ಕೋವಿಡ್-19 ವೈರಸ್ ಹಾವಳಿಯಿಂದಾಗಿ ದೇಶದಲ್ಲಿ ಘೋಷಣೆಗೊಂಡ ಲಾಕ್‌ಡೌನ್‌ನಿಂದಾಗಿ ಲಕ್ಷಾಂತರು ಜನರು ನಿರಾಶ್ರಿತರಾದರು. ಊಟವಿಲ್ಲದೇ ನರಾಳಿಡಿದರು. ತಮ್ಮ ಊರು, ಮನೆ ಸೇರುವುದಕ್ಕಾಗಿ ಬಸ್, ರೈಲು ಇಲ್ಲದೇ ಸಾವಿರಾರು ಕಿ.ಮೀ. ಬರಿಗಾಲಿನಲ್ಲಿ ನಡೆದರು. ಇದಕ್ಕಾಗಿ ಹರಸಾಹಸಪಟ್ಟರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹಲವಾರು ಸಂಘ ಸಂಸ್ಥೆಗಳು, ವ್ಯಕ್ತಿಗಳು ದೇವರಂತೆ ನೆರವಿಗೆ ಧಾವಿಸಿದರು. ಊಟ, ವಸತಿ ನೀಡಿ ಕಷ್ಟಕಾಲದಲ್ಲಿ ಕಲ್ಪವೃಕ್ಷವಾದರು. ಅಂತೆಯೇ ಇದೇ ರೀತಿ ಮಹಾರಾಷ್ಟ್ರದಲ್ಲಿ 81 ವರ್ಷದ ವೃದ್ಧರೊಬ್ಬರು ಸುಮಾರು 20 ಲಕ್ಷಕ್ಕೂ ಅಧಿಕ ನಿರಾಶ್ರಿತರಿಗೆ ಅನ್ನ ನೀಡಿ, ಸಂಕಷ್ಟದಲ್ಲಿರುವವರಿಗೆ ಅನ್ನದಾತರಾಗಿದ್ದಾರೆ.
ಸ್ಥಳೀಯವಾಗಿ ಖೈರಾ ಬಾಬಾ ಎಂದೇ ಪ್ರಸಿದ್ಧರಾಗಿರುವ ಮತ್ತು ಮಹಾರಾಷ್ಟ್ರದ ಕರಂಜಿಯ ಗುರುದ್ವಾರದ ಮುಖ್ಯಸ್ಥರಾಗಿರುವ ಬಾಬಾ ಕರ್ನಲ್ ಸಿಂಗ್ ಖೈರಾ ಎನ್ನುವವರು ರಾಷ್ಟ್ರೀಯ ಹೆದ್ದಾರಿ 7ರ ಪಕ್ಕದಲ್ಲಿ ಒಂದು ಗುಡಿಸಲಿನಲ್ಲಿ ಉಚಿತವಾಗಿ ಊಟವನ್ನು ನೀಡುವ ಮೂಲಕ ಮಾನವೀಯತೆ ಮರೆದಿದ್ದಾರೆ.
ಕರಂಜಿಯ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಬಾಬಾ ಅವರು ನೀಡುವ ಉಚಿತ ಆಹಾರದ ಶೆಡ್‌ನ್ನು ಹೊರತುಪಡಿಸಿ, ವ್ಯಾಪ್ತಿಯ 450 ಕಿ.ಮೀ. ಸುತ್ತ ಮುತ್ತ ಎಲ್ಲಿಯೂ ಊಟ, ನೀರು ಸಿಗುವುದಿಲ್ಲ. ಯಾವುದೇ ರೆಸ್ಟೋರೆಂಟ್, ಹೋಟೆಲ್‌ಗಳಿಲ್ಲ. ಇದು ಅರಣ್ಯ ಪ್ರದೇಶವಾಗಿದೆ. ಈ ಅರಣ್ಯದಲ್ಲಿ ನಡೆದುಕೊಂಡು ನಿರಾಶ್ರಿತರು, ಬಡವರು ಹಸಿವಿನಿಂದ ಬಳಲುತ್ತಿರುವುದನ್ನು ಗಮನಿಸಿದ ಸಿಖ್ ಸಮುದಾಯ. ಇಲ್ಲಿನ ಗುರುದ್ವಾರದ ಸಮಿತಿಯ ವತಿಯಿಂದ ಆಹಾರ ಒದಗಿಸುವ ನಿರ್ಣಯಕ್ಕೆ ಬರಲಾಯಿತು. ತರುವಾಯ ದೇಣಿಗೆ, ಸಹಕಾರವೂ ಕೂಡ ಪ್ರವಾಹದಂತೆ ಹರಿದುಬಂತು.
