Advertisement

ಮಲೆನಾಡು ಹೆದ್ದಾರಿ ಅಭಿವೃದ್ಧಿಗೆ 82 ಕೋ. ರೂ. ಆಡಳಿತಾನುಮತಿ

06:25 AM May 01, 2018 | Team Udayavani |

ಕಾಸರಗೋಡು: ಬಹುತೇಕ ಗ್ರಾಮೀಣ ಪ್ರದೇಶಗಳಲ್ಲೇ ಹಾದು ಹೋಗಲಿರುವ ಕಾಸರಗೋಡು ಜಿಲ್ಲೆಯ ಮಲೆನಾಡು ಹೆದ್ದಾರಿ ನಿರ್ಮಾಣ ಯೋಜನೆಗೆ ಗ್ರೀನ್‌ ಸಿಗ್ನಲ್‌ ಲಭಿಸಿದೆ. ಜಿಲ್ಲಾ ಗಡಿ ಭಾಗವಾದ  ಚೆರುಪ್ಪುಯ ಸೇತುವೆಯಿಂದ ಕೋಳಿಚ್ಚಾಲ್‌ ವರೆಗೆ ಮೊದಲ ರೀಚ್‌ನ 30.77 ಕಿಲೋ ಮೀಟರ್‌ ರಸ್ತೆ  ನಿರ್ಮಾಣಕ್ಕಾಗಿ 82 ಕೋಟಿ ರೂಪಾಯಿ ಅನುದಾನಕ್ಕೆ ಆಡಳಿತಾ ನುಮತಿ ದೊರಕಿದೆ ಎಂದು ತೃಕ್ಕರಿಪುರ  ಶಾಸಕ ಎಂ.ರಾಜಗೋಪಾಲನ್‌ ತಿಳಿಸಿದ್ದಾರೆ.

Advertisement

ಈ ರಸ್ತೆಯಲ್ಲಿ  ಮೆಕ್ಕಾಡಂ ಡಾಮರೀಕರಣ ನಡೆಸಿದ ನಲ್ಲೋಂಪುಯದಿಂದ 1.50 ಕಿಲೋ ಮೀಟರ್‌ ಭಾಗವನ್ನು  ಹೊರತು ಪಡಿಸಿ ಉಳಿದ 28.877 ಕಿಲೋ ಮೀಟರ್‌ ರಸ್ತೆಯನ್ನು  ಆಧುನಿಕ ಗುಣಮಟ್ಟದಲ್ಲಿ  ನವೀಕರಿಸಲು ಯೋಜನೆ ರೂಪಿಸಲಾಗಿದೆ.

ಹಿಲ್‌ ಹೈವೇಯಾದ ತೃಕ್ಕರೀಪುರ ಮತ್ತು  ಕಾಂಞಂಗಾಡು ವಿಧಾನಸಭಾ ಕ್ಷೇತ್ರಗಳ ಮೂಲಕ ಹಾದು ಹೋಗುವ ಈ ರಸ್ತೆ 12 ಮೀಟರ್‌ ಅಗಲದಲ್ಲಿ  ನಿರ್ಮಿಸುವ ಗುರಿ ಹೊಂದಲಾಗಿದ್ದು, ಎತ್ತರ – ತಗ್ಗು -ತಿರುವುಗಳು ಹೆಚ್ಚಿರುವ ಭಾಗಗಳಲ್ಲಿರಸ್ತೆಯ ಅಗಲವನ್ನು ಹೆಚ್ಚಿಸುವ ಯೋಜನೆ ಹಾಕಿಕೊಳ್ಳಲಾಗಿದೆ. 7 ಮೀಟರ್‌ ಅಗಲದಲ್ಲಿ  ಡಾಮರೀಕರಣಗೊಳಿಸಲು ನಿರ್ಧರಿಸಲಾಗಿದೆ.

ಅಗತ್ಯವಿರುವ ಸ್ಥಳಗಳಲ್ಲಿ  ಡಿವೈಡರ್‌ನಿರ್ಮಿಸಲಾಗುವುದು. ತಿರುವುಗಳಲ್ಲಿ  40ರಷ್ಟು  ಸೋಲಾರ್‌ ಲೈಟ್‌ಗಳನ್ನು ರಸ್ತೆ ಬದಿಗಳಲ್ಲಿ  ಸ್ಥಾಪಿಸಲಾಗುವುದು. ಚಿತ್ತಾರಿಕ್ಕಲ್‌, ವಳ್ಳಿಕ್ಕಡವ್‌, ಮಾಲೋಂ, ಕೋಳಿಚ್ಚಾಲ್‌ ಪೇಟೆಗಳಲ್ಲಿ  ರಸ್ತೆಯನ್ನು  ಸಂಪೂರ್ಣವಾಗಿ ಡಾಮರೀಕರಣ ನಡೆಸಲಾಗುವುದು.

