Advertisement

ಆಹಾರ ಧಾನ್ಯ ಶೇ.80 ಹೆಚ್ಚುವರಿ ಪೂರೈಕೆ

01:15 PM Apr 17, 2020 | mahesh |

ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್‌ಗೂ ಮೊದಲಿನ ಸ್ಥಿತಿಗೆ ಹೋಲಿಸಿದರೆ ಆಹಾರಧಾನ್ಯ, ಬೇಳೆಕಾಳು, ತರಕಾರಿ, ಹಣ್ಣು ಪೂರೈಕೆ ಪ್ರಮಾಣ ಶೇ.80ರಷ್ಟು ಹೆಚ್ಚುವರಿಯಾಗಿ ಪೂರೈಕೆಯಾಗುತ್ತಿದೆ! ಅಲ್ಲದೆ, ಅಕ್ಕಿ, ಬೇಳೆ ಗಿರಣಿಗಳು ಕಾರ್ಯಾರಂ ಭವಾಗಿರುವ ಜತೆಗೆ ಆಹಾರ ಸಂಸ್ಕರಣಾ ಘಟಕಗಳು ಶುರುವಾಗಿರುವುದರಿಂದ ರಾಜ್ಯದಲ್ಲಿ ಎಲ್ಲಿಯೂ ಆಹಾರ ಧಾನ್ಯ, ಬೇಳೆಕಾಳು, ತರಕಾರಿ, ಹಣ್ಣು, ಮೀನು, ಮೊಟ್ಟೆ, ಮಾಂಸ ಪೂರೈಕೆಯಲ್ಲಿ ವ್ಯತ್ಯಯವಾಗಿಲ್ಲ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಲಾಕ್‌ಡೌನ್‌ ಜಾರಿಯಾದ ಆರಂಭದ ಕೆಲ ದಿನಗಳಲ್ಲಿ ರಾಜ್ಯದ ಒಳಗೆ ಹಾಗೂ ರಾಜ್ಯಗಳ ನಡುವೆ ಆಹಾರ ಧಾನ್ಯಗಳ ಪೂರೈಕೆ ದಿಢೀರ್‌ ಸ್ಥಗಿತಗೊಂಡಿದ್ದ
ಸ್ವಲ್ಪ ಸಮಸ್ಯೆ ಉಂಟಾಗಿತ್ತು. ಆದರೆ ಉತ್ಪಾದಕರು, ಮಾರಾಟ ಸಂಸ್ಥೆಗಳ ಸಂಘಟನೆಗಳ ಪದಾಧಕಾರಿಗಳು, ಸೂಪರ್‌ ಮಾರ್ಕೆಟ್‌, ಇ- ಕಾಮರ್ಸ್‌ ಸಂಸ್ಥೆಗಳೊಂದಿಗೆ ನಿರಂತರವಾಗಿ ಸಭೆ ನಡೆಸಿದ ಅಧಿಕಾರಿಗಳು ಆಹಾರ ಧಾನ್ಯ ಪೂರೈಕೆ ಸರಪಳಿ ಕೊಂಡಿ ಕಳಚದಂತೆ ನಡೆಸಿದ ಪ್ರಯತ್ನದಿಂದ ಪೂರೈಕೆ ವ್ಯವಸ್ಥೆ ಸುಧಾರಿಸಲು ಕಾರಣವಾಗಿದೆ.

ಸಾಕಷ್ಟು ಲಭ್ಯತೆ: ಬುಧವಾರದ (ಏ. 15) ಸಂಜೆ ಮಾಹಿತಿ ಪ್ರಕಾರ ರಾಜ್ಯದ ಎಪಿಎಂಸಿ ಸೇರಿ ಇತರೆಡೆ ಅಕ್ಕಿ, ಗೋಧಿ, ಗೋಧಿ ಹಿಟ್ಟು, ರಾಗಿ, ಜೋಳ ದಾಸ್ತಾನು ಒಟ್ಟು 3.83 ಲಕ್ಷ ಟನ್‌ನಷ್ಟಿದೆ. ತೊಗರಿ ಬೇಳೆ ಸೇರಿ ಇತರೆ ಬೇಳೆ ಕಾಳು ಲಭ್ಯತೆ 2.29 ಲಕ್ಷ ಟನ್‌ನಷ್ಟಿದೆ. ಅಡುಗೆ ಎಣ್ಣೆ ಲಭ್ಯತೆ 7250 ಟನ್‌
ಗಳಷ್ಟಿದೆ. 1.57 ಲಕ್ಷ ಟನ್‌ ಸಕ್ಕರೆ ಲಭ್ಯತೆ ಇದೆ ಎಂದು ಮೂಲಗಳು ಹೇಳಿವೆ.

