. 7.70 ರಷ್ಟು, ಗುಂಡ್ಲುಪೇಟೆ ತಾಲೂಕಿನಲ್ಲಿ ಶೇ. 5.35ರಷ್ಟು ಮತದಾನವಾಗಿತ್ತು.

ಬೆಳಿಗ್ಗೆ 11 ಗಂಟೆ ವೇಳೆಗೆ ಶೇ. 24ರಷ್ಟು ಮತದಾನ ನಡೆಯಿತು. ಚಾ.ನಗರ ತಾಲೂಕಿನಲ್ಲಿ ಶೇ. 27ರಷ್ಟು ಹಾಗೂ ಗುಂಡ್ಲುಪೇಟೆ ತಾಲೂಕಿನಲ್ಲಿ ಶೇ. 20.52ರಷ್ಟು ಮತದಾನ ನಡೆಯಿತು.

ಮಧ್ಯಾಹ್ನ 1 ಗಂಟೆಗೆ ಶೇ. 48.77ರಷ್ಟು ಮತದಾನ ನಡೆದಿತ್ತು. ಚಾಮರಾಜನಗರ ತಾಲೂಕಿನಲ್ಲಿ ಶೇ. 51.66ರಷ್ಟು ಹಾಗೂ ಗುಂಡ್ಲುಪೇಟೆ ತಾಲೂಕಿನಲ್ಲಿ 44.55ರಷ್ಟು ಮತದಾನ ನಡೆಯಿತು.

ಇದನ್ನೂ ಓದಿ:  ಕೋವಿಡ್ ಹೊಸ ಪ್ರಭೇದದ ಭೀತಿ: ಬ್ರಿಟನ್ ನಿಂದ ಜಮಖಂಡಿಗೆ ಬಂದ ಮಹಿಳೆಯ ಆರೋಗ್ಯ ತಪಾಸಣೆ

ಮಧ್ಯಾಹ್ನ 3ಗಂಟೆಯ ವೇಳೆಗೆ ಎರಡೂ ತಾಲೂಕುಗಳಿಂದ  ಶೆ. 63.04ರಷ್ಟು ಮತದಾನ ನಡೆಯಿತು. ಚಾಮರಾಜನಗರ ತಾಲೂಕಿನಲ್ಲಿ ಶೇ. 67.02ರಷ್ಟು ಹಾಗೂ ಗುಂಡ್ಲುಪೇಟೆ ತಾಲೂಕಿನಲ್ಲಿ ಶೇ. 57.25ರಷ್ಟು ಮತದಾನವಾಗಿತ್ತು.

ಚಾಮರಾಜನಗರ ತಾಲೂಕಿನ ಕುದೇರು, ಉಮ್ಮತ್ತೂರು, ಮಂಗಲ, ಜನ್ನೂರು, ಹೊಸೂರು, ಬಾಗಳಿ, ಮಲೆಯೂರು, ನಂಜೇದೇವನಪುರ ಮತ್ತಿತರ ಗ್ರಾಮಗಳಲ್ಲಿ  ಉದ್ದನೆಯ ಸಾಲುಗಳು ಕಂಡುಬಂದವು.

5 ಗಂಟೆಯ ನಂತರವೂ ಮತದಾನ: 5 ಗಂಟೆಯ ಮೇಲೂ ಹಂಗಳ, ಕೊತ್ತಲವಾಡಿ, ಹಂಡ್ರಕಳ್ಳಿ, ಉಡಿಗಾಲ, ಚಿಕ್ಕತುಪ್ಪೂರು, ಶಿವಪುರ  ಮತ್ತಿತರ ಗ್ರಾಮಗಳಲ್ಲಿ ಮತದಾನ ನಡೆಯಿತು. 5 ಗಂಟೆಯೊಳಗೆ ಮತಗಟ್ಟೆಗೆ ಬಂದಿದ್ದವರಿಗೆ ಟೋಕನ್ ನೀಡಿ ಅನಂತರವೂ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.

ಕೋವಿಡ್ ಮುಂಜಾಗ್ರತೆ: ಪ್ರತಿಯೊಂದು ಮತಗಟ್ಟೆಗಳಲ್ಲಿ, ಮತದಾರರ  ಕೈಗಳಿಗೆ ಸ್ಯಾನಿಟೈಸರ್ ಹಾಕಲಾಯಿತು. ಥರ್ಮಲ್ ಸ್ಕ್ಯಾನರ್ ಮೂಲಕ ಜ್ವರ ತಪಾಸಣೆ  ನಡೆಸಲಾಯಿತು. ಮತದಾರರು ಮಾಸ್ಕ್ ಧರಿಸಿರುವುದು ಕಡ್ಡಾಯವಾಗಿತ್ತು. ನಾಗವಳ್ಳಿಯ ಮತಗಟ್ಟೆಯೊಂದರಲ್ಲಿ ಮಾಸ್ಕ್ ಧರಿಸದೇ ಬಂದ ಮತದಾರರೊಬ್ಬರನ್ನು ವಾಪಸ್ ಕಳುಹಿಸಿ, ಮಾಸ್ಕ್ ಧರಿಸಿ ಬಂದ ಬಳಿಕ ಮತದಾನಕ್ಕೆ  ಅವಕಾಶ ಮಾಡಿಕೊಡಲಾಯಿತು.