ಉದ್ದೇಶಿತ ಈ ರಸ್ತೆಯು ಪೂರ್ಣಗೊಂಡರೆ ಮಲೆನಾಡು ಹೆದ್ದಾರಿಯೊಂದಿಗೆ ಚೆರುಪ್ಪುಯದಿಂದ ಕರ್ನಾಟಕದ ಸುಳ್ಯ, ಮಡಿಕೇರಿ ಸಹಿತ ಇನ್ನಿತರ ಪ್ರಧಾನ ನಗರಗಳಿಗೆ ಹೆದ್ದಾರಿ ಕಲ್ಪಿಸಲು ಸುಲಭವಾಗಲಿದೆ. ಕೇರಳದಲ್ಲಿ  ಕಳೆದ ಯುಡಿಎಫ್‌ ಸರಕಾರದ ಕಾಲಾವಧಿಯಲ್ಲಿ ಕಣ್ಣೂರು ಜಿಲ್ಲೆಯಲ್ಲಿ  ಮಲೆನಾಡು ಹೆದ್ದಾರಿ ನಿರ್ಮಾಣ ಬಹುಪಾಲು ಪೂರ್ತಿಗೊಳಿಸಿದಾಗ ತಾಂತ್ರಿಕ ಸಮಸ್ಯೆಗಳ ಹೆಸರಿನಲ್ಲಿ ಕಾಸರಗೋಡು ಜಿಲ್ಲೆಯಲ್ಲಿ  3 ಕಿಲೋ ಮೀಟರ್‌ ರಸ್ತೆ  ಮಾತ್ರವೇ ನಿರ್ಮಿಸಲು ಸಾಧ್ಯವಾಗಿತ್ತು.ಜಿಲ್ಲೆಯಲ್ಲಿ  ಮಲೆನಾಡು ಹೆದ್ದಾರಿಯನ್ನು ಸ್ಥಾಪಿಸುವುದರ ಅಂಗವಾಗಿ ತಿಂಗಳುಗಳ ಹಿಂದೆ ಕೇರಳ ಕಂದಾಯ ಸಚಿವ ಇ.ಚಂದ್ರಶೇಖರನ್‌, ಕಾಸರಗೋಡು ಸಂಸದ ಪಿ.ಕರುಣಾಕರನ್‌, ತೃಕ್ಕರೀಪುರ ಶಾಸಕ ಎಂ.ರಾಜಗೋಪಾಲನ್‌ ಅವರ ನೇತೃತ್ವದಲ್ಲಿ ಚಿತ್ತಾರಿಕ್ಕಲ್‌ನಲ್ಲಿ  ಜನಪರ ಸಮಿತಿಯನ್ನು ರಚಿಸಲಾಗಿತ್ತು. ಇದರಿಂದ ಹೆದ್ದಾರಿ ನಿರ್ಮಾಣಕ್ಕಿರುವ ಮೊದಲ ಹಂತದ ಪ್ರಕ್ರಿಯೆಗಳು ಶೀಘ್ರಗತಿಯಲ್ಲಿ  ಸಾಗಿದವು.

Advertisement

ಜಿಲ್ಲೆಯಲ್ಲಿ  ಮಲೆನಾಡು ಹೆದ್ದಾರಿಯನ್ನು  ಅನುಷ್ಠಾನಕ್ಕೆ ತರುವುದಾಗಿ ಎಲ್‌ಡಿಎಫ್‌ ಸರಕಾರವು ಚುನಾವಣೆ ಸಂದರ್ಭ ಭರವಸೆ ನೀಡಿತ್ತು. ಎಲ್‌ಡಿಎಫ್‌ ಅಧಿಕಾರಕ್ಕೆ ಬಂದ ಬಳಿಕ ಹೆದ್ದಾರಿಗಿರುವ ಪ್ರಾಥಮಿಕ ಕ್ರಮಗಳು ಆರಂಭಗೊಂಡವು. ನಂತರ ಕಿಫ್‌ಬಿ ಯೋಜನೆಯಲ್ಲಿ  ಒಳಪಡಿಸಿ ಜಿಲ್ಲೆಯಲ್ಲಿ ಮಲೆನಾಡು ಹೆದ್ದಾರಿ  ಪೂರ್ತಿಗೊಳಿಸಲು ಸರಕಾರ ಅಗತ್ಯದ ಕ್ರಮ ಕೈಗೊಂಡಿದೆ.

ಉದ್ದೇಶಿತ ಮಲೆನಾಡು ಹೈವೇ ರೂಟ್‌  
ಕರ್ನಾಟಕದ ಗಡಿಭಾಗವಾದ ನಂದರಪದವಿನಿಂದ ಆರಂಭಗೊಂಡು ಸುಂಕದಕಟ್ಟೆ, ಪೈವಳಿಕೆ, ಚೇವಾರು, ಪೆರ್ಮುದೆ, ಅಂಗಡಿಮೊಗರು, ಇಡಿಯಡ್ಕ, ಬದಿಯಡ್ಕ,  ಮುಳ್ಳೇರಿಯ, ಪಡಿಯತ್ತಡ್ಕ, ಅತ್ತನಾಡಿ, ಎಡಪರಂಬ, ಪಾಂಡಿ, ಪಳ್ಳಂಚಿ, ಶಂಕರಂಪಾಡಿ, ಬಂದಡ್ಕ, ಮಾನಡ್ಕ, ಕೋಳಿಚ್ಚಾಲ್‌, ಹದಿನೆಂಟನೇ ಮೈಲು, ಮರುಥೋಂ, ಚುಳ್ಳಿ, ವಳ್ಳಿಕಡವ್‌, ಚಿತ್ತಾರಿಕ್ಕಲ್‌ ಮೂಲಕವಾಗಿ ಚೆರುಪ್ಪುಯಕ್ಕೆ ತಲುಪುವ ರೀತಿಯಲ್ಲಿ  ಮಲೆನಾಡು ಹೆದ್ದಾರಿಯನ್ನು  ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯು ಈಡೇರುವುದರೊಂದಿಗೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ. ಅಲ್ಲದೆ ಜಿಲ್ಲೆಯ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ  ಕಲ್ಪಿಸಲು ಸುಲಭ ಸಾಧ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next