ನಿತ್ಯ 1 ಕೋಟಿ ಮೊಟ್ಟೆ ಮಾರಾಟ: ಇನ್ನು ಕೋಳಿ, ಮಾಂಸ, ಮೀನು ಲಭ್ಯತೆ 42 ಟನ್‌ನಷ್ಟಿದ್ದು, ನಿತ್ಯ 1  ಕೋಟಿ ಮೊಟ್ಟೆ ಮಾರಾಟವಾಗುತ್ತಿದೆ. ಇತ್ತೀಚೆಗೆ
ಒಂದೇ ದಿನದಲ್ಲಿ 3.33 ಕೋಟಿ ಮೊಟ್ಟೆ ಮಾರಾಟವಾಗಿರುವುದು ಕಂಡುಬಂದಿದೆ. ಜತೆಗೆ ತರಕಾರಿ, ಹಣ್ಣು ಪೂರೈಕೆ ಉತ್ತಮವಾಗಿದ್ದು, ಯಾವುದೇ ರೀತಿಯಲ್ಲಿ ಕೊರತೆ ಇಲ್ಲ ಎಂದು ತಿಳಿಸಿವೆ. ಕಲ್ಲಂಗಡಿ, ಕರಬೂಜ ಹಣ್ಣುಗಳನ್ನು ತಮಿಳುನಾಡು, ಕೇರಳ, ಹೈದರಾಬಾದ್‌ಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಅನಾನಸ್‌ ದೊಡ್ಡ ಪ್ರಮಾಣದಲ್ಲಿ ದೆಹಲಿ ಹಾಗೂ ಇತರೆ ಉತ್ತರ ಭಾರತ ರಾಜ್ಯಗಳಿಗೆ ಪೂರೈಕೆಯಾಗುತ್ತಿತ್ತು. ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದೆ. ಅನಾಸನ್‌ ಹಣ್ಣನ್ನು ಹಾಪ್‌ಕಾಮ್ಸ್‌, ಇತರೆ ಸೂಪರ್‌ ಮಾರ್ಕೆಟ್‌ ಮೂಲಕ ಮಾರಾಟ ವ್ಯವಸ್ಥೆ ಮಾಡಲಾಗಿದ್ದು, ಉತ್ತಮ ಸ್ಪಂದನೆಯಿದೆ ಎಂದು ಹೇಳಿವೆ.

ಸಮಸ್ಯೆ ಪರಿಹಾರವಾಗಿದ್ದು ಹೇಗೆ?: ಲಾಕ್‌ಡೌನ್‌ ಜಾರಿಯಾಗುತ್ತಿದ್ದಂತೆ ಅಕ್ಕಿ, ಬೇಳೆ ಗಿರಣಿಗಳು ಸ್ಥಗಿತಗೊಂಡವು. ಇದರಿಂದ ಪ್ರಮುಖ ಆಹಾರ ಧಾನ್ಯಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು. ಮೊದಲಿಗೆ ಗಿರಣಿಗಳ ಕಾರ್ಯಾರಂಭಕ್ಕೆ ಒತ್ತು ನೀಡಲಾಯಿತು. ಕಾರ್ಮಿಕರಿಗೆ ಪಾಸ್‌ ಒದಗಿಸಿ ಕೆಲಸ ಆರಂಭಿಸಲು ಗಮನ ಹರಿಸಲಾಯಿತು. ಸದ್ಯ ಗಿರಣಿಗಳ ಒಟ್ಟು ಸಾಮರ್ಥಯದ ಶೇ. 40- 50ರಷ್ಟು  ಕೆಲಸ ನಡೆಯುತ್ತಿದೆ ಎಂದು ರಾಜ್ಯ ಅಗತ್ಯ ವಸ್ತುಗಳು ಹಾಗೂ ಪೂರೈಕೆ ಸರಪಳಿ ನಿರ್ವಹಣೆ ನೋಡಲ್‌ ಅಧಕಾರಿ ರಾಜೇಂದ್ರ ಕಟಾರಿಯಾ “ಉದಯವಾಣಿ’ಗೆ ತಿಳಿಸಿದರು.

Advertisement

ಇನ್ನೊಂದೆಡೆ ಆಹಾರ ಸಂಸ್ಕರಣಾ ಘಟಕಗಳ  ಕಾರ್ಯಾರಂಭಕ್ಕೆ ಒತ್ತು ನೀಡಲಾಯಿತು. ಕೋಲಾರ, ಚಿತ್ತೂರು, ಕೃಷ್ಣಗಿರಿ ಇತರೆಡೆ ಆಹಾರ ಸಂಸ್ಕರಣಾ
ಘಟಕ ಕಾರ್ಯಾರಂಭಕ್ಕೆ ಪ್ರಯತ್ನ ನಡೆಸಲಾಯಿತು. ಇದರಿಂದಾಗಿ ರೈತರು ಬೆಳೆದ ಹಣ್ಣು, ತರಕಾರಿ ಮಾರಾಟಕ್ಕೆ ಅನುಕೂಲವಾಯಿತು ಎಂದು ವಿವರಿಸಿದರು.

ಲಾಕ್‌ಡೌನ್‌ಗೂ ಮೊದಲಿನ ಸಂದರ್ಭಕ್ಕೆ ಹೋಲಿಸಿದರೆ ಸದ್ಯ ಶೇ. 80ರಷ್ಟು ಹೆಚ್ಚುವರಿಯಾಗಿ ಆಹಾರಧಾನ್ಯ, ಬೇಳೆಕಾಳು, ಹಣ್ಣು, ತರಕಾರಿ ಪೂರೈಕೆಯಾಗುತ್ತಿದೆ. ಇದರಿಂದಾಗಿ ರಾಜ್ಯದ ಯಾವ ಭಾಗದಲ್ಲೂ ಅಗತ್ಯ ವಸ್ತು ಪೂರೈಕೆಯಲ್ಲಿ ವ್ಯತ್ಯಯವಾದ ಬಗ್ಗೆ ಒಂದೂ ದೂರು ಇಲ್ಲ. ಜನರು ಹೆಚ್ಚಿನ ಪ್ರಮಾಣದಲ್ಲಿ ಹಣ್ಣು, ತರಕಾರಿ ಸೇವಿಸುವ ಮೂಲಕ  ರೈತರಿಗೆ ನೆರವಾಗುವ ಜತೆಗೆ ತಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವತ್ತ ಚಿಂತಿಸಬೇಕು.
ರಾಜೇಂದ್ರ ಕಟಾರಿಯಾ, ರಾಜ್ಯ ಅಗತ್ಯ ವಸ್ತುಗಳು ಹಾಗೂ ಪೂರೈಕೆ ಸರಪಳಿ ನಿರ್ವಹಣೆ ನೋಡಲ್‌ ಅಧಿಕಾರಿ

 ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next