ಇದನ್ನೂ ಓದಿ:  ಸವಣೂರು :ಬಾಲಕಿಗೆ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಮೆಸ್ಕಾಂ ಸಿಬ್ಬಂದಿ ಪೊಲೀಸರ ವಶಕ್ಕೆ

28 ಮಂದಿ ಕೋವಿಡ್  ಸೋಂಕಿತರಿಂದ ಮತದಾನ:

ಕೊನೆಯ 1 ಗಂಟೆ ಕೆಲವೆಡೆ ಕೋವಿಡ್ ಸೋಂಕಿತರಿಗೆ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ಆರೋಗ್ಯ ಇಲಾಖೆಯು ಎರಡೂ ತಾಲೂಕುಗಳಲ್ಲಿ 55 ಮಂದಿ ಸೋಂಕಿತ ಮತದಾರರನ್ನು ಗುರುತಿಸಿತ್ತು. ಇವರಲ್ಲಿ 28 ಮಂದಿ ಮತದಾರರು ಮತದಾನ ಮಾಡಲು ಇಚ್ಚಿಸಿದ್ದರು. ಅವರೆಲ್ಲರನ್ನು ಸಹ ಗುರುತಿಸಿ, ಅವರಿಗೆ ಪಿಪಿಇ ಕಿಟ್ ಅನ್ನು ವ್ಯವಸ್ಥೆ ಮಾಡಲಾಗಿತ್ತು. ಆ ಮತಗಟ್ಟೆಗಳ ಸಿಬ್ಬಂದಿಗೂ ಪಿಪಿಇ ಕಿಟ್ ನೀಡಲಾಗಿತ್ತು. ಚಾಮರಾಜನಗರ ತಾಲೂಕಿನಲ್ಲಿ 20 ಮಂದಿ ಸೋಂಕಿತರು ಹಾಗೂ ಗುಂಡ್ಲುಪೇಟೆಯಲ್ಲಿ 8 ಮಂದಿ ಸೋಂಕಿತರು ಮತದಾನ ಮಾಡಿದರು. ಸೋಂಕಿತರು ಪಿಪಿಇ ಕಿಟ್ ಧರಿಸಿ ಬಂದು ಮತದಾನ ಮಾಡಿದರು. ಅವರು ಮತದಾನ ಮಾಡಲು ಬಂದಾಗ ಅಂಥ ಮತಗಟ್ಟೆಗಳಲ್ಲಿ ಮತಗಟ್ಟೆ ಸಿಬ್ಬಂದಿ ಸಹ ಪಿಪಿಇ ಕಿಟ್ ಧರಿಸಿದ್ದರು.

ನನ್ನ 30 ವರ್ಷದ   ಅಧಿಕಾರದ ಅನುಭವದಲ್ಲಿ ಇದು ಸ್ಮರಣೀಯ ಚುನಾವಣೆ. ಈ ಬಾರಿ, ನಾವು ಶಾಂತಿಯುತ ಹಾಗೂ ಸುವ್ಯವಸ್ಥಿತವಾಗಿ ಚುನಾವಣೆ ನಡೆಸುವುದಲ್ಲದೇ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವ ಹೆಚ್ಚುವರಿ ಹೊಣೆಗಾರಿಕೆ ಇತ್ತು.

ನಮ್ಮ ಅಧಿಕಾರಿಗಳು, ಸಿಬ್ಬಂದಿ ಎಲ್ಲರೂ ಚೆನ್ನಾಗಿ ಕೆಲಸ ಮಾಡಿದ್ದಾರೆ. ನಮ್ಮದು   ಟೀಮ್ ವರ್ಕ್. ಮೊದಲ ಹಂತದ ಮತದಾನ ಬಹಳ ಶಾಂತಿಯುತವಾಗಿ, ಮುಕ್ತವಾಗಿ ನಡೆದಿದೆ. ಕೋವಿಡ್ ನಡುವೆಯೂ ಸುರಕ್ಷತೆಯಿಂದ ಮತದಾನ ನಡೆದಿದೆ. ಕೋವಿಡ್ ಸೋಂಕಿತರಿಗೂ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿರುವುದು, ಪ್ರಜಾತಂತ್ರದ ಮೇಲೆ ಜನಸಾಮಾನ್ಯರಿಗೆ ಇರುವ ನಂಬಿಕೆಯನ್ನು ಗಟ್ಟಿ ಮಾಡಿದೆ. ಶಾಂತಿಯುತ ಮತದಾನಕ್ಕೆ ಕಾರಣರಾಧ ಮತದಾರರಿಗೆ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ.

  • ಡಾ. ಎಂ. ಆರ್. ರವಿ, ಜಿಲ್ಲಾಧಿಕಾರಿ.
Advertisement

Udayavani is now on Telegram. Click here to join our channel and stay updated with the latest news.

Next