ಬಾಬಾ ಅವರ ಈ ಅದಮ್ಯ ಸೇವೆಗೆ ಇಡೀ ಪ್ರದೇಶದಲ್ಲಿನ ಸಿಕ್ಖ್ ಸಮುದಾಯವೂ ಸಂಪೂರ್ಣ ಸಹಕಾರ ನೀಡಿದೆ. ಅಲ್ಲದೇ ಅಮೆರಿಕದ ನ್ಯೂಜೆರ್ಸಿಯಲ್ಲಿ ವಾಸಿಸುತ್ತಿರುವ ಖೈರಾ ಬಾಬಾ ಅವರ ಅಣ್ಣನಾದ ಗುರುಬಾಕ್ಸ್ ಸಿಂಗ್ ಖೈರಾ ಅವರು ಕೂಡ ಈ ಸೇವೆಗೆ ನೆರವಾಗಿದ್ದಾರೆ. ಅಲ್ಲದೇ ಅಮೆರಿಕ, ಪಾಂರ್ಡಖ್‌ವಾಡ ಸಿಖ್ ಸಮುದಾಯದವರು ಅಪಾರ ಪ್ರಮಾಣದ ನೆರವು ನೀಡಿವೆ.
ಸುಮಾರು 10 ವಾರಗಳ ಬಳಿಕ ಗುರುದ್ವಾರದ ಲಂಗರ್‌ನಲ್ಲಿ ಸುಮಾರು 15 ಲಕ್ಷ ಬಳಕೆ ಮಾಡಿ ಬಿಸಾಡುವ ಪ್ಲೇಟ್‌ಗಳನ್ನು ಬಿದ್ದಿರುವುದನ್ನು ಸಮಿಯೂ ಗಮನಿಸಿದೆ. ಅಲ್ಲದೇ ಸುಮಾರು 5 ಲಕ್ಷಕ್ಕೂ ಅಧಿಕ ಜನ ಊಟ, ಉಪಾಹಾರವನ್ನು ಪಾರ್ಸೆಲ್ ತೆಗೆದುಕೊಂಡು ಹೋಗಿದ್ದಾರೆ. ಹೀಗೆ ಸುಮಾರು 20 ಲಕ್ಷಕ್ಕೂ ಅಧಿಕ ಮಂದಿಗೆ 81ರ ವೃದ್ಧ ಖೈರಾ ಬಾಬಾ ಅವರು ಅನ್ನ ದಾಸೋಹ ಮಾಡಿ ಮಾನವೀಯತೆ ಮರೆದಿದ್ದಾರೆ.
ನಿರಂತರ ಅನ್ನ ದಾಸೋಹ
ದಿನದ ಮೂರು ಸಮಯದಲ್ಲಿ ಕೂಡ ನಿರಂತರ ಅನ್ನ ದಾಸೋಹವನ್ನು ಮಾಡಲಾಗುತ್ತಿದೆ. ಬೆಳಗ್ಗಿನ ಉಪಾಹಾರದ ಜತೆಗೆ ಟೀ ಬಿಸ್ಕೀಟ್ ನೀಡಲಾಗುತ್ತಿದೆ. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಪ್ಲೇನ್ ರೈಸ್, ದಾಲ್, ಅಲೂ ವಾಡಿ ನೀಡಲಾಗುತ್ತದೆ. ಜತೆಗೆ ಕುಡಿಯಲು ಶುದ್ಧ ಕುಡಿಯುವ ನೀರು ನೀಡುತ್ತಿದ್ದು, ಶೌಚ, ಸ್ನಾನಕ್ಕೆ ಬೋರವೆಲ್ ನೀರು ಒದಗಿಸಲಾಗುತ್ತಿದೆ. ಇದು ಈ ಗೊಂಡಾರಣ್ಯದಲ್ಲಿನ ಈ ಸೇವೆ ಪಡೆದ ಅನೇಕರು ಇವರನ್ನು ಸ್ಮರಿಸುತ್ತಿದ್ದಾರೆ.
-ಮಂಜು ಸಾಹುಕಾರ್, ಮಾನವಿ